ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಜೆಡಿಎಸ್ ತೆಕ್ಕೆಗೆ ಗಂಗಾವತಿ ನಗರಸಭೆ

Parashurama
Updated On : 12 Mar 2013, 11:19 am

ಗಂಗಾವತಿ: ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆಯುವುದರೊಂದಿಗೆ ನಗರಸಭೆಯನ್ನು ಮತ್ತೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಳೆದ ಬಾರಿ ಆಡಳಿತ ನಡೆಸಿರುವ ಜೆಡಿಎಸ್ ಮತ್ತೇ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ.
 ಜೆಡಿಎಸ್ ಹೈದರಾಬಾದ್ ಕರ್ನಾಟಕ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು 'ಅಭಿವೃದ್ಧಿ ಕಡೆಗೆ ಜೆಡಿಎಸ್ ನಡಿಗೆ' ಎನ್ನುವ ಘೋಷಣೆಯಡಿ ಪಾದಯಾತ್ರೆ ಕೈಗೊಂಡು ನಗರಸಭೆ ಚುಕ್ಕಾಣಿ ಹಿಡಿಯಲು ಕಾರಣರಾಗಿದ್ದಾರೆ.  ಕೆಜೆಪಿಗೆ ಸೋಲುಂಟಾಗಿದೆ.
2007ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಜೆಡಿಎಸ್ ಗಿಟ್ಟಿಸಿಕೊಂಡಿತ್ತು. ಈಗ 16 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ 9 ಸ್ಥಾನಗಳನ್ನು ಪಡೆದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮತ್ತು ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಅವರು ಒಗ್ಗೂಡಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದರಿಂದ 9 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದರೂ ಕೇವಲ 4 ಸ್ಥಾನಗಳನ್ನು ಪಡೆದು ಹಿನ್ನಡೆ ಅನುಭವಿಸಿದೆ. ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ನಗರದ ಅಭಿವೃದ್ಧಿಗೆ ಸರ್ಕಾರದ ಯೋಜನೆ ಜಾರಿಗೆ ತಂದಿದ್ದರೂ ಮತದಾರರಿಂದ ಸ್ಪಂದನೆ ದೊರೆಯದಂತಾಗಿದೆ. ಅಲ್ಲದೆ, ಸ್ಥಳೀಯ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೊಸಕೇರಿ ಗಿರೇಗೌಡ ಅಬ್ಬರದ ಪ್ರಚಾರ ನಡೆಸಿದ್ದರೂ ಮತದಾರರ ಮನವೊಲಿಸಲು ವಿಫಲರಾಗಿದ್ದಾರೆ ಎನ್ನುವುದಕ್ಕೆ ನಗರಸಭೆ ಚುನಾವಣೆಯೇ ಸಾಕ್ಷಿಯಾಗಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಬಿಎಸ್‌ಆರ್ ಕಾಂಗ್ರೆಸ್ ಕೇವಲ 1 ಸ್ಥಾನ ಪಡೆಯುವುದರ ಮೂಲಕ ನಗರದಲ್ಲಿ ಖಾತೆ ಪ್ರಾರಂಭಿಸಿದೆ. ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಬಿಜೆಪಿ ತೊರೆದು ಬಿಎಸ್‌ಆರ್ ಸೇರಿದ್ದರಿಂದ ಪಕ್ಷ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಧೂಳೀಪಟವಾಗಿದೆ. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ನಗರದಲ್ಲಿ ಠಿಕಾಣಿ ಹೂಡಿದ್ದರೂ ಅವರಿಗೆ ಸ್ಥಳೀಯ ಮತದಾರರು ಮಣೆ ಹಾಕದಿರುವುದರಿಂದ ಪಕ್ಷ ಅಸ್ತಿತ್ವ ಕಳೆದುಕೊಂಡಂತಾಗಿದೆ. ಸಂಸದ ಶಿವರಾಮಗೌಡರ ಪುತ್ರ ಶಿವರಾಜಗೌಡ ಪಕ್ಷದ ಸಂಘಟನೆಯಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಪ್ರಸ್ತುತ ಚುನಾವಣೆಯಲ್ಲಿಯೂ ಓರ್ವ ಪಕ್ಷೇತರ ಅಭ್ಯರ್ಥಿ ಹುಸೇನಪ್ಪ ಹಂಚಿನಾಳ ಜಯ ಸಾಧಿಸಿದ್ದಾರೆ. ಒಟ್ಟಿನಲ್ಲಿ ಗಂಗಾವತಿ ನಗರಸಭೆ ಮೇಲೆ ಜೆಡಿಎಸ್ ಮತ್ತೆ ಬಾವುಟ ಹಾರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments