ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಸ್‌ಬಿಎಂನಿಂದ ರು. 15 ಕೋಟಿ ಕೃಷಿ ಸಾಲ

Srinivasa Murthy VN
Updated On : 1 Aug 2013, 11:59 am

ಚಿಕ್ಕನಾಯಕನಹಳ್ಳಿ: ಜಿಲ್ಲೆಯಲ್ಲಿ  12 ದಿನಗಳಿಂದ ಹಮ್ಮಿಕೊಂಡಿರುವ ಕೃಷಿ ಸಾಲ ಮಹೋತ್ಸವದಲ್ಲಿ ರೈತರಿಗೆ ಸುಮಾರು 15 ಕೋಟಿ ರು.ಗಳ ಸಾಲ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ಎಸ್‌ಬಿಎಂ ಸಹಾಯಕ ಮಹಾ ಪ್ರಬಂಧಕರಾದ ಪಿ.ಶಂಕರ್ ತಿಳಿಸಿದರು.
ಜುಲೈ 31ರಂದು ಪಟ್ಟಣದಲ್ಲಿ ಎಸ್‌ಬಿಎಂ ವತಿಯಿಂದ ಹಮ್ಮಿಕೊಂಡಿದ್ದ ಕೃಷಿಸಾಲ ಮಹೋತ್ಸವವನ್ನು
ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸ್ವಾತಂತ್ರ ಪೂರ್ವದ 1913ರಲ್ಲೇ ಪ್ರಾರಂಭವಾದ  ಬ್ಯಾಂಕ್ ಪ್ರಾರಂಭದಿಂದಲೂ ರೈತರಿಗೆ ಸಾಲ ನೀಡಿದ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶತಮಾನ ತುಂಬಿರುವ ಈಸಂದರ್ಭದಲ್ಲಿ ಬರಗಾಲ, ಬೆಲೆ ಏರಿಕೆಯಂತಹ ಸಂಕಷ್ಟಗಳಲ್ಲಿ ಸಿಲುಕಿರುವ ಅನ್ನದಾತ ರೈತನಿಗೆ ನೆರವಾಗುವ ನಿಟ್ಟಿನಲ್ಲಿ ಕೃಷಿ ಸಾಲಮಹೋತ್ಸವವನ್ನು ಹಮ್ಮಿಕೊಂಡು, ಜಿಲ್ಲೆಯಲ್ಲಿ ಇದುವರೆಗೆ 15 ಕೋಟಿ ರು.ಗಳ ಹತ್ತಿರ ಸಾಲ ಮಂಜೂರು ಮಾಡಲಾಗಿದೆ. ಇನ್ನು ಬಹುತೇಕ ರೈತರು ಬ್ಯಾಂಕುಗಳಲ್ಲಿ ಸಾಲ ಸಿಗುವ ಬಗ್ಗೆ ಅನುಮಾನದಿಂದ ಬ್ಯಾಂಕ್ ಕಡೆ ತಲೆಹಾಕುತ್ತಿಲ್ಲ. ಅನುಮಾನ ಬಿಡಿ, ಬ್ಯಾಂಕ್ ನಿಮ್ಮದು. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲಾ ವರ್ಗದವರಿಗೂ ನಮ್ಮಿಂದ ಸೇವೆ ದೊರೆಯುತ್ತದೆ. ರೈತರಲ್ಲಿರುವ ಇಂತಹ ಸಂಶಯಗಳನ್ನು ನಿವಾರಿಸಲೆಂದೇ ಕೃಷಿ ಸಾಲ ಮಹೋತ್ಸವಗಳನ್ನು ಹಮ್ಮಿಕೊಂಡಿದ್ದೇವೆ. ಇಂತಹ ಸೇವೆಯನ್ನು ಗುರುತಿಸಿ ನಮ್ಮ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಬ್ಯಾಂಕ್ ಎಂಬ ಪ್ರಶಸ್ತಿ ದೊರೆತಿದೆ ಎಂದರು.
ರೈತ ಸ್ನೇಹಿ ಬ್ಯಾಂಕ್: ಮಹಾಪ್ರಬಂಧಕರಾದ ವಾಮನರಾವ್ ಮಾತನಾಡಿ, ಇದು ರೈತಸ್ನೇಹಿ ಬ್ಯಾಂಕಾಗಿದ್ದು, ಇಲ್ಲಿ ಅಗತ್ಯದಾಖಲೆಗಳನ್ನು ರೈತರು ಒದಗಿಸಿದಲ್ಲಿ ಸುಲಭವಾಗಿ ಸಾಲ ಪಡೆಯಬಹುದು. ನೀವು ಹೇಗೆ ಸಾಲಪಡೆಯುವ ಹಕ್ಕನ್ನು ಹೊಂದಿರುವಿರೊ ಹಾಗೆ ಕರ್ತವ್ಯವನ್ನು ಪಾಲಿಸಬೇಕಾಗುತ್ತದೆ. ನೀವು ಸಾಲ ಪಡೆಯುವ ಹಣ ಸರ್ಕಾರ ಅಥವಾ ಬ್ಯಾಂಕಿನದ್ದಲ್ಲ. ನಮ್ಮ ಮೇಲೆ ನಂಬಿಕೆಯಿಟ್ಟು ಠೇವಣಿದಾರರು ಕೊಟ್ಟ ಹಣ. ಅದನ್ನು ನಾವು ಅವರು ಕೇಳಿದಾಗ ಬಡ್ಡಿಸಮೇತವಾಗಿ ವಾಪಸ್ ಹಿಂತಿರುಗಿಸಬೇಕಾಗುತ್ತದೆ. ಆದ್ದರಿಂದ ನೀವು ಪಡೆದ ಸಾಲವನ್ನು ಕರಾರುವಾಕ್ಕಾಗಿ ಕಟ್ಟಿದಲ್ಲಿ ನಾವು ಸಹ ಠೇವಣಿದಾರರ ವಿಶ್ವಾಸವನ್ನು ಉಳಿಸಿಕೊಳ್ಳ ಬಹುದು ಎಂದರು. ರೈತರು ತಮ್ಮ ಅಗತ್ಯಕ್ಕೆ ತಕ್ಕಹಾಗೆ ಸಾಲ ಪಡೆಯಬೇಕು. ನಾವು ಎತ್ತಿನ ಗಾಡಿಯಿಂದ ವಿಮಾನ ಖರೀದಿಯವರೆಗೂ ಸಾಲ ಕೊಡಲು ಸಿದ್ಧರಿದ್ದೇವೆ. ನಮ್ಮ ಗ್ರಾಹಕರಲ್ಲಿ ಶೇ.90 ರಷ್ಟು ಜನ ಪ್ರಾಮಾಣಿಕರಿರುವುದರಿಂದಲೇ  ನಾವು ಉತ್ತಮ ಸೇವೆ ಒದಗಿಸಲು ಸಮರ್ಥರಾಗಿದ್ದೇವೆ. ಭವಿಷ್ಯದ  ಹಿತಕ್ಕಾಗಿ ಬ್ಯಾಂಕಿನಲ್ಲಿರುವ ಠೇವಣಿ ಹಣದ ಬಗ್ಗೆ ನಾವು ಹೆಚ್ಚಿನ ಕಾಳಜಿ ಹೊಂದಬೇಕಿದೆ. ಇಲ್ಲಿ ಮೋಸಕ್ಕೆ  ಮತ್ತು ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಬ್ಯಾಂಕ್‌ಗಳ ಆರ್ಥಿಕ  ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಿದೆ ಎಂದರು. ಚಿ.ನಾ.ಹಳ್ಳಿ ಶಾಖೆಯ ವ್ಯವಸ್ಥಾಪಕರಾದ ಶಂಕರ್ ಸ್ವಾಗತಿಸಿದರು. ಗುರುರಾಜ್ ಪರ್ವತಿ, ಕಿರಣ್ ಪೈ, ಕೀರ್ತಿರಂಜನ್ ಸತ್ಪತಿ, ಎಂ.ಎಂ.ಕೃಷ್ಣ ಮುಂತಾದವರಿದ್ದರು. ವೀರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement