ಅತಿವೃಷ್ಟಿ, ಬೆಳೆ ನಷ್ಟ ಪರಿಹಾರಕ್ಕೆ ಮನವಿ
ಅರಕಲಗೂಡು: ಪ್ರಸಕ್ತ ವರ್ಷ ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಬೆಳೆ ಹಾನಿ ಸಂಭವಿಸಿದ್ದು, ರೈತರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ರೈತರ ಬೆಳೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಗೆರೆ ಬೈರೇಗೌಡ ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿ ನಡೆಸಿದ ಅವರು ತಾಲೂಕಿನ ಕಸಬಾ ಹೋಬಳಿಯ ಕೆಲ ಪ್ರದೇಶಗಳನ್ನು ಹೊರತು ಪಡಿಸಿದರೆ, ತಾಲೂಕಿನ ಬಹುತೇಕ ಎಲ್ಲಾ ನಾಲ್ಕು ಹೋಬಳಿಗಳೂ ಅತಿವೃಷ್ಟಿಯಿಂದ ತೀವ್ರ ತೊಂದರೆಗೊಳಗಾಗಿವೆ. ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಎಲ್ಲ ತರಹದ ಬೆಳೆಗಳೂ ಒಂದಲ್ಲಾ ಒಂದು ರೀತಿಯ ರೋಗಗಳಿಗೆ ತುತ್ತಾಗಿವೆ. ಕೊಣನೂರು ಮತ್ತು ಮಲ್ಲಿಪಟ್ಟಣ ಹೋಬಳಿಗಳಲ್ಲಿ ಶೇ.50ರಷ್ಟು ಸಹ ಹೊಗೆಸೊಪ್ಪು ಬೆಳೆ ಬಂದಿಲ್ಲ ಎಂದರು.
ಈ ಕುರಿತು ತಾಲೂಕಿನ ಅಧಿಕಾರಿಗಳು ಕ್ಷೇತ್ರ ಪರ್ಯಟನೆ ಮಾಡಿ ಸರ್ಕಾರಕ್ಕೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಸೇರಿದಂತೆ ಶಾಸಕ ಎ.ಮಂಜು ಹಾಗೂ ಸಂಬಂಧಪಟ್ಟ ಸಚಿವರುಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಟಿ.ಪುನೀತ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೀರ್ತಿರಾಜ್, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಮಾಗೋಡು ಬಸವರಾಜ್, ಬಿ.ಎನ್.ಸಿದ್ದಲಿಂಗೇಶ್ವರ, ಕೃಷ್ಣ ಇತರರು ಉಪಸ್ಥಿತರಿದ್ದರು.