ನಿಲ್ಲದ ಮುಷ್ಕರ: ಪಾಲಕರಲ್ಲಿ ಆತಂಕ
ಕನ್ನಡಪ್ರಭ ವಾರ್ತೆ, ಕುಕನೂರು, ಫೆ. 14
ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ಸಿಬ್ಬಂದಿ ನಡೆಸುತ್ತಿರುವ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಮೊದ ಮೊದಲು ಪಾಲಕರು ಸ್ವ ಇಚ್ಛೆಯಿಂದ ಧರಣಿ ನಿರತರಿಗೆ ಲಿಖಿತ ರೂಪದ ಬೆಂಬಲ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ, ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದರು. ಆದರೆ, ಯಾವಾಗ ಮುಷ್ಕರ ಬೇಗ ಮುಗಿಯುವುದಿಲ್ಲ ಎನ್ನುವುದು ಖಾತ್ರಿಯಾಯಿತೋ ಪಾಲಕರಲ್ಲಿ ಆತಂಕ ಹೆಚ್ಚಾಗತೊಡಗಿತು.
ಸ್ವತಃ ಪಾಲಕರು ಹೇಗಾದರೂ ಮಾಡಿ ಸಿಬ್ಬಂದಿ ಮನವೊಲಿಸಿ ನಮ್ಮ ಮಕ್ಕಳ ಭವಿಷ್ಯ ರೂಪಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
500 ವಿದ್ಯಾರ್ಥಿಗಳು ಅತಂತ್ರ
ಜವಾಹರ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿಯಿಂದ ಪಿಯುಸಿವರೆಗೆ ಅಭ್ಯಾಸ ಮಾಡುತ್ತಿರುವ ಸುಮಾರು 500 ವಿದ್ಯಾರ್ಥಿಗಳು ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಎದುರಿಸಬೇಕಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಿಕ್ಷಣದ ಆವಶ್ಯಕತೆಯೂ ಇದೆ. ಆದರೆ ಸಿಬ್ಬಂದಿ ಮುಷ್ಕರದಿಂದ ಮಕ್ಕಳ ಭವಿಷ್ಯ ಅತಂತ್ರವಾಗಲಿದೆ ಎನ್ನುತ್ತಾರೆ ಪಾಲಕರು.