ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಕೊಪ್ಪಳ ಜಿಲ್ಲಾ ಪಂಚಾಯಿತಿಗೆ ಎಸ್. ರಾಜಾರಾಂ ಮತ್ತೆ ಸಿಇಓ

Parashurama
Updated On : 10 Feb 2013, 11:26 am

ಕೊಪ್ಪಳ: ಇಲ್ಲಿಯ ಜಿಲ್ಲಾ ಪಂಚಾಯ್ತಿ ಸಿಇಓ ಹುದ್ದೆಯಲ್ಲಿದ್ದ ಎಸ್. ರಾಜಾರಾಂ ಅವರನ್ನು ವರ್ಗಾವಣೆ ಮಾಡಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ ತಡೆಯಾಜ್ಞೆ ನೀಡಿದೆ. ಹೀಗಾಗಿ ಜಿಪಂ ಸಿಇಓ ಆಗಿ ರಾಜಾರಾಂ ಅವರೇ ಮುಂದುವರಿಯುತ್ತಿದ್ದಾರೆ. ಇದರಿಂದ ಸರ್ಕಾರದ ವರ್ಗಾವಣೆ ಆದೇಶದಂತೆ ಅಧಿಕಾರ ವಹಿಸಿಕೊಂಡಿದ್ದ ಡಿ.ಕೆ. ರವಿ ಅವರು ಆತಂಕಗೊಂಡಿದ್ದು, ತಡೆಯಾಜ್ಞೆ ತೆರವು ಮಾಡಿಸಲು ಯತ್ನ ನಡೆಸಿದ್ದಾರೆ.
ತಮಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದ್ದರಿಂದ ತೊಂದರೆಯಾಗಿದೆ. ನಿಯಮಾನುಸಾರ ವರ್ಗಾವಣೆ ಮಾಡುವ ಮುನ್ನವೇ ಹುದ್ದೆ ನೀಡಬೇಕಿತ್ತು. ಹೀಗಾಗಿ ಇದೊಂದು ರಾಜಕೀಯ ಪ್ರೇರಿತ ವರ್ಗಾವಣೆಯಾಗಿದ್ದು, ನನಗೆ ಕೆಲಸ ಮಾಡಲು ತೊಂದರೆಯಾಗಿದೆ. ನನಗೆ ಅವಕಾಶ ನೀಡಿ ಎಂದು ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ)ಕ್ಕೆ ವರ್ಗವಾಗಿದ್ದ ಸಿಇಓ ರಾಜಾರಾಂ ಮನವಿ ಮಾಡಿದ್ದರು.
ಮನವಿಯನ್ನು ಪುರಸ್ಕರಿಸಿರುವ ಕೆಎಟಿ ಸಕಾರಣ ಇಲ್ಲದೆ ವರ್ಗಾವಣೆ ಮಾಡಿರುವುದು ಹಾಗೂ ವರ್ಗವಾಗಿರುವವರಿಗೆ ಹುದ್ದೆ ನೀಡದೇ ಇರುವುದರಿಂದ ಸರ್ಕಾರದ ಆದೇಶ ನ್ಯಾಯ ಸಮ್ಮತವಾಗಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಇದರ ಪ್ರತಿಯೊಂದಿಗೆ ಈಗ ರಾಜಾರಾಂ ಮತ್ತೆ ಕೊಪ್ಪಳ ಜಿಪಂ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರಿಂದ ಸಹಜವಾಗಿಯೇ ಬಂದ ದಾರಿಗೆ ಸುಂಕ ಇಲ್ಲ ಎಂದು ಡಿ.ಕೆ. ರವಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ತಮಗೆ ಅವಕಾಶ ನೀಡಿ ಎಂದು ಸರ್ಕಾರ ಹಾಗೂ ಕೆಎಟಿ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶೀತಲ ಸಮರ: ಜಿಪಂನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ನಡೆದಿರುವ ಶೀತಲ ಸಮರದಿಂದಲೇ ಸಿಇಓ ರಾಜಾರಾಂ ವರ್ಗಾವಣೆಯಾಗಿದ್ದರು. ಈಗ ಅದು ಕೆಎಟಿ ಆದೇಶದಿಂದ ರದ್ದಾಗಿದ್ದು, ಜನಪ್ರತಿನಿಧಿಗಳಿಗೆ ಹಿನ್ನಡೆಯಾಗಿದೆ.
ಹರಸಾಹಸ ಪಟ್ಟು ಸಿಇಓ ಅವರನ್ನು ಎತ್ತಂಗಡಿ ಮಾಡಿದ್ದರೂ ಕೆಎಟಿ ಆದೇಶದಿಂದ ಹಿನ್ನಡೆ ಅನುಭವಿಸುವಂತಾಗಿದೆ. ಇಲ್ಲಿವರೆಗೆ ಇದ್ದ ಶೀತಲ ಸಮರ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಇನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ಮಧ್ಯದ ವಿವೇಚನಾ ನಿಧಿ ಬಳಕೆ ವಿವಾದ ಮುಖ್ಯಮಂತ್ರಿ ಬಳಿಗೂ ಹೋಗಿರುವುದು ಜಗಜ್ಜಾಹೀರು. ಸಿಇಓ ರಾಜರಾಂ ಅನುದಾನ ಬಳಕೆಗೆ ಕೊಕ್ಕೆ ಹಾಕಿದ್ದಾರೆ ಎಂದು ಹಾಲಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಬಹಿರಂಗವಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ ತಮಗೂ ಸಿಇಓ ರಾಜಾರಾಂ ಅವರಿಗೂ ಸರಿ ಇಲ್ಲ ಎಂದು ಸಾರಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments