ನಾಳೆ ಕನ್ನಡ ಸಾಹಿತ್ಯ ಸಮ್ಮೇಳನ
ಕುಷ್ಟಗಿ: ತಾಲೂಕಿನ ಕನ್ನಡ ಸಾಹಿತ್ಯಾಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ನಾಡು ನುಡಿ ಹಬ್ಬವಾದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆದರೆ, ನಿಧಾಗನಗತಿಯಲ್ಲಿ ನಡೆದಿರುವ ಸಿದ್ಧತೆ ಸಾಹಿತ್ಯಾಸ್ತಕರ ಆತಂಕಕ್ಕೆ ಕಾರಣವಾಗಿದೆ.
ವಾರದಿಂದ ನಡೆದಿರುವ ಸಿದ್ಧತೆ ಇನ್ನೂ ವೇದಿಕೆ ನಿರ್ಮಾಣ ಹಂತದಲ್ಲಿದೆ. ಕಳೆದೆರಡು ದಿನಗಳಿಂದ ವೇದಿಕೆ ನಿರ್ಮಾಪಕರೂ ಕಣ್ಮರೆಯಾಗಿದ್ದಾರೆ.
ಸಿಗದ ಬೆಂಬಲ: ದಿನಾಂಕ ಘೋಷಿಸಿದ ಬಳಿಕ ತಿಂಗಳುಗಟ್ಟಲೇ ಸಮ್ಮೇಳನದ ಯಶಸ್ವಿಗಾಗಿ ಹಲವು ಸಭೆಗಳನ್ನು ನಡೆಸಿದ ಕಸಾಪ ತಾಲೂಕಾಧ್ಯಕ್ಷ ಚಂದಪ್ಪ ಹಕ್ಕಿ, ಒಂದಲ್ಲ ಒಂದು ಅಪಸ್ವರ, ತೊಂದರೆ ಎದುರಿಸುತ್ತಿದ್ದಾರೆ. ಜತೆಗೆ ಕಸಾಪ ತಾಲೂಕು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅವರಿಗೆ ಸರಿಯಾದ ಸಾಥ್ ನೀಡಲಿಲ್ಲ ಎಂಬ ಅಪವಾದ ಸಹ ಕೇಳಿ ಬರುತ್ತದೆ.
ಇನ್ನು ತಾಲೂಕಿನ ಹಿರಿಯ ಸಾಹಿತಿಗಳು, ಮಾಜಿ ಕಸಾಪ ಅಧ್ಯಕ್ಷರು-ಪದಾಧಿಕಾರಿಗಳು, ಅಜೀವ ಸದಸ್ಯರಿಗೆ ಸಮ್ಮೇಳನ ಕುರಿತು ಸ್ಪಷ್ಟ ಮಾಹಿತಿ ನೀಡಲಿಲ್ಲ. ಸಲಹೆ-ಸೂಚನೆ ಕೇಳಲಿಲ್ಲ. ಸಮ್ಮೇಳನ ಸಿದ್ಧತೆ ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ತಾಲೂಕಿನ ಅಧಿಕಾರಿಗಳು ಹಾಗೂ ಹಾಲಿ-ಮಾಜಿ ಜನಪ್ರತಿನಿಧಿಗಳ ಜತೆಗೂ ಚರ್ಚಿಸಲಿಲ್ಲ. ಚಂದಪ್ಪ ಹಕ್ಕಿ ತಾವೊಬ್ಬರೇ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಲೇ ಸಮ್ಮೇಳನ ನಡೆಸಲು ಹೊರಟಿದ್ದಾರೆ. ಇನ್ನೂ ಸಮ್ಮೇಳನ ಆಮಂತ್ರಣ ಪತ್ರಿಕೆಯಂತೂ ಅವಾಂತರಗಳಿಂದ ಕೂಡಿದೆ. ಹೀಗಿರುವಾಗ ಈ ಬಾರಿಯ ಕನ್ನಡ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವೇ ಎಂದು ಸಾಹಿತ್ಯಾಭಿಮಾನಿಗಳು ಹಾಗೂ ಕಸಾಪ ಆಜೀವ ಸದಸ್ಯರು ಪ್ರಶ್ನಿಸುತ್ತಾರೆ.
ಸಮ್ಮೇಳನದಲ್ಲಿ ಏನೇನು? ರಾಣಿ ಪದ್ಮಲಾದೇವಿ ಸಭಾಂಗಣದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಹಾಗೂ ಬೆಳ್ಳಿತೆರೆ ಹಿರಿಯ ಕಲಾವಿದ ದಿ. ಎಚ್.ಟಿ. ಅರಸ್ ವೇದಿಕೆಯಲ್ಲಿ ನಡೆಯಲಿರುವ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗುಲಬರ್ಗಾದ ಪ್ರೊ. ವಸಂತ ಕುಷ್ಟಗಿ ಪಾಲ್ಗೊಳ್ಳುವರು. ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಮರೇಗೌಡ ಪಾಟೀಲ ಭಯ್ಯಾಪುರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಪರಷತ್ತಿನ ಧ್ವಜಾರೋಹಣ ಹಾಗೂ ತಾಲೂಕಾಧ್ಯಕ್ಷ ಚಂದಪ್ಪ ಹಕ್ಕಿ ಕನ್ನಡ ಧ್ವಜಾರೋಹಣ ನೆರವೇರಿಸುವರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಪುರಸಭೆ ಅಧ್ಯಕ್ಷೆ ಕಾಳಮ್ಮ ಬಡಿಗೇರ ಹಾಗೂ ತಾಪಂ ಅಧ್ಯಕ್ಷ ಶರಣು ತಳ್ಳಿಕೇರಿ ಉದ್ಘಾಟಿಸುವರು. ಜನಪ್ರತಿನಿಧಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು.
ಉದ್ಘಾಟನೆ: ಬಳ್ಳಾರಿ ವಿಜಯನಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ಮಲ್ಲಿಕಾ ಘಂಟಿ ಸಮ್ಮೇಳನ ಉದ್ಘಾಟಿಸುವರು. ಜಿಪಂ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಚಿರ ಪ್ರಕಾಶ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಸದ ಶಿವರಾಮಗೌಡ ಪುಸ್ತಕ ಮಳಿಗೆ, ಜಿಪಂ ಉಪಾಧ್ಯಕ್ಷೆ ಅನ್ನಪೂರ್ಣಾ ವಾಲ್ಮೀಕಿ ಚಿತ್ರಕಲಾ ಪ್ರದರ್ಶನ ಹಾಗೂ ಶಾಸಕ ಹಾಲಪ್ಪ ಆಚಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸುವರು.
ಗೋಷ್ಠಿಗಳು: 371ನೇ ಕಲಂ(ಜೆ) ಮಸೂದೆ ಜಾರಿ ಕುರಿತು ಚರ್ಚೆ, ಬಳಿಕ ಕೃಷ್ಣಾ ಬಿ ಸ್ಕೀಂ, ಏತ ನೀರಾವರಿ ಯೋಜನೆ ಕುರಿತು ಚರ್ಚೆ, ಅನಂತರ ಮಹಿಳೆಯರ ಮೇಲಿನ ದೌರ್ಜನ್ಯ ಒಂದು ಅವಲೋಕನ ಕುರಿತು ಗೋಷ್ಠಿ, ಬಳಿಕ ರೈತರ ಇಂದಿನ ಸ್ಥಿತಿಗತಿ ಕುರಿತು ಗೋಷ್ಠಿ ನಡೆಯಲಿವೆ. ಬಳಿಕ ಕವಿ ಗೋಷ್ಠಿ ನಡೆಯಲಿದ್ದು, ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ಅಲ್ಲದೇ ಸನ್ಮಾನ, ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಮ್ಮೇಳನ ಸಮಿತಿ ಪ್ರಕಟಣೆ ತಿಳಿಸಿದೆ.