ಮೈಸೂರು: ಕೆಪಿಎಸ್ಸಿ ಮೂಲಕ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡುವಂತೆ ಆಗ್ರಹಿಸಿ ಎಸ್ಡಿಪಿಐ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಕೆಪಿಎಸ್ಸಿ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೊಳಪಟ್ಟು ಷರತ್ತುಬದ್ಧ ನೇಮಕ ಆದೇಶ ನೀಡಬೇಕು. ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಿಐಡಿ ವರದಿ ಅನ್ವಯ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು. ಅದು ಬಿಟ್ಟು ನೆಗಡಿ ಬಂದರೆ ಮೂಗನ್ನೆ ಕತ್ತರಿಸುತ್ತೇವೆ ಎಂದು ಹೊರಡುವುದು ಸರಿಯಲ್ಲ. ಕೆಪಿಎಸ್ಸಿ ಪ್ರಕರಣವು ಹಿಂದುಳಿದ ಜಾತಿಗಳ ವಿರುದ್ಧ ಕೇಂದ್ರಿಕೃತವಾಗುತ್ತಿದೆ. ಯಾವ ಸಮುದಾಯಗಳು ಶೋಷಣೆಗೆ ಒಳಪಟ್ಟಿದ್ದರೊ, ಯಾವ ಸಮುದಾಯಗಳನ್ನು ಈ ರಾಷ್ಟ್ರದ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಂದ ದೂರವಿಡಲಾಗಿತ್ತೊ ಅಂತಹ ಹಿಂದುಳಿದ ಜಾತಿಗಳನ್ನು ಮತ್ತೆ ಮತ್ತೆ ಶೋಷಿಸುತ್ತಿರುವ ಪ್ರಕರಣಗಳು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ ಎಂದು ದೂರಿದರು.
ಈಗಾಗಲೆ ಸಿಐಡಿ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅಲ್ಲಿ ಕೆಲವರನ್ನು ತಪ್ಪಿತಸ್ಥರೆಂದು ಊಹಿಸಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಿ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆ ಈ ವೇಳೆ ಇಡೀ ನೇಮಕಾತಿಯನ್ನು ರದ್ದುಪಡಿಸುವ ಸರ್ಕಾರದ ಧೋರಣೆಯು ಎಲ್ಲ ವರ್ಗದ ಬಡ ಪ್ರತಿಭಾವಂತರಿಗೆ, ನ್ಯಾಯಯುತವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿ ನೇಮಕಾತಿ ಆದೇಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಬಹುದೊಡ್ಡ ಅನ್ಯಾಯ ಎಸಗಿದಂತಾಗಿದೆ ಎಂದರು.
ಎಸ್ಡಿಪಿಐ ಮುಖಂಡರಾದ ಅಮ್ಜತ್ ಖಾನ್, ಕೌಶಾನ್ಬೇಗ್, ಕುಮಾರಸ್ವಾಮಿ ಇದ್ದರು.