ಶೆಟ್ರಿಂದ್ಲೇ ತಾಲೂಕಾದ ಕುಕನೂರು
ಕುಕನೂರು: ಸತತ 11 ವರ್ಷಗಳ ಈ ಭಾಗದ ಹೋರಾಟಗಾರರ ಬುದ್ಧಿಜೀವಿಗಳ, ಸಾಹಿತಿಗಳ, ವರ್ತಕರ, ರಾಜಕಾರಣಿಗಳ ಅವಿರತ ಪರಿಶ್ರಮ, 42 ದಿನಗಳ ಪ್ರತಿಭಟನೆ, ರಾಸ್ತಾ ರೋಕೋ, ಉಪವಾಸ ಸತ್ಯಾಗ್ರಹದಿಂದಾಗಿ ಕುಕನೂರಿಗೆ ತಾಲೂಕು ಆಗುವ ಭಾಗ್ಯ ದೊರೆತಿದೆ.
ಕುಕನೂರು ತಾಲೂಕು ಹೋರಾಟದ ರೂಪರೇಷೆ 2002ರಲ್ಲಿ ಪ್ರಾರಂಭವಾಯಿತು. ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ತದನಂತರ ರಾಜಕೀಯ ಬದಲಾವಣೆಯಾದಂತೆಲ್ಲ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪ್ರಯತ್ನದಿಂದ ಕುಕನೂರನ್ನು ತಾಲೂಕನ್ನಾಗಿಸುವ ಮೂಲಕ ಈ ಭಾಗದ ಬಹುದಿನದ ಕನಸು ನನಸಾಗಿದೆ. ಕೊನೆಗೂ ಕುಕನೂರು ತಾಲೂಕು ಹೋರಾಟ ಸಮಿತಿಗೆ ಜಯ ದೊರಕಿದೆ.
ಜಗದೀಶ ಶೆಟ್ಟರ್ 2002ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ನೇರವಾಗಿ ಕುಕನೂರು ತಾಲೂಕು ಹೋರಾಟ ನಡೆಯುತ್ತಿದ್ದ ಕುಕನೂರಿನ ನಾಡ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಹೋರಾಟಗಾರರನ್ನು ಬೆಂಬಲಿಸಿದ್ದರು. ಅಲ್ಲದೇ, ಲಿಖಿತ ರೂಪದ ಹೇಳಿಕೆ ನೀಡಿ ಶೀಘ್ರ ಕುಕನೂರು ತಾಲೂಕು ರಚಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದ್ದರು.
ಕಾಕತಾಳೀಯವೋ ಏನೋ ಎನ್ನುವಂತೆ ಸ್ವತಃ ಜಗದೀಶ ಶೆಟ್ಟರ್ ಅವರೇ ಪ್ರಸಕ್ತ ಸಾಲಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಮೂಲಕ ತಾವೇ ಕುಕನೂರು ತಾಲೂಕನ್ನಾಗಿಸಿ ಬಜೆಟ್‌ನಲ್ಲಿ ಘೋಷಿಸುವ ಮೂಲಕ ಸಮಯ ಪ್ರಜ್ಞೆ ಹಾಗೂ ಪಾರದರ್ಶಕತೆ ಮೆರದಿದ್ದಾರೆ ಎನ್ನುತ್ತಾರೆ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಭಜಂತ್ರಿ.
ವ್ಯಾಪ್ತಿ: ಕುಕನೂರು ಮಂಗಳೂರು, ತಳಕಲ್ಲ ಯರೆಹಂಚಿನಾಳ, ಕಲ್ಲೂರು, ಇಟಗಿ, ಬೆಣಕಲ್ಲ, ಹಿರೇಬೀಡ್ನಾಳ, ರಾಜೂರು, ಇಟಗಿ, ಮಂಡ್ಲಿಗೇರಿ, ಬಳಗೇರಿ, ಶಿರೂರು ಸೇರಿದಂತೆ 13 ಗ್ರಾಪಂನ 66 ಹಳ್ಳಿಗಳನ್ನು ಒಳಗೊಂಡಿದೆ. ಆಗಿನ ಜಿಪಂ ಸದಸ್ಯರಾದ ರಾಮಣ್ಣ ಭಜಂತ್ರಿ, ಶಿವಶಂಕರರಾವ ದೇಸಾಯಿ, ಶರಣಪ್ಪಗೌಡ ಪಾಟೀಲರು ಹೋರಾಟದಲ್ಲಿ ತೊಡಗಿದ್ದರು.
ಮನವಿ: ಕುಕನೂರು ತಾಲೂಕು ರಚನೆಗೆ ಸೂಕ್ತ ಪ್ರದೇಶವಾಗಿದೆ. ಊರು ಪರ ಊರಿನಿಂದ ಆಗಮಿಸುವ ಸಾರ್ವಜನಿಕರು ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಅಂಗವಿಕಲ ಮಾಶಾಸನ ಹೀಗೆ ಪ್ರತಿಯೊಂದಕ್ಕೂ ಯಲಬುರ್ಗಾ ತಹಸೀಲ್ದಾರ್ ಹೋಗಿ, ಬರಬೇಕೆಂದರೆ ಕನಿಷ್ಠ ರು. 100 ವೆಚ್ಚ ತಗಲುತ್ತದೆ.
ಕುಕನೂರಿನಲ್ಲಿ ಗ್ರಾನೈಟ್ ಉದ್ಯಮವಿದೆ. ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ವ್ಯಾಪಾರ ವಹಿವಾಟು ಆಗುತ್ತದೆ. ಇಲ್ಲಿ ಎಪಿಎಂಸಿ, ಕೃಷಿ ಪತ್ತಿನ ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಅಂಚೆ ಕಚೇರಿ, ನಾಡ ತಹಸೀಲ ಕಾರ್ಯಾಲಯ, 2 ಡಿಗ್ರಿ ಕಾಲೇಜು, ದೇಶ ಪ್ರೇಮಕ್ಕೆ ಹೆಸರುವಾಸಿಯಾದ ವಿದ್ಯಾನಂದ ಗುರುಕುಲ ಕಾಲೇಜು ಇದೆ. ಜವಾಹರ ನವೋದಯ ವಿದ್ಯಾಲಯವಿದೆ.ಅಗ್ನಿಶಾಮಕ ದಳ, ಕೆಎಲ್‌ಇ ಶಿಕ್ಷಣ ಸಂಸ್ಥೆಯಿದೆ. ಸರ್ಕಾರಿ ಐಟಿಐ ಕಾಲೇಜು, ಐತಿಹಾಸಿಕ ಶ್ರೀ ಮಹಾಮಾಯ ದೇವಸ್ಥಾನವಿದ್ದು ಇಲ್ಲಿ ಅಗ್ರಹಾರ, ಸಂಸ್ಕೃತ ಪಾಠ ಶಾಲೆ ಮತ್ತು ಈ ಭಾಗದ ಕಲ್ಯಾಣ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತೆಂದು ಐತಿಹ್ಯವಿದೆ. ಮುಖ್ಯವಾಗಿ ಈ ಭಾಗ ಕೃಷಿ ಪ್ರಧಾನವಾಗಿದ್ದು, ರೈತರ ಅನುಕೂಲಕ್ಕಾಗಿ ತಾಲೂಕು ಅಗತ್ಯ ಎನ್ನುವ ಅಂಶವನ್ನು ಮನವಿಯಲ್ಲಿ ದಾಖಲಿಸುವ ಮೂಲಕ ಹೋರಾಟ ಸಮಿತಿ ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.