ಗ್ಯಾರೇಜಲ್ಲಿ ಬದುಕು ಕಟ್ಟಿಕೊಂಡ ಶಾರದಮ್ಮ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ. 7
'ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವೂ ಮುಂದೆ' ಎನ್ನುವ ಹಾಡಿಗೆ ಅನ್ವರ್ಥಕ ಎನ್ನುವಂತೆ ಇಲ್ಲೊಬ್ಬ ಮಹಿಳೆ, ಪತಿ ತೀರಿದ ಬಳಿಕ ಗ್ಯಾರೇಜ್ ಕೆಲಸವನ್ನೇ ನಿಭಾಯಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾಳೆ. ಅದರಲ್ಲಿ ಯಶಸ್ವಿಯಾಗಿ ಇತರ ಮಹಿಳೆಯರಿಗೂ ಮಾದರಿಯಾಗಿದ್ದಾಳೆ.
ಇಲ್ಲಿಯ ಭಾಗ್ಯನಗರ ನಿವಾಸಿಯಾಗಿರುವ ಶಾರದಮ್ಮ ಬಡಿಗೇರ ಕೊಪ್ಪಳ ನಗರದ ಗದಗ ರಸ್ತೆಯಲ್ಲಿರುವ ಮೌನೇಶ್ವರ ಬಾಡಿ ಬಿಲ್ಡಿಂಗ್ ವರ್ಕ್ಶಾಪ್ ನಡೆಸುತ್ತಿದ್ದಾಳೆ. ಮಹಿಳೆಯರು ಮನೆಯಲ್ಲಿಯೇ ಇರಬೇಕು. ಅಬ್ಬಬ್ಬಾ ಎಂದರೆ ಇಂಥದ್ದೆ ಕೆಲಸ ಮಾಡಬೇಕು ಎನ್ನುವ ಕಾಲ ಇದು. ಆದರೆ, ಇದಕ್ಕೆ ಅಪವಾದ ಮತ್ತು ಪ್ರಗತಿಪರ ಮಹಿಳೆಯಾಗಿ ಕೊಪ್ಪಳ ಶಾರದಮ್ಮ ಸಾಹಸ ಮೆರೆಯುತ್ತಿದ್ದಾರೆ.
ಪತಿ ನಡೆಸುತ್ತಿದ್ದ ಗ್ಯಾರೇಜನ್ನೇ ನಡೆಸುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಪುರುಷರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ನಾಲ್ಕಾರು ಜನರಿಗೆ ಕೆಲಸ ನೀಡಿದ್ದಾರೆ. ಕೆಲಸ ಸಿಗುವುದು ಕಷ್ಟ ಎನ್ನುವ ಕಾಲದಲ್ಲಿ ಗ್ಯಾರೇಜ್ ನಡೆಸುವ ಮೂಲಕ ನಾಲ್ಕಾರು ಪುರುಷರಿಗೆ ಕೆಲಸ ನೀಡುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯ.
ಯಾಕೆ ಹೀಗಾಯಿತು? ಗ್ಯಾರೇಜಿನಲ್ಲಿ ಇವರು ಪತಿಗೆ ಸಹಾಯ ಮಾಡುತ್ತಿದ್ದರು. ಪತಿ ಊರಿಗೆ ಹೋದರೆ ಇವರೇ ಗ್ಯಾರೇಜ್ ನೋಡಿಕೊಳ್ಳುತ್ತಿದ್ದರು. ಹೀಗೆ, ಆಗಾಗ ಗ್ಯಾರೇಜಿನಲ್ಲಿ ಕೆಲಸ ಮಾಡುವ ಅನುಭವ ಇರುವುದೇ ಈಗ ಇವರಿಗೆ ವರವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪತಿ ಆಕಸ್ಮಿಕವಾಗಿ ತೀರಿಕೊಂಡರು. ಇದರಿಂದ ಎದೆಗುಂದದ ಶಾರದಮ್ಮ ಕೆಲ ದಿನಗಳಲ್ಲಿಯೇ ದುಃಖ ಮರೆತು ಬದುಕು ಕಟ್ಟಿಕೊಳ್ಳಲು ಗ್ಯಾರೇಜ್ ಪುನಃ ಪ್ರಾರಂಭಿಸಿದರು.
ಮೊದ ಮೊದಲು ಗ್ಯಾರೇಜ್ ಕೆಲಸ ಮಾಡುವುದನ್ನು ನೋಡಿ ಜನ ಹೀಯಾಳಿಸಿದ್ದರು. ಇದರಿಂದ ಬೇಸತ್ತಿದ್ದ ಶಾರದಮ್ಮ ಗ್ಯಾರೇಜ್ ಕೆಲಸವನ್ನೇ ಬಿಡಬೇಕು ಎನ್ನುವ ಯೋಚನೆಯಲ್ಲಿದ್ದರು. ಆದರೆ, ಹಾಗೆ ಮಾಡಿದರೇ ಸಂಸಾರ ನಡೆಸುವುದು ಕಷ್ಟವಾಗುತ್ತದೆ. ಗ್ಯಾರೇಜ್ ಹಾಳಾಗಿ ಹೋಗುತ್ತದೆ ಎಂದು ಯೋಚಿಸಿ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಯಾರು ಏನೆಂದರೇನು? ಕೆಲಸ ಮಾಡುವುದಕ್ಕೆ ಯಾಕೆ ಅವಮಾನ? ಎಂದು ದಿಟ್ಟತನದಿಂದ ಕೆಲಸ ಮಾಡಲು ಶುರು ಮಾಡಿ, ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅಂದು ಅಪಮಾನಿಸಿದವರೇ ಇಂದು ಪ್ರಶಂಸೆ ಮಾಡುತ್ತಿದ್ದಾರೆ. ಶಾರದಮ್ಮನನ್ನು ನಿಜಕ್ಕೂ ಸಾಹಸಗಾರ್ತಿ ಎಂದು ಹೇಳುತ್ತಿದ್ದಾರೆ.
ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದಾಳೆ. ಪತಿ ತೀರಿಕೊಂಡರು ಸಂಸಾರವನ್ನು ನಿಭಾಯಿಸುತ್ತಿದ್ದಾಳೆ. ಮಹಿಳೆ ಎಂದರೆ ಹೀಗಿರಬೇಕು. ನಿಜಕ್ಕೂ ಈಕೆಯ ಸಾಹಸ ಮಹಿಳೆಯರಿಗೆ ಮಾದರಿ ಎನ್ನುತ್ತಿದ್ದಾರೆ. ಮಹಿಳೆ ಎಂದಾಕ್ಷಣ ಕೇವಲ ಆ ಕೆಲಸ ಮಾಡಬೇಕು. ಈ ಕೆಲಸ ಮಾಡಬೇಕು ಎನ್ನುವಂತಿಲ್ಲ. ಎಲ್ಲ ಕೆಲಸ ಮಾಡಬಹುದು ಎಂದು ಮಾಡಿ ತೋರಿಸುತ್ತಿದ್ದಾಳೆ ಶಾರದಮ್ಮ.
- ಸೋಮರಡ್ಡಿ ಅಳವಂಡಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.