ಆಧಾರ್ ಕಾರ್ಡ್ಗೆ ಮುಗಿಬಿದ್ದ ಜನ
ಕುಷ್ಟಗಿ: ಹೊಸ ಗ್ಯಾಸ್ ಸಿಲಿಂಡರ್, ಬ್ಯಾಂಕ್ ಅಕೌಂಟ್ ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದ ಪರಿಣಾಮ ಆಧಾರ್ ಕಾರ್ಡ್ ನೋಂದಣಿಗೆ ತಾಲೂಕಿನ ಜನತೆ ಮುಗಿಬಿದ್ದಿದ್ದಾರೆ.
ಇಲ್ಲಿನ ಅಂಚೆ ಕಚೇರಿಯಲ್ಲಿ ತೆರೆದ ಆಧಾರ್ ನೋಂದಣಿ ಕೇಂದ್ರಕ್ಕೆ ನಿತ್ಯ ನೋಂದಣಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೂಡಲೇ ಇನ್ನೊಂದು ಕೇಂದ್ರ ತೆರೆಯಬೇಕೆಂದು ಜನತೆ ತಾಲೂಕಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.
ತಾಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ, ಆಧಾರ್ ಕಾರ್ಡ್ ನೋಂದಣಿಗೆ ಈ ಕೇಂದ್ರಕ್ಕೆ ಆಗಮಿಸಬೇಕಿದೆ. ಹೀಗಾಗಿ, ಗ್ರಾಮೀಣ ಪ್ರದೇಶದ ಜನತೆ ಬೆಳಗ್ಗೆ 6ಕ್ಕೆ ಬಂದು ಕೇಂದ್ರದ ಮುಂದೆ ಕಾಯಬೇಕಿದೆ. ಚಿಕ್ಕಮಕ್ಕಳೊಂದಿಗೆ ನೋಂದಣಿಗೆ ಕಾಯುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ತಾಲೂಕಿನ ಹಿರೇಮನ್ನಾಪುರ ರಮೇಶ ನಾಯಕ, ರವಿ ಪಾಟೀಲ್ ಬಿಜಕಲ್ ಹಾಗೂ ನಿಡಶೇಸಿಯ ಮಮತಾ ಕುಲಕರ್ಣಿ ದೂರುತ್ತಾರೆ.
ಕೈಕೊಡುವ ಇಂಟರ್ನೆಟ್
ಆಧಾರ ಕಾರ್ಡ್ ನೋಂದಣಿ ಕೇಂದ್ರಕ್ಕೆ ಅಳವಡಿಸಲಾದ ಕಂಪ್ಯೂಟರ್ ಮತ್ತು ಇಂಟರ್ನೆಟ್ ತೊಂದರೆಯಿಂದ ನೋಂದಣಿ ಕಾರ್ಯ ಸ್ಥಗಿತಗೊಳ್ಳುತ್ತದೆ. ನೆಟ್ ಇದ್ದರೂ ನೋಂದಣಿ ಕಾರ್ಯ ಬಹಳ ನಿಧಾನ. ಹಾಗೊಂದು ವೇಳೆ ವಿದ್ಯುತ್ ಕೈಕೊಟ್ಟರೆ ನೋಂದಣಿ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳುತ್ತದೆ ಎಂದು ಆಧಾರ ಕಾರ್ಡ್ ನೋಂದಣಿ ಕೇಂದ್ರ ಸಿಬ್ಬಂದಿ ಹೇಳುತ್ತಾರೆ.
ಇಡೀ ತಾಲೂಕಿಗೆ ಒಂದೇ ಆಧಾರ ನೋಂದಣಿ ಕೇಂದ್ರವಿದ್ದು, ನಿತ್ಯ ನೋಂದಣಿಗೆ ಬರುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದ್ದರಿಂದ ತಾಲೂಕಾಡಳಿತ ಕೂಡಲೇ ಹೆಚ್ಚುವರಿ ಆಧಾರ ಕಾರ್ಡ್ ನೋಂದಣಿ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನವಲಹಳ್ಳಿಯ ರಾಘವೇಂದ್ರ ಜೋಷಿ, ರಜಿಯಾ ಬೇಗಂ, ಅಹ್ಮದ್ ಹುಸೇನ್, ಫಕೀರಪ್ಪ ಕಟ್ಟಿಹೊಲ ಹಾಗೂ ಶಶಿಕಲಾ ಹಿರೇಮಠ ಒತ್ತಾಯಿಸಿದ್ದಾರೆ.