ಮೈಸೂರು: ಕೃಷಿ ಪ್ರಧಾನವಾದ ಭಾರತದಲ್ಲಿ ಬೆಲೆ ನಿರ್ಣಯಿಸುವಾಗ ಕೃಷಿಯೆ ಪ್ರಧಾನ ಆಗಬೇಕಿತ್ತು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಗಾನಭಾರತಿಯ ವೀಣೆಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸ್ (ಲಘು ಸಂಗೀತ ಮತ್ತು ಭಕ್ತಿ ಸಂಗೀತ)ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಕೃಷಿ ಪ್ರಧಾನ ದೇಶ. ಅಂದ ಮೇಲೆ ಬೆಲೆ ನಿರ್ಣಯಿಸುವಾಗ ಕೃಷಿ ಪ್ರಧಾನ ಆಗಬೇಕಿತ್ತು. ಪಶ್ಚಿಮದ ವ್ಯಾಪಾರದಿಂದಾಗಿ ನಮಗೆ ಈಗ ಶ್ರಮದ ಬೆಲೆ ತಿಳಿಯುತ್ತಿದೆ. ಶ್ರಮವನ್ನು ಅಳೆಯುವ ಸಾಧನವಾಗಿ ಬರವಣಿಗೆ ಬಳಸಲಾಗುತ್ತಿದೆ. ಒಂದು ವರದಿಯಲ್ಲಿ ಹತ್ತು ಮಂದಿ ರೈತರ ಒಂದು ದಿನದ ಶ್ರಮ, ಒಬ್ಬ ಗುಮಾಸ್ತ ಅರ್ಧ ಗಂಟೆಯಲ್ಲಿ ಯೋಚಿಸಿ ಸಹಿ ಹಾಕುವ ಶ್ರಮಕ್ಕೆ ಸಮ ಎಂದು ಹೇಳಿತ್ತು. ಅಂದ ಮೇಲೆ ನಾವು ಶ್ರಮವನ್ನು ಯಾವ ಮಾನದಂಡದಲ್ಲಿ ಅಳೆಯುತ್ತಿದ್ದೇವೆ ಎಂದು ಪ್ರಶ್ನಿಸಿದರು.
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಅನೇಕ ಅನುಕೂಲಗಳು ಸೃಷ್ಟಿಯಾಗಿವೆ. ಅವೆಲ್ಲವೂ ಶೋಷಣೆಗಾಗಿಯೆ ಸೃಷ್ಟಿಯಾಗಿವೆ. ಕಾರ್ಪೊರೇಟ್ ವಲಯದಲ್ಲಿ ಪ್ರತಿಯೊಂದಕ್ಕೂ ಬೆಲೆ ಇದೆ. ಜತೆಗೆ ಪಾರಂಪರಿಕ ವಿದ್ಯೆ ಬಗೆಗಿನ ಧೋರಣೆ ಬದಲಾಗಿದೆ. ಸುಗಮ ಸಂಗೀತದಲ್ಲಿ ನನಗೆ ಅತ್ಯಂತ ಆತ್ಮೀಯ ಎಂದರೆ ಮೈಸೂರು ಅನಂತಸ್ವಾಮಿ. ನನ್ನ ಅನೇಕ ಹಾಡಿಗೆ ರಾಗ ಸಂಯೋಜನೆ ಮಾಡಿದ್ದ. ಆತ ಪಟ್ಟ ಶ್ರಮವನ್ನು ಈಗಿನವರು ಪಡುತ್ತಿಲ್ಲ. ಒಂದರ್ಥದಲ್ಲಿ ಸಾಂಸ್ಕೃತಿಕ ಲೋಕ ಬದಲಾವಣೆಯ ಕಡೆ ಹೋಗುತ್ತಿದೆ ಎಂದರು.
ಜನಪದವೂ ಒಂದು ಶಾಸ್ತ್ರವೆ. ಅದರಲ್ಲಿಯೂ ನಾದವಿದೆ. ಸಂತೋಷ, ದುಃಖ, ವಿರಹ, ತವಕ, ತಲ್ಲಣ, ಆನಂದ ಇವಕ್ಕೆಲ್ಲ ಬಗೆ ಬಗೆಯ ನಾದವಿದೆ. ನಾದಕ್ಕೆ ನಿರ್ದಿಷ್ಟ ಭಾಷೆ ಇದೆ. ಹಾಗೆಯೆ ಯಕ್ಷಗಾನಕ್ಕೂ ನಾದ ಇದೆ. ಅದೊಂದು ಗಾಯನ ಪದ್ಧತಿ. 800 ವರ್ಷಗಳಿಂದ ಅದು ವೃತ್ತಿಯಾಗಿ ಬಂದಿದೆ ಎಂದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ವಿದುಷಿ ಎಚ್.ಆರ್. ಲೀಲಾವತಿ ಮಾತನಾಡಿದರು. ಮೈಸೂರು ವಿವಿ ಲಲಿತಕಲಾ ಕಾಲೇಜು ಪ್ರಾಧ್ಯಾಪಕ ವಿದ್ವಾನ್ ಡಾ.ಸಿ.ಎ. ಶ್ರೀಧರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಗೀತ ವಿವಿ ಕುಲಪತಿ, ವಿದುಷಿ ಡಾ. ಸರ್ವಮಂಗಳಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಎಂ.ಎಸ್. ಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು.