ಕ.ಪ್ರ. ವಾರ್ತೆ, ಮೈಸೂರು, ಆ.6
ಹೊಸದಾಗಿ ಜಾರಿಗೆ ತಂದಿರುವ 2013ರ ಭೂಸ್ವಾಧೀನ ಕಾಯಿದೆ ಪ್ರಕಾರ ರಾಜ್ಯದಲ್ಲಿನ 8 ರಿಂದ 9 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಹೇಳಿದರು.
ಕಾವೇರಿ ನೀರಾವರಿ ನಿಗಮ ನಿಯಮತಿ (ಕಾಡಾ) ಹಾಗೂ ಹೈದರಾಬಾದ್ನ ಭಾರತೀಯ ಆಡಳಿತ ಸಿಬ್ಬಂದಿ ತರಬೇತಿ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಡಾ ಎಂಜಿನಿಯರುಗಳಿಗೆ ಏರ್ಪಡಿಸಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನೀರಾವರಿ ಇಲಾಖೆಯಿಂದ ಅತಿ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತದೆ. ಸುಮಾರು ಶೇ.60 ರಷ್ಟು ಭೂಸ್ವಾಧೀನವನ್ನು ನೀರಾವರಿ ಇಲಾಖೆಯೇ ಕೈಗೊಳ್ಳುವುದರಿಂದ ಈ ಹಿಂದೆ ಇದ್ದ 1898ರ ಭೂಸ್ವಾಧೀನ ಕಾಯ್ದೆ ಬದಲಿಗೆ 2013ರ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯು ಕಳೆದ ಜ.1 ರಿಂದ ಜಾರಿಗೆ ಬಂದಿದೆ. ಈ ಕಾಯ್ದೆಯಡಿ ರೈತರಿಗೆ ಹೆಚ್ಚು ಪರಿಹಾರ ಸಿಗುವುದರ ಜತೆಗೆ ಪಾರದರ್ಶಕತೆ ಕಾಪಾಡಬಹುದಾಗಿದೆ. ಪುನರ್ವಸತಿ ಮತ್ತು ಪರಿಸರದ ಮೇಲೆ ಆಗುವ ಪರಿಣಾಮವನ್ನೂ ಗಮನದಲ್ಲಿಟ್ಟುಕೊಂಡು ಪರಿಹಾರ ನಿಗದಿಪಡಿಸಲಾಗುತ್ತದೆ ಎಂದರು.
ನೀರಾವರಿ ಭೂಮಿಯೂ ವಶ: ಮುಂದಿನ ದಿನಗಳಲ್ಲಿ ಸುಮಾರು 8 ರಿಂದ 9 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇದರಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಈ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದ್ದು, ವಿವಿಧ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವಲ್ಲಿ ಈ ಹೊಸ ಕಾಯ್ದೆ ಸಹಾಯವಾಗುತ್ತದೆ. ಯೋಜನೆಗಳು ಸರಿಯಾದ ಸಮಯಕ್ಕೆ ಅನುಷ್ಠಾನ ಆಗದಿದ್ದಲ್ಲಿ ಹೆಚ್ಚು ವೆಚ್ಚವಾಗುವುದರ ಜತೆಗೆ ಯೋಜನೆಯ ಉಪಯೋಗ ಕಡಿಮೆಯಾಗುತ್ತದೆ. ಹಿಂದಿನ ಕಾಯ್ದೆಯಲ್ಲಿ ಕಾನೂನು ಕಟ್ಟಳೆಗಳು ಬಹಳಷ್ಟು ಇತ್ತು. ಆದರೆ ಪ್ರಸ್ತುತ ಹೊಸ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ತುಂಬಾ ಕಡಿಮೆ. ಈ ಕಾಯ್ದೆಯ ಬಗ್ಗೆ ಎಂಜಿನಿಯರುಗಳು ಮಾಹಿತಿ ತಿಳಿದುಕೊಳ್ಳಬೇಕಾದದ್ದು ಅವಶ್ಯಕವಿದೆ ಎಂದು ತಿಳಿಸಿದರು.
ಈ ಕಾಯ್ದೆಯಡಿಯಲ್ಲಿ ಭೂಸ್ವಾಧೀನ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ಆಯುಕ್ತರನ್ನು ನೇಮಿಸಲಾಗುತ್ತದೆ. ಇದರಿಂದ ಈ ಕಾಯ್ದೆಯ ಅನುಷ್ಠಾನ ಶೀಘ್ರಗತಿಯಲ್ಲಿ ಆಗಲಿದೆ. ಈ ಕಾಯ್ದೆ ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ ಹೈದರಾಬಾದ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿ ನೀಡಲು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಹೈದರಾಬಾದ್ನ ಅಡ್ಮಿನಿಸ್ಟ್ರೇಷನ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದ ಡಾ.ರಶ್ಮಿ ನಾಯರ್, ಡಾ.ವಲ್ಲಿ ಮಾಣಿಕ್ಕಂ, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಇದ್ದರು. ಕಾಡಾ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ಗಾಯಿತ್ರಿ ಸ್ವಾಗತಿಸಿದರು. ಎಸ್ಟೇಟ್ ಆಫಿಸರ್ ಕೆ.ಆರ್. ಭಾಸ್ಕರ್ ವಂದಿಸಿದರು. ಡಿ.ರವಿಕುಮಾರ್ ನಿರೂಪಿಸಿದರು. ಸುಮಾರು 45ಕ್ಕೂ ಹೆಚ್ಚು ಹಿರಿಯ ಎಂಜಿನಿಯರುಗಳು ಮತ್ತು ಭೂಸ್ವಾಧೀನಾಧಿಕಾರಿಗಳು ಭಾಗವಹಿಸಿದ್ದರು.