ಕ.ಪ್ರ. ವಾರ್ತೆ, ಮೈಸೂರು, ಆ.5
ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚಿಸುವ ಜವಾಬ್ದಾರಿಯನ್ನು ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ಇಡೀ ಜಿಲ್ಲೆಯಲ್ಲಿನ ಕೊಳವೆ ಬಾವಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ತೆಗೆದುಕೊಳ್ಳಬೇಕು. ಖಾಸಗಿಯಾಗಿ ಕೊರೆಸಿದ ವಿಫಲವಾದ ಕೊಳವೆ ಬಾವಿ ಮುಚ್ಚಿಸದಿದ್ದರೆ ಬೋರ್ವೆಲ್ ತೆಗೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತಾಲೂಕು ಮಟ್ಟದಲ್ಲಿ ಉಪ ತಹಸೀಲ್ದಾರ್ ಗಮನ ನೀಡಬೇಕು. ಬಾದಾಮಿಯಲ್ಲಿ ಸಂಭವಿಸಿರುವ ಘಟನೆಯಿಂದ ಯಾರೋ ಮಾಡಿದ ತಪ್ಪಿಗೆ ದಿನವೂ ನಾವು ಬೈಸಿಕೊಳ್ಳುವಂತಾಗಿದೆ. ಎಷ್ಟು ಕೊಳವೆಬಾವಿ ಕೊರೆಸಲಾಗಿದೆ. ಎಷ್ಟು ವಿಫಲವಾಗಿದೆ. ಈ ಪೈಕಿ ಎಷ್ಟನ್ನು ಮುಚ್ಚಲಾಗಿದೆ ಎಂಬ ಮಾಹಿತಿ ಕಲೆ ಹಾಕಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯತೆ ಸರಿಯಲ್ಲ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ. ಅವರನ್ನು ಕೂಡಲೆ ಬಂಧಿಸಲಾಗುವುದು ಎಂದರು.
ಡಿಸೆಂಬರ್ಗೆ ನೀರು: ಬಹುಗ್ರಾಮ ಕುಡಿಯುವ ನೀರು ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆದಿಲ್ಲ. ಜಯಪುರ ಹೋಬಳಿಯ 19 ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಕೆಲವು ಕಡೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ತಳೂರು ಬಹುಗ್ರಾಮ ಯೋಜನೆ ಕಾಮಗಾರಿ ಶೇ. 60 ರಷ್ಟು ಪೂರ್ಣವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸುವುದಾಗಿ ನೀರಾವರಿ ಇಲಾಖೆ ಇಇ ಭಾಸ್ಕರ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಮಾತನಾಡಿ, ದೊಡ್ಡಕೌವಲಂದೆ ಬಹುಗ್ರಾಮ ಯೋಜನೆಯು ಸರಿಯಾಗಿ ನಡೆದಿಲ್ಲ. ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹುಣಸೂರು ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಕೊರೆಸಿದ ಅನೇಕ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಆದ್ದರಿಂದ ಸಮೀಪದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಶಾಸಕ ಎಚ್.ಪಿ. ಮಂಜುನಾಥ್ ಮನವಿ ಮಾಡಿದರು.
ಫಲಿತಾಂಶ ಹೆಚ್ಚಿಸಿ: ಜಿಲ್ಲೆಯಲ್ಲಿ ಪ್ರೌಢಶಾಲಾ ಫಲಿತಾಂಶ ಕಡಿಮೆ ಆಗುತ್ತಿದೆ. ಕೂಡಲೆ ಗುಣಮಟ್ಟ, ಸ್ವಚ್ಛತೆ ಮತ್ತು ಫಲಿತಾಂಶ ಹೆಚ್ಚಿಸಲು ಅಗತ್ಯವಿರುವ ಕಾರ್ಯಕ್ರಮಗಳನ್ನು ಅಧಿಕಾರಿಗಳು ರೂಪಿಸಬೇಕು. ತಪ್ಪಿದರೆ ಡಿಡಿಪಿಐ ಮತ್ತು ಬಿಇಒಗಳನ್ನು ಹೊಣೆ ಮಾಡಿ ಅಮಾನತು ಪಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸರ್ಕಾರಿ ಶಾಲೆಗಳಲ್ಲಿ ಬಡವರು ಮತ್ತು ದಲಿತರು ಹೆಚ್ಚಾಗಿ ಶಾಲೆಗೆ ಸೇರುತ್ತಾರೆ. ನಾವು ಐದು ಮಕ್ಕಳಿದ್ದರೂ ಶಾಲೆಯನ್ನು ಮುಚ್ಚಬೇಡಿ ಎಂದು ಆದೇಶ ಹೊರಡಿಸಿ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದ್ದೇವೆ. ಆದರೂ ಫಲಿತಾಂಶ ಹೆಚ್ಚಳಕ್ಕೆ ಯಾವುದೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಎಚ್.ಆರ್. ಬಸಪ್ಪ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಾರೆ ಎಂದಾಗ ಇಡಿ ಸಭೆ ನಗೆಗಡಲಲ್ಲಿ ತೇಲಿತು. ಈ ಉತ್ತರದಿಂದ ತೃಪ್ತಿಯಾಗದ ಮುಖ್ಯಮಂತ್ರಿಗಳು, ಕಡ್ಡಾಯವಾಗಿ ಶಾಲೆಗಳಿಗೆ ಬಿಇಒ ಮತ್ತು ತಾವು(ಡಿಡಿಪಿಐ) ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.
ಕೃಷಿ ಇಲಾಖೆಗೆ ಸಂಬಂಧಿಸಿದ ಚರ್ಚೆಯ ವೇಳೆ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಕಚೇರಿಯಲ್ಲಿಯೆ ಕುಳಿತು ಕೆಲಸ ಮಾಡಿದರೆ ಆಗದು. ಗ್ರಾಮೀಣ ಪ್ರದೇಶಕ್ಕೆ ತೆರಳಿ ರೈತರ ಸಮಸ್ಯೆಗಳನ್ನು ಖುದ್ದು ಆಲಿಸಬೇಕು ಎಂದರು.
ನಂಬಿಕೆ ದ್ರೋಹದಡಿ ಬಂಧಿಸಿ: ತಾಲೂಕು ಮಟ್ಟದಲ್ಲಿ ವೈದ್ಯಾಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಇದೆ. ಅನೇಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ಕೂಡಲೆ ಅಂತವರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ದೂರು ಪಡೆದು ನಂಬಿಕೆ ದ್ರೋಹದಡಿ ಬಂಧಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.
ಕಾಳಸಂತೆಯಲ್ಲಿ ಆಹಾರ ಮಾರಾಟ ಮಾಡುವ ಗಿರಣಿ ಮಾಲೀಕರ ಮೇಲೆ ನಿಗಾ ವಹಿಸಬೇಕು. ಅಕ್ರಮ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ. ವೆಂಕಟೇಶ್, ಜಿ.ಟಿ.ದೇವೇಗೌಡ, ತನ್ವೀರ್ಸೇಠ್, ಚಿಕ್ಕಮಾದು, ಗೋ. ಮಧುಸೂದನ್, ಸಾ.ರಾ. ಮಹೇಶ್, ಆರ್. ಧರ್ಮಸೇನ, ಮರಿತಿಬ್ಬೇಗೌಡ, ಎಚ್.ಪಿ. ವೆಂಕಟೇಶ್, ಎಂ.ಕೆ. ಸೋಮಶೇಖರ್, ವಾಸು, ಜಿಪಂ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಉಪಾಧ್ಯಕ್ಷ ಎಲ್. ಮಾದಪ್ಪ ಇದ್ದರು.