ಮಂಡ್ಯ

ಟಿಕೆಟ್‌ಗಾಗಿ ಎಲ್ಲೆಲ್ಲೂ ಕಾಲೆಳೆಯುವ ತಂತ್ರ

ಕನ್ನಡಪ್ರಭ ವಾರ್ತೆ ಮಂಡ್ಯ ಮಾ.29
ಬೇಸಿಗೆ ಬಿಸಿಲಂತೆ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ರಾಜಕೀಯ ಪಕ್ಷಗಳಲ್ಲಿನ ಆಕಾಂಕ್ಷಿತ ಅಭ್ಯರ್ಥಿಗಳು ಟಿಕೆಟ್ ಪಡೆಯುವ ಮತ್ತು ತಪ್ಪಿಸುವ ತಂತ್ರ - ಪ್ರತಿತಂತ್ರಗಳನ್ನು ಹೆಣಿಯುತ್ತಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳಲ್ಲಿನ ಆಕಾಂಕ್ಷಿತ ಅಭ್ಯರ್ಥಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಲಾಭಿಯಲ್ಲಿ ತೊಡಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ತನ್ನ ಪಕ್ಷದಲ್ಲಿಯೇ ಸ್ಪರ್ಧೆ ಬಯಸುತ್ತಿರುವ ವ್ಯಕ್ತಿಗಳ ಕಾಲೆಳೆಯುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ ಸೇರಿದಂತೆ ಪ್ರಮುಖ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿನ ಗೊಂದಲ ಮುಗಿದಿಲ್ಲ. ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಹೆಣಗಾಡುತ್ತಿವೆ. ಅಭ್ಯರ್ಥಿಗಳ ಹೆಸರು ಪ್ರಕಟಿಸಿದರೆ ಪಕ್ಷದಲ್ಲಿ ಭುಗಿಲೆಳುವ ಅಸಮಾಧಾನ ಮತ್ತು ಬಂಡಾಯದ ಭೀತಿ ಪಕ್ಷಗಳಲ್ಲಿ ತಳಮಳ ಉಂಟು ಮಾಡಿದೆ.
ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳು ಪೂರ್ವಭಾವಿ ಸಭೆ ನಡೆಸಿ, ಸ್ಪರ್ಧಾ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದ್ದವು. ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಕೆಯಲ್ಲಿ ಆಕಾಂಕ್ಷಿಗಳಿದ್ದು, ಟಿಕೆಟ್ ಪಡೆಯಲು ತಮ್ಮ ನೆಚ್ಚಿನ ನಾಯಕರ ಮನೆಗಳಲ್ಲಿ ಠಿಕಾಣಿ ಹೂಡಿದ್ದಾರೆ.
ಕೇಂದ್ರ ಮಾಜಿ ಸಚಿವರು, ಮಾಜಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ತಮ್ಮ ಬೆಂಬಲಿಗರಿಗೆ ಟಿಕೆಟ್ ದೊರಕಿಸಿಕೊಡಲು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಪಕ್ಷಗಳು ಅಳೆದೂ ತೂಗಿ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಳಿಸಲು ಚಿಂತನೆ ನಡೆಸಿವೆ. ಕಾಂಗ್ರೆಸ್ ಟಿಕೆಟ್‌ನ್ನು ತಮ್ಮ ಬೆಂಬಲಿಗರಿಗೆ ದೊರಕಿಸಿಕೊಡಲು ಕೈಪಾಳಯದ ನಾಯಕರು ದೆಹಲಿಯಲ್ಲಿ ಮೊಕ್ಕಾಂ ಹೂಡಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕೆಜೆಪಿ ಟಿಕೆಟ್ ಪಡೆಯುವ ಮಂದಿ ಬೆಂಗಳೂರಿನತ್ತ ಧಾವಿಸಿದ್ದಾರೆ.
ಇನ್ನೂ ಜೆಡಿಎಸ್‌ನಲ್ಲಿ ಟಿಕೆಟ್ ಪಡೆಯಬೇಕಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಕೃಪಾಕಟಾಕ್ಷ ಬೇಕು. ಇದನ್ನು ಅರಿತಿರುವ ಆಕಾಂಕ್ಷಿತರು ತಮ್ಮ ಬೆಂಬಲಿಗರೊಂದಿಗೆ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಬೆನ್ನು ಬಿದ್ದಿದ್ದಾರೆ.
ಬಂಡಾಯದ ಭೀತಿ:  ಮಳವಳ್ಳಿ ಕ್ಷೇತ್ರದಿಂದ ಹಾಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಕೈ ವರಿಷ್ಠರು ಟಿಕೆಟ್ ನೀಡಲಿದೆ ಎಂಬ ಮುನ್ಸೂಚನೆ ಅರಿತ ಮಹಿಳಾ ನಾಯಕಿ ಮಲ್ಲಾಜಮ್ಮ ದೆಹಲಿಗೆ ತೆರಳಿ, ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಿ. ಇಲ್ಲದಿದ್ದರೆ ಕ್ಷೇತ್ರದಲ್ಲಿ ಬಂಡಾಯ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ವರಿಷ್ಠರಿಗೆ ನೀಡಿರುವುದು ಗುಟ್ಟಾಗಿ ಉಳಿದಿಲ್ಲ.
ಸದ್ಯಕ್ಕೆ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿರುವ ಕಾಂಗ್ರೆಸ್ ಹೈ ಕಮಾಂಡ್ ಅಂತಿಮ ಕ್ಷಣದಲ್ಲಿ ಕೈಕೊಟ್ಟರೆ ಏನ್ ಮಾಡೋದು ಎಂಬ ಆತಂಕ ನರೇಂದ್ರಸ್ವಾಮಿ ಅವರನ್ನು ಬಿಟ್ಟಿಲ್ಲ. ಡಾ.ಮೂರ್ತಿ ಮತ್ತು ಯಮದೂರು ಸಿದ್ದರಾಜು ಕೂಡ ಕೈ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ಈ ಬಾರಿ ಏನೇ ಆಗಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಟಿಕೆಟ್ ಪಡೆದೇ ತೀರಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಹುರಿಯಾಳು ರವೀಂದ್ರ ಶ್ರೀಕಂಠಯ್ಯ ಅವರಿಗೆ ಕೇಂದ್ರ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರ ಕೃಪಾಶೀರ್ವಾದವಿದೆ. ಅಂಬರೀಷ್‌ಗೆ ಬೇರೆ ಕ್ಷೇತ್ರ ನಿಗದಿಯಾಗಿರುವುದು ರವೀಂದ್ರ ಅವರ ದಾರಿ ಸುಗಮವಾಗಿದೆ.
ಕಾಂಗೈ ಟಿಕೆಟ್ ಬಯಸುತ್ತಿರುವ ಎಸ್.ಎಲ್. ಲಿಂಗರಾಜು ಮತ್ತು ಭಾಸ್ಕರ್ ಅವರ ಕೂಗು ವರಿಷ್ಠರ ಕಿವಿಗೆ ತಾಕುವುದು ದೂರದ ಮಾತು. ಆರಂಭದಲ್ಲಿ ಜೆಡಿಎಸ್ ಟಿಕೆಟ್ ಕೇಳಿದ್ದ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮೌನವಾಗಿದ್ದು, ಹಾಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮರು ಸ್ಪರ್ಧೆ ಬಯಸಿದ್ದಾರೆ.
ತಾರಾ ವರ್ಚಿಸ್ಸಿನಲ್ಲಿ ರಾಜಕೀಯ ನೆಲೆ ಕಂಡುಕೊಂಡಿರುವ ಅಂಬರೀಷ್, ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಕೈ ಟಿಕೆಟ್ ಸಿಗುತ್ತದೆ. ಆದರೆ, ಶ್ರೀರಂಗಪಟ್ಟಣ ಕ್ಷೇತ್ರ ಮತ್ತು ಸಂಸತ್ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಎಚ್ಚೆತ್ತುಕೊಂಡಿರುವ ಅಂಬರೀಷ್, ಈಗ ಎಚ್ಚರಿಕೆಯ ರಾಜಕಾರಣ ಮಾಡುತ್ತಿದ್ದಾರೆ.
ಹೀಗಾಗಿ, ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದ ಅಂಬರೀಷ್, ನಗರಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಿರುವುದರಿಂದ ಮಂಡ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆಕಾಂಕ್ಷಿತರಾಗಿರುವ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್.ಚಿದಂಬರ್ ಹಾಗೂ ಯುವ ಮುಖಂಡ ಗಣಿಗ ರವಿ ಟಿಕೆಟ್‌ಗಾಗಿ ಹೋರಾಟ ನಡೆಸಿದ್ದಾರೆ. ಅಂಬಿ ಸ್ಪರ್ಧೆ ಖಚಿತವಾದರೆ ಕಣದಿಂದ ಹಿಂದೆ ಸರಿದು ಅವರನ್ನು ಬೆಂಬಲಿಸಲು ಗಣಿಗ ರವಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಾಲಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಜೆಡಿಎಸ್ ಟಿಕೆಟ್ ತಪ್ಪಿಸಲು ತಂತ್ರಗಳು ನಡೆಯುತ್ತಿವೆ. ಯುವ ಮುಖಂಡ ಅಶೋಕ್ ಜಯರಾಂ, ಮಾಜಿ ಶಾಸಕ ಜಿ.ಬಿ. ಶಿವಕುಮಾರ್ ಹಾಗೂ ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಆಕಾಂಕ್ಷಿತರಾಗಿದ್ದಾರೆ.
ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರನ್ನು ಮಣಿಸಲು ಕೈ ಪಾಳಯ ರಣವ್ಯೂಹ ರಚಿಸುತ್ತಿದೆ. ಎಸ್.ಎಂ. ಕೃಷ್ಣ ಅಥವಾ ಶಾಸಕಿ ಕಲ್ಪನಾ ಸಿದ್ದರಾಜು ಕಾಂಗ್ರೆಸ್ ಅಭ್ಯರ್ಥಿಯಾದರೆ ಆಕಾಂಕ್ಷಿತರಾದ ಗುರುಚರಣ್ ಮತ್ತು ಮಧು ಮಾದೇಗೌಡ ಬೆಂಬಲಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಶಾಸಕ ಸುರೇಶ್‌ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿರುವ ಹಿನ್ನೆಲೆಯಲ್ಲಿ ಇಬ್ಬರೂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ನಾಗಮಂಗಲ ಕ್ಷೇತ್ರದಲ್ಲಿ ಸಂಸದ ಚಲುವರಾಯಸ್ವಾಮಿ ಹಾಗೂ ಮೇಲುಕೋಟೆ ಕ್ಷೇತ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯುತ್ತಿದ್ದರೆ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ, ಮುಖಂಡರಾದ ನಾರಾಯಣಗೌಡ, ಬಿ.ಪ್ರಕಾಶ್ ಅವರಲ್ಲಿ ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!