ಸುಪ್ರೀಂನತ್ತ ಸೀಮಾ ಬಾಲ್ಯ ವಿವಾಹ ವಿವಾದ
ಕ.ಪ್ರ. ವಾರ್ತೆ ಕೊಪ್ಪಳ ಮಾ. 2
ಭಾರತದ ಸಂವಿಧಾನದ ಅನ್ವಯ ಬಾಲ್ಯ ವಿವಾಹ ಕಾಯ್ದೆ ಎಲ್ಲರಿಗೂ ಅನ್ವಯಿಸುತ್ತದೆ. 18 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಮದುವೆ ಮಾಡುವಂತಿಲ್ಲ ಎಂದು ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ನೀಡಿದ ತೀರ್ಪನ್ನು ಪ್ರಶ್ನಿಸಲು ಸೀಮಾ ಬೇಗಂ ಕುಟುಂಬ ಮುಂದಾಗಿದೆ.
ಗಂಗಾವತಿ ತಾಲೂಕಿನ ಕನಕಗರಿಯ ನಿವಾಸಿ 16 ವರ್ಷದ ಸೀಮಾ ಬೇಗಂ ಮದುವೆಯನ್ನು ಕಾನೂನು ಬಾಹಿರವೆಂದು ಯುನಿಸೆಫ್ ಅಧಿಕಾರಿಗಳು ತಡೆದಿದ್ದರು. ನಂತರ ಈ ಕುಟುಂಬ ಹೈಕೋರ್ಟ್ ಮೊರೆ ಹೋಗಿತ್ತು. ಕೋರ್ಟ್ ಮದುವೆ ಮಾಡಲು ತಡೆಯೊಡ್ಡಿತು.
ಇದೀಗ 'ನಮ್ಮ ಮಹ್ಮದಿಯ ಕಾಯ್ದೆಯಲ್ಲಿ 16 ವರ್ಷಕ್ಕೆ ಮದುವೆಗೆ ಅವಕಾಶ ಇರುವುದರಿಂದ ದಯವಿಟ್ಟು ಮದುವೆ ಮಾಡುವುದಕ್ಕೆ ಅವಕಾಶ ನೀಡಿ. ಬಾಲಕಿಯ ತಾಯಿ ಹುಚ್ಚಿ. ನಾನು ಐಸ್ ಕ್ರೀಂ ಮಾರಿಯೇ ಜೀವನ ನಡೆಸಬೇಕು. ಇರುವ ಐವರು ಹೆಣ್ಣು ಮಕ್ಕಳನ್ನು ಸಲಹುದು ಕಷ್ಟ. ಕುಟುಂಬದ ಆಶ್ರಯಕ್ಕಾಗಿ ಮದುವೆ ಮಾಡಲು ಅವಕಾಶ ನೀಡಿ' ಎಂದು ಬಾಲಕಿ ತಂದೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಏನಿದು ಪ್ರಕರಣ?: ನವೆಂಬರ್ 22ರಂದು ಸೀಮಾ ಮದುವೆ ದಿನಾಂಕವನ್ನು ನಿಶ್ಚಯಗೊಳಿಸಲಾಗಿತ್ತು. ಲಗ್ನಪತ್ರಿಕೆಯನ್ನೂ ಹಂಚಲಾಗಿತ್ತು. ವಿಷಯ ತಿಳಿದ ಯುನಿಸೆಫ್ ಅಧಿಕಾರಿಗಳು ಮದುವೆ ತಡೆದಿದ್ದರು. ಈ ಕುರಿತು ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಳ್ಳಲಾಗಿತ್ತು.
ನಂತರ ಸೀಮಾ ಕುಟುಂಬ ಹೈಕೋರ್ಟ್ ಸಂಚಾರಿ ಪೀಠದ ಮೊರೆ ಹೋಗಿತ್ತು. ನಂತರ ಮತ್ತೆ ಮದುವೆ ದಿನಾಂಕವನ್ನು ನಿಶ್ಚಯಿಸಿದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಬಂದಿರದ ಕಾರಣ ಮದುವೆ ಮಾಡುವಂತಿಲ್ಲ ಎಂದು ಮತ್ತೆ ಯುನಿಸೆಫ್ ಅಧಿಕಾರಿಗಳು ತಡೆಯೊಡ್ಡಿದರು. ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ಮದುವೆ ಕಾನೂನು ಬಾಹಿರ ಎಂದು ತೀರ್ಪು ನೀಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.