ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಹಿರೇವಂಕಲಕುಂಟಾ ತಾಲೂಕು ರಚನೆಗೆ ಆಗ್ರಹ

Parashurama
Updated On : 14 Feb 2013, 12:39 pm

ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. ೊ13
ಯಲಬುರ್ಗಾ ತಾಲೂಕಿನಲ್ಲಿರುವ ಹಿರೇವಂಕಲಕುಂಟಾವನ್ನು ಪ್ರತ್ಯೇಕ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಹಿರೇವಂಕಲಕುಂಟಾ ತಾಲೂಕು ಹೋರಾಟ ಸಮಿತಿ ಬುಧವಾರ ಕೊಪ್ಪಳ ನಗರದ  ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾರತಮ್ಯ: ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಂಡಿಸಿದ 2013ರ ಬಜೆಟ್‌ನಲ್ಲಿ 43 ತಾಲೂಕುಗಳನ್ನು ಘೋಷಣೆ ಮಾಡಿದ್ದಾರೆ. ಆದರೆ, ಕೊಪ್ಪಳ ಜಿಲ್ಲೆಯ ಹಿರೇವಂಕಲಕುಂಟಾವನ್ನು ತಾಲೂಕು ಮಾಡದೇ ಕಡೆಗಣಿಸಿದ್ದಾರೆ. ಇದು ತಮಗೆ ತೀವ್ರ ನಿರಾಶೆ ಮೂಡಿಸಿದ್ದು, ಕೂಡಲೇ ತಾಲೂಕು ಘೋಷಣೆ ಮಾಡಲು ಒತ್ತಾಯಿಸಿದರು.
40 ಕಿ.ಮೀ. ಅಂತರ: ಜಿಲ್ಲಾಧಿಕಾರಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿರೇವಂಕಲಕುಂಟಾ ತಾಲೂಕು ಹೋರಾಟ ಸಮಿತಿ ಕಾರ್ಯಕರ್ತರು, ಯಲಬುರ್ಗಾದಿಂದ  ಹಿರೇವಂಕಲಕುಂಟಾ ಸುಮಾರು 40 ಕಿಲೋ ಮೀಟರ್ ದೂರವಿದೆ. ಯಾವುದೇ ಕಾರ್ಯಕ್ಕೂ ಯಲಬುರ್ಗಾಕ್ಕೆ ತೆರಳಬೇಕಾಗುತ್ತದೆ. ಹಾಗಾಗಿ ಹಿರೇವಂಕಲಕುಂಟಾವನ್ನು ಪ್ರತ್ಯೇಕ ತಾಲೂಕು ಮಾಡಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ತಾಲೂಕಾಗಲು ಯೋಗ್ಯ: ಪಟ್ಟಣದಲ್ಲಿ ರಾಷ್ಟೀಯ ಬ್ಯಾಂಕ್‌ಗಳಿವೆ. ಪದವಿ ಕಾಲೇಜುಗಳಿವೆ, ವಿವಿಧ ಸಂಘ-ಸಂಸ್ಥೆಗಳಿವೆ. ಕೆಇಬಿ ಕಚೇರಿ, ದೂರವಾಣಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಎಲ್ಲ ಸೌಲಭ್ಯವು ಹಿರೇವಂಕಲಕುಂಟಾದಲ್ಲಿ ಲಭ್ಯವಿದೆ.
ಹೀಗಾಗಿ ತಾಲೂಕು ಕ್ಷೇತ್ರವಾಗಲು ಹಿರೇವಂಕಲಕುಂಟಾ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಸಿಎಂ ತಮ್ಮ ಭಾಗಕ್ಕೆ ತುಂಬಾ ಅನ್ಯಾಯ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಚು: ಹಿರೇವಂಕಲಕುಂಟಾ ಕಂದಾಯ ಹೋಬಳಿಯ ಗಾಣದಾಳ, ತಾಳಕೇರಿ, ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿಯನ್ನು ಕನಕಗಿರಿ ಕ್ಷೇತ್ರದ ವ್ಯಾಪ್ತಿಗೆ ಸೇರಿಸುವ ಹುನ್ನಾರ ನಡೆಯುತ್ತಿದೆ. ಅಲ್ಲದೇ, ಮಾಟಲದಿನ್ನಿ, ಹಿರೇಹರಳ್ಳಿ, ಗ್ರಾಮ ಪಂಚಾಯತಿಗಳನ್ನು ಕುಷ್ಟಗಿ ವ್ಯಾಪ್ತಿಗೆ ಸೇರಿಸಲು ಸಂಚು ನಡೆಯುತ್ತಿದೆ ಎಂದು ಆರೋಪ ಮಾಡಿ ಅಸಮಧಾನ ವ್ಯಕ್ತಪಡಿಸಿದರು.
ಹಿರೇವಂಕಲಕುಂಟಾ ತಾಲೂಕು ಹೋರಾಟ ಸಮಿತಿ ಮುಖಂಡರಾದ ರಂಗಣ್ಣ ಕುಲಕರ್ಣಿ, ಅರವಿಂದಗೌಡ ಪಾಟೀಲ್, ಮಹಾದೇವಪ್ಪ ಮೂಲಿಮನಿ, ಗಾಳೆಪ್ಪ, ವೀರೇಶ, ಮಂಜುನಾಥ ಬಂಗಾರಿ, ಶರಣಯ್ಯ, ಶಾಮಿದ್‌ಸಾಬ್ ಗುಬ್ಬಿ, ಲಂಕನಗೌಡ, ಮಾನಪ್ಪ, ಮಂಜುನಾಥ, ಶರಣಬಸಪ್ಪ, ಮಂಜುನಾಥ ಪಾಟೀಲ್, ಹಿರೇವಂಕಲಕುಂಟಾ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments