ವ್ಯಂಗ್ಯಚಿತ್ರ ಪ್ರದರ್ಶನ, ಪ್ರಾತ್ಯಕ್ಷಿತೆ
ಕೊಪ್ಪಳ: ನಗರದ ಬನ್ನಿಕಟ್ಟಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಸಂಘದಿಂದ ಇತ್ತೀಚಿಗೆ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಶಾಲೆ ಮುಖ್ಯಗುರು ಕರಿಬಸಪ್ಪ ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮಹಾಂತೇಶ ಬಳಿಗಾರ, ಆದರ್ಶ ಶಾಲೆಯ ಮುಖ್ಯಗುರು ಮಹಾಂತೇಶ, ಜಿಲ್ಲಾ ಚಿತ್ರಕಲಾ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಕುಲಕರ್ಣಿ ಭಾಗವಹಿಸಿದ್ದರು.
ವ್ಯಂಗ್ಯಚಿತ್ರ ಕಲಾವಿದ ಬದರಿ ಪುರೋಹಿತ ವ್ಯಂಗ್ಯಚಿತ್ರ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತು ವಿದ್ಯಾರ್ಥಿಗಳೊಂದಿಗೆ ಚಿತ್ರ ಸಂವಾದ ನಡೆಸಿಕೊಟ್ಟರು.
ಶಾಲೆಯ ಚಿತ್ರಕಲಾ ಶಿಕ್ಷಕ ವೀರಯ್ಯ ಒಂಟಿಗೋಡಮಠ ಪ್ರಾಸ್ತಾವಿಕ ಮಾತನಾಡಿ, ವ್ಯಂಗ್ಯಚಿತ್ರ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತವೆ. ಆ ಗೆರೆಗಳಿಗೆ ಅಂತಹ ಶಕ್ತಿಯಿದೆ. ಅಂತಹ ಶಕ್ತಿಯುತ ಗೆರೆಗಳನ್ನು ಬದರಿ ಪುರೋಹಿತರ ಚಿತ್ರಗಳಲ್ಲಿ ಕಾಣಬಹುದು ಎಂದರು.
ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮಹಾಂತೇಶ ಬಳಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ವಿಶ್ವಭಾಷೆ. ಭಾಷೆ, ಲಿಪಿಗಳ ಪರಿಚಯ ಇಲ್ಲದ ಮಾನವ ಮೊದಲು ಕಲಿತದ್ದು ಚಿತ್ರ ಬಿಡಿಸುವುದನ್ನು. ಇಂತಹ ಕಲೆಯಲ್ಲಿ ವ್ಯಂಗ್ಯಚಿತ್ರ ವಿಶಿಷ್ಟವಾದುದು ಎಂದರು.
ಸತ್ಯನಾರಾಯಣ ಮಾತನಾಡಿ, ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡ ಮುಖ್ಯಗುರು, ಚಿತ್ರಕಲಾ ಶಿಕ್ಷಕ ಶಾಲಾ ಸಿಬ್ಬಂದಿಗೆ ವಂದಿಸಿದರು.
ಶಿಕ್ಷಕ ರಾಮರೆಡ್ಡಿ ಸ್ವಾಗತಿಸಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಯರಾಜ ಭೂಸದ, ತಾಹೇರಾ ಬೇಗಂ, ಶೋಭಾ ಗಡಾದ ಉಪಸ್ಥಿತರಿದ್ದರು.