ಗವಿಸಿದ್ಧೇಶ್ವರ ಸೇವೆ, ಪ್ರಸಾದ ಬಡಿಸಲು ಸಾಲು
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 10
ಪ್ರಸಾದ ಸ್ವೀಕರಿಸಲು ಕ್ಯೂ ಇರುವುದು ಸಾಮಾನ್ಯ. ಆದರೆ, ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆ ಅಂಗವಾಗಿ ಅಮಾವಾಸ್ಯೆಯಂದು ಮಹಾಪ್ರಸಾದ ಬಡಿಸಲು ಕ್ಯೂ ನಿಲ್ಲಬೇಕು. ಮಹಾದಾಸೋಹದಲ್ಲಿ ಪ್ರಸಾದ ಬಡಿಸುವ ಸೇವೆ ಮಾಡಬೇಕೆಂದರೂ ಅರ್ಧ ಗಂಟೆ ಕಾಯಬೇಕು. ಇದು ಗವಿಮಠ ಜಾತ್ರೆ ವಿಶೇಷ
ಹೌದು, ಮರಿ ಜಾತ್ರೆ ಎಂದೇ ಕರೆಯುವ ಅಮಾವಾಸ್ಯೆಯ ಮಹಾಪ್ರಸಾದದ ಕೊನೆಯ ದಿನ ಈ ಸಾರಿ ಭಾನುವಾರ ಬಂದಿದ್ದರಿಂದ ವಿಪರೀತ ಗದ್ದಲಕ್ಕೆ ಕಾರಣವಾಯಿತು. ದಿನಪೂರ್ತಿ ಸಾಲುತ್ತದೆ ಎಂದು ರಾತ್ರಿ ಮಾಡಿಟ್ಟಿದ್ದ ಐದು ಕೊಪ್ಪರಿಗೆ ಗೋಧಿ ಹುಗ್ಗಿ ಮಧ್ಯಾಹ್ನದ ವೇಳೆಗೆ ಖಾಲಿಯಾಯಿತು. ತಕ್ಷಣ ಎಚ್ಚೆತ್ತ ದಾಸೋಹ ಉಸ್ತುವಾರಿ ಸಮಿತಿ ಸಂಜೆ ವೇಳೆಗೆ ಮತ್ತೆರಡು ಕೊಪ್ಪರಿಗೆ ಗೋಧಿ ಹುಗ್ಗಿ ಸಿದ್ಧಪಡಿಸಿತು. ಅಲ್ಲದೆ, ಇನ್ನೊಂದು ಕೊಪ್ಪರಿಗೆ ಹುಗ್ಗಿ ರಾತ್ರಿಯ ವೇಳೆಗೆ ತಯಾರಿಸಲಾಯಿತು.
ಭಕ್ತ ಸಾಗರ ಹರಿದು ಬಂದಿದ್ದರಿಂದ ನಿಯಂತ್ರಿಸಲು ಹೆಣಗಾಡಬೇಕಾಯಿತು. ಅದರಲ್ಲೂ ಎಷ್ಟೇ ಬಂದೋಬಸ್ತ್ ಒದಗಿಸಿದರೂ ನಿರೀಕ್ಷೆ ಮೀರಿ ಭಕ್ತರು ಆಗಮಿಸಿದ್ದರಿಂದ ಕೆಲಕಾಲ ನಿಯಂತ್ರಣ ಕಷ್ಟವಾಯಿತು. ರಾತ್ರಿಯಾದರೂ ಮಹಾಪ್ರಸಾದಕ್ಕೆ ಬರುವವರ ಸಂಖ್ಯೆ ತಗ್ಗುವ ಬದಲು ಹೆಚ್ಚುತ್ತಲೇ ಇತ್ತು.
ಸೇವೆಗೂ ಕ್ಯೂ: ಒಂದು ಕಡೆ ಈ ರೀತಿ ಪ್ರಸಾದಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದರೆ ಮತ್ತೊಂದು ಕಡೆ ಸೇವೆ ಸಲ್ಲಿಸಲು ಗ್ರಾಮೀಣ ಪ್ರದೇಶದಲ್ಲಿ ಲಾರಿ, ಟ್ರ್ಯಾಕ್ಟರ್ನಲ್ಲಿ ಜನರು ಆಗಮಿಸುತ್ತಿದ್ದರು. ಇನ್ನು ಸ್ಥಳೀಯರೂ ಅಪಾರ ಸಂಖ್ಯೆಯಲ್ಲಿ ಬಂದಿದ್ದರಿಂದ ಪ್ರಸಾದ ಬಡಿಸುವುದಕ್ಕೂ ಕ್ಯೂ ನಿಂತಿದ್ದರು. ಅರ್ಧ ಗಂಟೆ ಕಾದ ಮೇಲೆಯೇ ಮಹಾಪ್ರಸಾದ ಬಡಿಸುವ ಯೋಗ ದೊರೆಯುತ್ತಿತ್ತು.
ಪ್ರತಿವರ್ಷ ಗೋಧಿ ಹುಗ್ಗಿ ಉಸ್ತುವಾರಿಯನ್ನು ಕಾತರಕಿ, ಗುಡ್ಲಾನೂರು, ಹಾದರಮಗ್ಗಿ, ಮಂಗಳೂರು, ಬೇಳೂರು ಹಾಗೂ ಮೈನಳ್ಳಿ ಗ್ರಾಮಸ್ಥರು ಹೊತ್ತಿರುತ್ತಾರೆ. ಈ ಗ್ರಾಮಗಳಿಂದ ಸುಮಾರು 300ಕ್ಕೂ ಅಧಿಕ ಸೇವಕರು ಆಗಮಿಸಿದ್ದರು. ಸ್ಥಳೀಯರೂ ಅಪಾರ ಸಂಖ್ಯೆಯಲ್ಲಿ ಬಂದಿದ್ದರಿಂದ ಅನೇಕರು ಕೆಲಸಕ್ಕಾಗಿ ಕಾಯಬೇಕಾಯಿತು. ಅದರಲ್ಲೂ ತರಕಾರಿ ಹೆಚ್ಚಿಕೊಡಲು ನೂರಾರು ಸಂಖ್ಯೆಯ ಮಹಿಳೆಯರು ಬಂದಿದ್ದರು. ಕೆಲವರಂತೂ ಕಾದು ಕಾದು ಸುಸ್ತಾಗಿ ನಮಗೆ ಈ ಸಾರಿ ಸೇವೆ ಮಾಡುವ ಯೋಗ ಇಲ್ಲ. ಮುಂದಿನ ಸಾರಿ ಬೇಗನೆ ಬಂದರಾಯ್ತು ಎಂದು ಮರಳಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಕೊಪ್ಪಳ ಜೈನ ಸಮುದಾಯ, ಕಿರ್ಲೋಸ್ಕರ್ ಸಿಬ್ಬಂದಿ, ಶಾರದಮ್ಮಾ ಕೊತಬಾಳ ಕಾಲೇಜು, ಶ್ರೀಗವಿಸಿದ್ಧೇಶ್ವರ ಪದವಿ, ಪದವಿಪೂರ್ವ, ಬಿಇಡಿ, ಬಿಬಿಎಂಬಿ, ಡಿಇಡಿ ವಿದ್ಯಾರ್ಥಿಗಳು, ಸ್ವಯಂ ಸೇವಕರು ಪ್ರಸಾದ ಬಡಿಸಲು ನೆರವಾದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.