ಮೈಸೂರು: ಸ್ಟೇಟ್ ಬ್ಯಾಂಕ್ ಮೈಸೂರು ಗೃಹ ಸಾಲದಲ್ಲಿ ವಿಮೆಯ ಹೆಸರಿನಲ್ಲಿ ತಮಗಾಗಿರುವ ನ್ಯೂನತೆಯ ವಿರುದ್ಧ ಗ್ರಾಹಕರೊಬ್ಬರು ಹೋರಾಟ ನಡೆಸುತ್ತಿದ್ದಾರೆ.
ನಗರದ ಇಟ್ಟಿಗೆಗೂಡು ಲೋಕರಂಜನ್ ಮಹಲ್ ರಸ್ತೆಯ ನಿವಾಸಿ ಎನ್.ರಮೇಶ್ ಬಲ್ಲಾಳ ಈ ಗ್ರಾಹಕರು.
ಅವರಿಗೆ ಇಟ್ಟಿಗೆಗೂಡಿನ ಎಸ್ಬಿಎಂ ಶಾಖೆ ಹಾಗೂ ಆರ್ಎಎಸ್ಎಂಇಸಿಸಿಸಿ ವತಿಯಿಂದ 2011ರ ಡಿ.24 ರಂದು 11,57,305 ರು. ಸಾಲ, ಅದರಲ್ಲಿ 10,30,000 ರು. ಗೃಹಸಾಲ ಹಾಗೂ 1,27,305 ರು. ಜೀವವಿಮೆಯಾಗಿ ಅನುಮೋದನೆಗೊಂಡಿದೆ. ಆದರೆ ಅವರು ಅದೇ ವರ್ಷದ ಡಿ.29 ರಂದು ತಮಗೆ ಯಾವುದೇ ರೀತಿಯ ವಿಮೆ ಬೇಡ ಎಂದು ಬ್ಯಾಂಕ್ನ ಮೊಹರು ಮತ್ತು ಸಂಬಂಧಪಟ್ಟವರ ಸಹಿಯೊಂದಿಗೆ ಉತ್ತರ ಪಡೆದಿದ್ದಾರೆ. ಹೀಗಾಗಿ ಸಾಲದ ಬಾಬ್ತು 10.30 ಲಕ್ಷ ರು.ಗಳನ್ನು 156 ಮಾಸಿಕ ಕಂತುಗಳಲ್ಲಿ ಪಾವತಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರು ಅನುಮೋದನೆಗೊಂಡ ಪೂರ್ಣ ಮೊತ್ತವನ್ನು ಸಾಲವಾಗಿ ಪಡೆಯಲಿಲ್ಲ. ಬದಲಿಗೆ 6 ಲಕ್ಷ ರು.ಗಳನ್ನು ಮಾತ್ರ ಪಡೆದರು. ಹೀಗಾಗಿ ಸಾಲ ಮರುಪಾವತಿ ಮಾಸಿಕ ಕಂತುಗಳನ್ನು 156 ರಿಂದ 70-80 ಕ್ಕೆ ಇಳಿಸಬೇಕು ಎಂಬುದು ಅವರ ವಾದ. ಇದು ಬ್ಯಾಂಕಿನ ಅನುಮೋದನೆ ಪತ್ರದಲ್ಲಿಯೂ ಇದೆ ಎನ್ನುತ್ತಾರೆ ಬಲ್ಲಾಳರು.ಆದರೆ 2014ರ ಏ.7 ರಂದು 8.4.2014 ರಿಂದ 7.4.2026 ರವರೆಗೆ ಅಂದರೆ 12 ವರ್ಷಗಳಿಗೆ ಗೃಹ ಖಾತೆಗೆ ಕಟ್ಟಡ ವಿಮೆ ಎಂದು 5,264 ರು.ಗಳನ್ನು ಕಡಿತ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಬಲ್ಲಾಳರು, ಬ್ಯಾಂಕಿನಿಂದ ಪಡೆದಿದ್ದ ಪೂರ್ಣ ಗೃಹ ಸಾಲವನ್ನು ಅಸಲು ಮತ್ತು ಬಡ್ಡಿ ಸಮೇತ 9.7.2014 ರಂದು ಮರು ಪಾವತಿ ಮಾಡಿದ್ದಾರೆ. ಹೀಗಾಗಿ ತಮಗೆ 12 ವರ್ಷಗಳಿಗೆ ಕಟ್ಟಡ ವಿಮೆ ಕಡಿತ ಮಾಡಿರುವುದು ಸರಿಯಲ್ಲ ಎಂದು ಬ್ಯಾಂಕ್ ಶಾಖೆಗೆ ಅನೇಕ ಪತ್ರಗಳನ್ನು ಬರೆದರು. ಆದರೆ ಉತ್ತರ ಸಿಕ್ಕಿಲ್ಲ.
ಅವಸರದಲ್ಲಿ ಸಮಸ್ಯೆ ಆಲಿಸಿದ ಸಿಎಂ
ಮೈಸೂರು: ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಬೆಳಗ್ಗೆ ಜನತಾದರ್ಶನ ನಡೆಸಿದರು. ಜನತಾ ದರ್ಶನ ನಡೆಸಲಿದ್ದಾರೆ ಎಂಬ ಮಾಹಿತಿ ತಿಳಿದು ತಮ್ಮ ಅಹವಾಲು ಸಲ್ಲಿಸಲು ನೂರಾರು ಮಂದಿ ಆಗಮಿಸಿದ್ದರು. ಆದರೆ ಬನ್ನೂರಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವಸರದಲ್ಲಿಯೇ ಮನವಿ ಪತ್ರ ಸ್ವೀಕರಿಸಿದರು. ಇದರಿಂದ ಗಂಟೆಗಟ್ಟಲೆ ಕಾದು ನಿಂತಿದ್ದ ವೃದ್ಧರು, ಮಹಿಳೆಯರು, ನೊಂದವರಿಗೆ ನಿರಾಸೆಯಾಯಿತು.
ಕನ್ನಡಕ ಬೀಳಿಸಿಕೊಂಡ ಸಿಎಂ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಟಿ.ನರಸೀಪುರ ತಾಲೂಕು ಬನ್ನೂರಿನಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನಾ ಸಮಾರಂಭದಲ್ಲೂ ನಿದ್ದೆಗೆ ಜಾರಿದ್ದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಭಾಷಣ ಮಾಡುತ್ತಿದ್ದಾಗ ನಿದ್ರೆಗೆ ಜಾರಿದ ಮುಖ್ಯಮಂತ್ರಿಗಳು ತೂಕಡಿಸಿ... ತೂಕಡಿಸಿ..... ಕನ್ನಡಕ ಬೀಳಿಸಿಕೊಂಡರು. ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಧರ್ಮಸೇನ ಕನ್ನಡಕ ಎತ್ತಿಕೊಟ್ಟರು.