ಭಾರತೀನಗರ: ಕ್ವಾಲಿಸ್ ಕಾರ್‌ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಡ್ರಾಪ್ ಕೊಡುವ ನೆಪದಲ್ಲಿ ಪ್ರಯಾಣಿಕರನ್ನು ವಂಚಿಸುತ್ತಿದ್ದ ದರೋಡೆಕೋರರನ್ನು ಭಾರತೀನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಬೆವನಹಳ್ಳಿ ನವೀನ್‌ಕುಮಾರ್, ತವರಕೆರೆ ಮಂಜು (ಕಿಟ್ಟಿ) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನುಳಿದ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಬೆದರಿಕೆ: ಜು.12 ರಂದು ಬೆಂಗಳೂರು ಸ್ಯಾಟಲೈಟ್ ನಿಲ್ದಾಣದಿಂದ ಬೇವನಹಳ್ಳಿ ನವೀನ್‌ಕುಮಾರ್, ತವರೆಕೆರೆ ಮಂಜು (ಕಿಟ್ಟಿ) ಸೇರಿದಂತೆ ಹಲವು ದರೋಡೆಕೋರರು ಮೈಸೂರಿಗೆ ಡ್ರಾಪ್ ನೀಡುವುದಾಗಿ ಹೇಳಿ ಮೂವರು ಪ್ರಯಾಣಿಕರನ್ನು ಕ್ವಾಲಿಸ್ ಕಾರಿನಲ್ಲಿ ಹತ್ತಿಸಿಕೊಂಡಿದ್ದರು. ಆದರೆ, ಮೈಸೂರಿಗೆ ಕರೆದೊಯ್ಯುವ ಬದಲು ಮದ್ದೂರು- ಮಳವಳ್ಳಿ ಮಾರ್ಗದ ಹುಣ್ಣನದೊಡ್ಡಿ ಗ್ರಾಮದ ಬಳಿ ಕರೆ ತಂದು ಕಾರಿನಲ್ಲಿದ್ದ ಮೈಸೂರಿನ ರಾಜೇಶ್ ಸೇರಿದಂತೆ ಮೂವರು ಪ್ರಯಾಣಿಕರ ಬಳಿಯಿದ್ದ ಚಿನ್ನದ ಚೈನ್, ಹಣ ಸೇರಿದಂತೆ ಮೊಬೈಲ್‌ಗಳನ್ನು ಅಪಹರಿಸಿ ಪ್ರಯಾಣಿಕರನ್ನು ಬೆದರಿಕೆಯೊಡ್ಡಿ ಅಲ್ಲೆ ಬಿಟ್ಟು ಪರಾರಿಯಾಗಿದ್ದರು.
ಮೈಸೂರಿನ ರಾಜೇಶ್ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರೆ, ಇನ್ನುಳಿದ ಪ್ರಯಾಣಿಕರು ಯಾವುದೇ ರೀತಿಯ ಮಾಹಿತಿ ನೀಡದೆ ತಮ್ಮೂರಿಗೆ ಹೊರಟುಹೋಗಿರುವುದು ತಿಳಿದುಬಂದಿದೆ. ರಾಜೇಶ್ ದೂರಿನಲ್ಲಿ ಕಾರಿನ ನಂಬರ್ ಆಗಲಿ, ಅಥವಾ ಆರೋಪಿಗಳ ಸುಳಿವು ನೀಡಿರಲಿಲ್ಲ. ಆದರೂ ಕೂಡ ಕೆ.ಎಂ.ದೊಡ್ಡಿ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಯಶಸ್ವಿಯಾಗಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಹಾಗೂ ವಿಶ್ವಾಸ ಮೂಡಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಎ.ಎಸ್ಪಿ. ಪುಟ್ಟಮಾದು ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ಪಿ.ಜಗದೀಶ್, ಪರಶಿವಮೂರ್ತಿ, ವಿಜಿಕುಮಾರ್, ಮಹೇಶ್, ಸಿದ್ದರಾಜು, ಗೋಪಾಲಕೃಷ್ಣ, ನಾಗೇಂದ್ರ, ಶಿವರಾಮು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿ ಯಶಕಂಡಿದ್ದಾರೆ.