ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಕೊಪ್ಪಳ ಅತಂತ್ರ, ಗಂಗಾವತಿ ಜೆಡಿಎಸ್ ತೆಕ್ಕೆಗೆ

Parashurama
Updated On : 12 Mar 2013, 11:19 am

ಕನ್ನಡಪ್ರಭ ವಾರ್ತೆ, ಕೊಪ್ಪಳ, ಮಾ.11
ಜಿಲ್ಲೆಯಾದ್ಯಂತ ಪ್ರಕಟವಾಗಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಗಂಗಾವತಿಯಲ್ಲಿಯಲ್ಲಿ ಜೆಡಿಎಸ್ ಹಾಗೂ ಯಲಬುರ್ಗಾದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿವೆ. ಈ ಮೂಲಕ ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಯಲಬುರ್ಗಾದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಗರಿಬಿಚ್ಚಿ ಸುತ್ತಾಡುವಂತೆ ಆಗಿದೆ. ಮೂರು ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಬಿಎಸ್‌ಆರ್ ಖಾತೆ ತೆರೆದಿದ್ದರೆ, ಕೆಜೆಪಿ ಜಿಲ್ಲೆಯಾದ್ಯಂತ ಧೂಳಿಪಟವಾಗಿದೆ.
ಜಿಲ್ಲೆಯಾದ್ಯಂತ ಇರುವ 96 ಸ್ಥಾನಗಳ ಪೈಕಿ ಕಾಂಗ್ರೆಸ್ 36 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ ಅಧಿಕಾರವನ್ನು ಹಿಡಿಯುವ ಅವಕಾಶ ಪಡೆದಿರುವುದು ಕೇವಲ ಯಲಬುರ್ಗಾ ಪಪಂನಲ್ಲಿ ಮಾತ್ರ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತಲಾ 25 ಸ್ಥಾನಗಳಲ್ಲಿ ಜಯ ಸಾಧಿಸಿವೆ. ಬಿಎಸ್‌ಆರ್ ಪಾರ್ಟಿ ಮೂರು ಕಡೆ ಗೆಲವು ಸಾಧಿಸಿ, ಅಂಬೆಗಾಲಿಟ್ಟಿದೆ. ಇನ್ನು 7 ಕಡೆ ಪಕ್ಷೇತರರು ಜಯ ಸಾಧಿಸಿದ್ದಾರೆ.
ಆದರೆ, ಜೆಡಿಎಸ್ ಪಕ್ಷ ಗಂಗಾವತಿಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಆದರೆ, ಕಳೆದ ಸಾರಿ ಇಲ್ಲಿ 22 ಸ್ಥಾನ ಹೊಂದಿದ್ದು, ಈ ಸಾರಿ 16ಕ್ಕೆ ಇಳಿದಿದೆ. ಆದರೂ ಅಧಿಕಾರ ಹಿಡಿಯುವುದು ಖಚಿತ. ವಿಶೇಷ ಎಂದರೆ ಸ್ಥಳೀಯವಾಗಿ ಸಂಸದರು, ಶಾಸಕರು ಇರುವ ಗಂಗಾವತಿಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಕಳೆದ ಸಾರಿ ಯಾರೂ ಇಲ್ಲದೆ ಇರುವ ಸಮಯದಲ್ಲಿ 6 ಸ್ಥಾನ ಗೆದ್ದಿದ್ದ ಬಿಜೆಪಿ ಈ ಸಾರಿ ನಾಲ್ಕಕ್ಕೆ ಇಳಿದಿದೆ. ಇಲ್ಲಿ ಕಳೆದ ಸಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನ ಗೆದ್ದಿದ್ದು, ಈ ಸಾರಿ 9 ಸ್ಥಾನಗಳಲ್ಲಿ ಜಯ ಸಾಧಿಸಿ, ಚೇತರಿಕೆ ಕಂಡಿದೆ.
ಇನ್ನು ಕೊಪ್ಪಳ ನಗರಸಭೆ ಅತಂತ್ರವಾಗಿದೆ. ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದು, 13ರಲ್ಲಿ ಜಯ ಸಾಧಿಸಿದೆ. ಇಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 2ನೇ ಸ್ಥಾನದಲ್ಲಿದೆ. ಅಚ್ಚರಿ ಎಂದರೆ ಕಳೆದ ಸಾರಿ 16 ಸ್ಥಾನ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಜೆಡಿಎಸ್ ಕೇವಲ ಮೂರು ಸ್ಥಾನ ಪಡೆದು ಹಿನ್ನಡೆ ಅನುಭವಿಸಿದೆ. ಬಿಎಸ್‌ಆರ್ ಕೂಡಾ ಒಂದು ಸ್ಥಾನದಲ್ಲಿ ಜಯ ಸಾಧಿಸಿ, ಖಾತೆ ತೆರೆದಿದೆ.
ಇನ್ನು ಕುಷ್ಟಗಿಯಲ್ಲಿ ಸತತವಾಗಿ ಅಧಿಕಾರಕ್ಕೆ ಬರುತ್ತಿದ್ದ ಜೆಡಿಎಸ್ ಹಿನ್ನಡೆ ಅನುಭವಿಸಿ 5 ಸ್ಥಾನ ಪಡೆದಿದ್ದರೆ ಬಿಜೆಪಿ 8 ಸ್ಥಾನದಲ್ಲಿ ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಸಹ 7 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಪುರಸಭೆಯನ್ನು ಅತಂತ್ರ ಮಾಡಿದೆ. ಮೂವರು ಪಕ್ಷೇತರರು ಗೆದ್ದಿದ್ದಾರೆ. ಆದರೂ ಬಿಎಸ್‌ಆರ್ ಪಾರ್ಟಿ ತನ್ನ  ಖಾತೆಯನ್ನೇ ತೆರೆಯಲಿಲ್ಲ.
ನಾಯಕರ ಪೈಪೋಟಿ: ಗಂಗಾವತಿಯಲ್ಲಿ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಹಾಗೂ ಸಂಸದ ಶಿವರಾಮಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದರೆ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಕಾಂಗ್ರೆಸ್ ಪಕ್ಷದ ಎಚ್.ಆರ್. ಶ್ರೀನಾಥ್ ಪರ ಒಲವು ವ್ಯಕ್ತವಾಗಿದೆ. ಈ ಸಾರಿಯೂ ಅನ್ಸಾರಿ ಅವರೇ ಫುಲ್ ಸ್ವಿಂಗ್‌ನಲ್ಲಿರುವಂತೆ ಆಗಿದೆ.
ಕೊಪ್ಪಳ ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವುದರಿಂದ ಶಾಸಕ ಸಂಗಣ್ಣ ಕರಡಿ ಹಾಗೂ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್ ಇವರಿಬ್ಬರೂ ಹಿಗ್ಗುವಂತೆಯೂ ಇಲ್ಲ, ಕುಗ್ಗುವಂತೆಯೂ ಇಲ್ಲ. ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ.
ಇನ್ನು ಜೆಡಿಎಸ್‌ನ್ನು ಜನ ದೂರ ಸರಿಸಿದ್ದಾರೆ. ಹೀಗಾಗಿ, ನೇತೃತ್ವ ವಹಿಸಿದ್ದ ಸುರೇಶ ಭೂಮರಡ್ಡಿಗೆ ಅಲ್ಪಮಟ್ಟಿಗಿನ ಹಿನ್ನಡೆಯಾಗಿದೆ ಎಂದೇ ಹೇಳಲಾಗುತ್ತದೆ. ಯಲಬುರ್ಗಾದಲ್ಲಿ ಎಲ್ಲರನ್ನು ಹಿಂದಿಕ್ಕಿರುವ ಕಾಂಗ್ರೆಸ್ ಪಕ್ಷದ ರಾಯರಡ್ಡಿ ಗರಿಬಿಚ್ಚಿಕೊಂಡು ಓಡಾಡುವಂತೆ ಆಗಿದ್ದರೆ ಬಿಜೆಪಿಯ ಹಾಲಪ್ಪ ಆಚಾರ್, ಬಿಎಸ್‌ಆರ್ ಪಕ್ಷ ನವೀನ್ ಗುಳಗಣ್ಣವರ್ ಹಾಗೂ ಜೆಡಿಎಸ್ ಪಕ್ಷದ ಜಿ.ಟಿ. ಪಂಪಾಪತಿ ಹಿನ್ನಡೆ ಅನುಭವಿಸಿದ್ದಾರೆ.
ಕುಷ್ಟಗಿಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಶಾಸಕ ಸ್ಥಾನದ ಆಕಾಂಕ್ಷಿ ದೊಡ್ಡನಗೌಡ ಪಾಟೀಲ ಮುಂಚೂಣಿಯಲ್ಲಿದ್ದರೆ ಸ್ಥಳೀಯ ಶಾಸಕ ಅಮರೇಗೌಡ ಭಯ್ಯಾಪುರ 2ನೇ ಸ್ಥಾನದಲ್ಲಿರುವಂತೆ ಮಾಡಿದೆ. ಇನ್ನು ಜೆಡಿಎಸ್ ಹಾಗೂ ಬಿಎಸ್‌ಆರ್ ಮುಖಂಡರು ಮುಖಭಂಗ ಅನುಭವಿಸುವಂತೆ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments