ಕ.ಪ್ರ. ವಾರ್ತೆ, ಮುದಗಲ್, ಆ.6
ಸರ್ಕಾರ ಬಂಜಾರ ನಿಗಮದ ಮೂಲಕ ತಾಂಡಾಗಳ ಅಭಿವೃದ್ಧಿ, ಲಂಬಾಣಿ ಸಮಾಜಕ್ಕೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದರೂ ಸದುಪಯೋಗವಾಗುತ್ತಿಲ್ಲ ಎಂಬುದಕ್ಕೆ ಮುದಗಲ್ ಸಮೀಪದ ಜಕ್ಕೆರಮಡು ತಾಂಡಾದ ಸೇವಾಲಾಲ ಭವನ ಉದ್ಘಾಟನೆ ಸಮಾರಂಭ ಸಾಕ್ಷಿಯಾಯ್ತು.
ಸಮೀಪದ ಜಕ್ಕೆರಮಡು ತಾಂಡಾದಲ್ಲಿ ಬುಧವಾರ ಸೇವಾಲಾಲ ಭವನ ಉದ್ಘಾಟನೆಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಬಂಜಾರ ಸಮಾಜದ ಗಬ್ಬೂರ ವಾಡಿ ಮಠದ ಬಳೆರಾಮಮಹಾರಾಜರು, ಶಾಸಕರು ಮಸ್ಕಿ ಕ್ಷೇತ್ರದಲ್ಲಿ ತಾಂಡಾಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನಿಗಮದ ಮೂಲಕ ನೀಡಿದ್ದಾರೆ. ಆದರೆ ಕಾಮಗಾರಿಗಳ ಬಗ್ಗೆ ನಿಗಾ ವಹಿಸದ ಕಾರಣ ಭವನದ ಕಾಮಗಾರಿ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
10 ಲಕ್ಷ ಖರ್ಚು ಮಾಡಿದ ಭವನ ಈಗಷ್ಟೇ ಉದ್ಘಾಟನೆಯಗುತ್ತಿದೆ. ಆಗಲೇ ಗೋಡೆಗಳು ಬಿರುಕು ಬಿಟ್ಟಿವೆ. ಬೃಹತ್ ಕಟ್ಟಡಕ್ಕೆ ಅಗತ್ಯವಿರುವ ಪಿಲ್ಲರ್‌ಗಳನ್ನು ಅಳವಡಿಸಿಲ್ಲ, ಅಲ್ಲದೆ ಫ್ಲೋರಿಂಗ್ ಕಾಮಗಾರಿ ಸರಿಯಾಗಿ ಮಾಡದ ಕಾರಣ ನೆಲಹಾಸು ಕಲ್ಲುಗಳು ಕುಂಟಾಡುತ್ತಿವೆ ಎಂದು ಕಾಮಗಾರಿಯ ಸ್ಥಿತಿಗತಿಯನ್ನು ಬಿಚ್ಚಿಚ್ಚರು.
ಅಧಿಕಾರಿಗಳು ಕರ್ತವ್ಯ ಮೆರೆಯಲಿ: ಅಧಿಕಾರಿಗಳು ತಮ್ಮ ಕರ್ತವ್ಯದ ಬಗ್ಗೆ ನಿಗಾ ವಹಿಸಿದರೆ ಮಾತ್ರ ಅನುದಾನ ಸದ್ಬಳಕೆಯಾಗುತ್ತದೆ. ಇಲ್ಲವಾದಲ್ಲಿ ಕಳಪೆ ಕಾಮಗಾರಿ ಮೂಲಕ ಹಣ ದುರ್ಬಳಕೆಯಾಗುತ್ತದೆ ಎಂದು ಶಾಸಕರಿದ್ದ ವೇದಿಕೆ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದರು.
ಬಂಜಾರ ಸಮಾಜ ಕಡುಬಡವ ಸಮಾಜ, ನಂಬಿದವರಿಗೆ ಎಂದೂ ಮೋಸ ಮಾಡಲಾರರು. ಕ್ಷೇತ್ರದಲ್ಲಿ ಬಂಜಾರ ಸಮಾಜವಲ್ಲದೇ ಕಡುಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕರ ಸೇವೆ ದೊರೆಯುವಂತಾಗಬೇಕು. ಅನುದಾನ ನೀಡಿದರೆ ಸಾಲದೆಂಬಂತೆ ಅಧಿಕಾರಿಗಳಿಗೆ ಉತ್ತಮ ಕರ್ತವ್ಯ ನಿರ್ವಹಿಸಲು ಸೂಚಿಸುವ ಮೂಲಕ ಅನುದಾನ ಸದ್ಬಳಕೆ ಯಾಗಲಿ ಎಂದರು.
ಆದೇಶ ಕಾಗದಕ್ಕಷ್ಟೇ ಸೀಮಿತ: ಹೊಟ್ಟೆ ಪಾಡಿಗಾಗಿ ಬಂಜಾರ ಸಮಾಜ ಸೇರಿದಂತೆ ಕಡುಬಡವ ಕುಟುಂಬಗಳು ಗುಳೆ ಹೋಗುತ್ತಿವೆ. ಅಧಿವೇಶನಗಳಲ್ಲಿ ಗುಳೆ ಹೋಗುವ ತಡೆಯುವ ನಿಟ್ಟಿನಲ್ಲಿ ಚರ್ಚೆ, ಕಾಗದದಲ್ಲಿ ಆದೇಶಗಳು ಉಪಯೋಗವಾಗದಂತಾಗಿವೆ. ಚರ್ಚೆಗಳು ಕಾಗದದಲ್ಲಿ ಉಳಿಯದೇ ಕೆಲಸವನ್ನು ಸೃಷ್ಟಿಸುವ ಮೂಲಕ ಅಧಿಕಾರಿಗಳ ಉತ್ತಮ ಕಾರ್ಯಕ್ಷಮತೆ ಮೂಲಕ ಜಾರಿಗೆ ಬಂದರೆ ಗುಳೆ ಹೋಗುವುದನ್ನು ತಡೆಯಬಹುದಾಗಿದೆ ಎಂದರು.
ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ 30ಕ್ಕೂ ಅಧಿಕ ಲಂಬಾಣಿ ತಾಂಡಾಗಳಿಗೆ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. ಸುಮಾರು 5 ದೊಡ್ಡ ತಾಂಡಾಗಳಿಗೆ ಸೇವಾಲಾಲ ಭವನ ನಿರ್ಮಿಸಲಾಗಿದೆ. ಲಿಂಗಸ್ಗೂರು ತಾಲೂಕಿನಲ್ಲಿ ನದಿ ನೀರಿನ ಸಂಗ್ರಹವಿರದೇ ಇರುವುದರಿಂದ ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಅದಕ್ಕೆ ಈ ತಾಂಡಾ ಕೂಡ ಹೊರತಾಗಿಲ್ಲ.
ಕುಡಿವ ನೀರಿಗೆ ಶಾಶ್ವತ ಪರಿಹಾರ
ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಶಾಶ್ವತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವದು. ಬಂಜಾರ ಸಮಾಜದ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ಕಾರ ಚಿಂತನೆಯಲ್ಲಿದ್ದು ಇನ್ನೊಂದು ವರ್ಷದಲ್ಲಿ ದೊಡ್ಡ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ತಿಳಿಸಿದರು. ಜೇವರ್ಗಿ- ಚಾಮರಾಜನಗರ 638 ಕಿಮೀ ರಸ್ತೆಯನ್ನು ಕಳೆದ ಯುಪಿಎ ಸರ್ಕಾರ ಕೊನೆ ಘಳಿಗೆಯಲ್ಲಿ ಮೇಲ್ದರ್ಜೆಗೇರಿಸಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಲಿಂಗಸ್ಗೂರು- ಸಿಂಧನೂರು ರಸ್ತೆ ಮೇಲ್ದರ್ಜೆಗೇರಿಸಿದೆ ಎಂದು ಹೇಳಿದರು. ಸಮಾರಂಭದಲ್ಲಿ ತಾಪಂ ಅಧ್ಯಕ್ಷ ರುದ್ರಗೌಡ ತುರಡಗಿ, ಗ್ರಾಪಂ ಅಧ್ಯೆಕ್ಷೆ ನಿಂಗಮ್ಮ, ಬಸವಂತರಾಯ ಕುರಿ, ಶರಣಪ್ಪ ತೆರಿಭಾವಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಶಂಕ್ರಪ್ಪ, ಉಪಾಧ್ಯಕ್ಷ ಮಲ್ಲರಡ್ಡೆಪ್ಪ, ಜಿಲ್ಲಾ ಬಂಜಾರ ಸಮಾಜ ಕಾರ್ಯದರ್ಶಿ ತಮ್ಮಣ್ಣ ಮುಂತಾದವರಿದ್ದರು. ನ್ಯಾಯವಾದಿ ಹರಿಶ್ಚಂದ್ರ ರಾಠೋಡ್ ಕಾರ್ಯಕ್ರಮ ನಿರೂಪಿಸಿದರು.
ತಾಂಡಾಗಳ ಅಭಿವೃದ್ಧಿಗೆ ನಿಗಮದ ಯೋಜನೆ: ಶಾಸಕ
ಮಸ್ಕಿ: ರಾಜ್ಯದಲ್ಲಿ ತಾಂಡಾಗಳ ಅಭಿವೃದ್ಧಿಗಾಗಿ ಬಂಜಾರಾ ನಿಗಮದ ಮೂಲಕ ಸರ್ಕಾರ ಹಲವಾರು ಯೋಜನೆ ಜಾರಿಗೆ ತರುತ್ತಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಸಮೀಪದ ಅಡವಿಭಾವಿ ತಾಂಡಾದಲ್ಲಿ ಬುಧವಾರ 10 ಲಕ್ಷ ವೆಚ್ಚದ ಶ್ರೀ ಸತ್ಯಸೇವಾಲಾಲ್ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ ಕ್ಷೇತ್ರದ ಎರಡು ತಾಂಡಾಗಳ ಸಮುದಾಯ ಭವನದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು. ಸಮುದಾಯ ಭವನವನ್ನು ದುರ್ಗಾದೇವಿಯ ದೇವಸ್ಥಾನದ ಹತ್ತಿರ ಬಂಜಾರಾ ಸಮಾಜದ ಎಲ್ಲರ ಒಪ್ಪಿಗೆ ಪಡೆದು ನಿರ್ಮಿಸಲು ಸೂಚಿಸಿ ತಾಂಡಾಗಳ ಅಭಿವೃದ್ಧಿಗಾಗಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯ ಮಹಾದೇವಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ ಪಾಟೀಲ್, ಡಾ. ಬಿ.ಎಚ್. ದಿವಟರ್, ದೊಡ್ಡಪ್ಪ ಕಡಬೂರು, ಶಿವಕುಮಾರ, ಸುರೇಶ ಹರಸೂರು, ಮಲ್ಲಯ್ಯ ಬಳ್ಳಾ, ಎಲ್ಲೋಜಿರಾವ್ ಕೋರೆಕರ್, ಹನುಮಂತಪ್ಪ ವೆಂಕಟಾಪುರ ಸೇರಿ ಅನೇಕರಿದ್ದರು.