ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಪಾಲಕರಿದ್ದೂ ಇಲ್ಲದಂತಪ್ಪ,ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ರಪ್ಪ

Parashurama
Updated On : 11 Feb 2013, 12:31 pm

ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 10
ನಮ್ಮ ಅಪ್ಪ ಅಮ್ಮ ಇಬ್ಬರೂ ದುಡಿಯಲು ಗುಳೆ ಹೋಗಿದ್ದಾರೆ. ಈಗ ಹಾಸ್ಟೆಲ್ ಕೂಡಾ ಬಂದಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದರಿಂದ ಅವರಿವರ ಮನೆಯಲ್ಲಿ ಊಟ ಮಾಡಬೇಕಾದ ಸ್ಥಿತಿ ಬಂದಿದೆ. ಅವರು ಕರೆದರೆ ಊಟ ಮಾಡುತ್ತೇನೆ. ಇಲ್ಲದಿದ್ದರೆ ಉಪವಾಸ.
- ರಾಘವೇಂದ್ರ(ನಾಲ್ಕನೇ ತರಗತಿ)
ಅಜ್ಜಿಯೊಬ್ಬಳೇ ಮನೆಯಲ್ಲಿದ್ದಾಳೆ. ಆಕೆಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಆಗುವುದಿಲ್ಲ. ಆಕೆಯ ಆರೋಗ್ಯವೂ ಸರಿಯಾಗಿಲ್ಲ. ಇನ್ನು ಮಾಡಿದ ಸಾಲ ತೀರಿಸಲೆಂದು ಅಪ್ಪ, ಅಮ್ಮ ಗುಳೆ ಹೋಗಿದ್ದಾರೆ. ಸ್ನೇಹಿತ ರಮೇಶನ ಮನೆಯೇ ಆಸರೆ. ಆದರೆ, ನಿತ್ಯವೂ ಅವರ ಮನೆಗೆ ಹೋಗುವುದು ಬೇಸರವಾಗುತ್ತದೆ. ಕೆಲವು ಸಾರಿ ಶಾಲೆಯಲ್ಲಿಯೇ ಉಪವಾಸಮಲಗುತ್ತೇನೆ.
- ಸುನೀಲ್ ಜಾತೋಟ
(ಐದನೇ ತರಗತಿ)
ಅಪ್ಪ, ಅಮ್ಮ ಇಬ್ಬರೂ ದುಡಿಯಲು ಹೋಗಿದ್ದಾರೆ. ಈಗ ಮನೆಯಲ್ಲಿ ಯಾರೂ ಇಲ್ಲ. ಇದುವರೆಗೂ ಇದ್ದ ವಸತಿ ನಿಲಯ ಏಕಾಏಕಿ ಬಂದಾಗಿದೆ. ನಾನು ಅವರಿವರ ಮನೆಯಲ್ಲಿ ನೀಡುವ ಅನ್ನ ಉಂಡು ಬದುಕಬೇಕು. ಯಾರ ಮನೆಯಲ್ಲಿರಬೇಕು ಎಂದು ದಿಕ್ಕು ತೋಚದಾಗಿದೆ. ರಾತ್ರಿ ಸಿಕ್ಕಾಪಟ್ಟೆ ಭಯವಾಗುತ್ತದೆ.
- ಪ್ರಮೀಳಾ(ಐದನೇ ತರಗತಿ ವಿದ್ಯಾರ್ಥಿನಿ)
ನಮ್ಮ ಅಪ್ಪ ಅಮ್ಮ ದುಡಿಯಲು ಹೋದ ಮೇಲೆ ಹಾಸ್ಟೆಲ್‌ನಲ್ಲಿ ಇದ್ದೆವು. ಆದರೆ, ಅದು ಬಂದಾಗಿದ್ದರಿಂದ ನಮಗೆ ದಿಕ್ಕೇ ತಿಳಿಯದಂತಾಗಿದೆ. ಟ್ಯೂಶನ್ ಹೇಳೋ ಗುರುಗಳನ್ನೇ ನಂಬಿಕೊಂಡಿದ್ದೀವೆ. ಎಲ್ಲರನ್ನೂ ಅವರು ತಾನೆ ಹೇಗೆ ಸಾಕುತ್ತಾರೆ?
- ರಮೇಶ ಲಂಬಾಣಿ(ನಾಲ್ಕನೇ ತರಗತಿ)
ಕೈಗಾರಿಕೆಗೆ ಭೂಮಿ ಮಾರಿ ಬೀದಿ ಪಾಲಾಗಿರುವ ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ ನಿವಾಸಿಗಳು ಜೀವನ ಸಾಗಿಸಲು ಗುಳೆ ಹೋಗಿದ್ದರಿಂದ ಬೀದಿಪಾಲಾಗಿರುವ ಮಕ್ಕಳ ವ್ಯಥೆ ಇದು. ಗುಳೆ ಹೋದ ಮಕ್ಕಳಿಗಾಗಿಯೇ ತೆರೆಯಲಾಗಿದ್ದ ಋತುಮಾನ ಸೇತುಬಂಧ ವಸತಿ ಶಾಲೆ ಬಂದಾಗಿದ್ದರಿಂದ ಈ ಮಕ್ಕಳು ಅಕ್ಷರಶಃ ಬೀದಿಗೆ ಬಂದಿದ್ದಾರೆ.
'ಅಪ್ಪ, ಅಮ್ಮ ಇದ್ರೂ ಇಲ್ಲದಂತಪ್ಪ, ನಮಗೆ ಅನ್ನ ಹಾಕಿ ಪುಣ್ಯ ಕಟ್ಟಿಕೊಳ್ಳಿ' ಎನ್ನುವ ಈ ಮಕ್ಕಳ ಕತೆ ಕೇಳಿದರೆ ಕರುಳು ಚುರ್ ಎನ್ನುತ್ತದೆ.
ಹೌದು, ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದಲ್ಲಿ ಶೇ. 80ರಷ್ಟು ಕುಟುಂಬಗಳು ಗುಳೆ ಹೋಗಿವೆ. ಬಹುತೇಕರು ಮನೆಗೆ ಬೀಗ ಹಾಕಿದ್ದರೆ, ಇನ್ನೂ ಕೆಲವರು ಮನೆಯಲ್ಲಿ ಹಿರಿಯಜ್ಜಿಯನ್ನು ಬಿಟ್ಟು ಹೋಗಿದ್ದಾರೆ. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 127 ವಿದ್ಯಾರ್ಥಿಗಳು ಸೇತುಬಂಧ ಶಾಲೆಯಲ್ಲಿ ಆಶ್ರಯ ಪಡೆದಿದ್ದರು.
ಸ್ಕೀಂ ಬಂದಾಗಿದೆ ಎಂದು ಸೇತುಬಂಧ ಶಾಲೆಯನ್ನು ಬಂದ್ ಮಾಡಿದ್ದಾರೆ. ಹೀಗಾಗಿ, ಈ 127 ಮಕ್ಕಳಿಗೆ ಹಗಲು ವೇಳೆ ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಸಿಗುತ್ತದೆ. ಇನ್ನು ಬೆಳಗ್ಗೆ ಹಾಗೂ ರಾತ್ರಿ ಇವರು ಅವರಿವರ ಮನೆಯನ್ನೇ ನೆಚ್ಚಿಕೊಂಡಿದ್ದಾರೆ.
ಕೆಲವರು ಸ್ನೇಹಿತರ ಬಳಿ, ಇನ್ನು ಕೆಲವರು ಸಂಬಂಧಿಕರ ಬಳಿ ಆಶ್ರಯ ಪಡೆದಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳಂತೂ ಯಾರಾದರೂ ಕರೆದರೆ ಊಟ ಮಾಡುತ್ತಾರೆ ಇಲ್ಲಾಂದ್ರೆ ಉಪವಾಸ ಇರುತ್ತಾರೆ.
- ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments