ಒತ್ತುವರಿ ಜಮೀನು ವಶಕ್ಕೆ ಹೋದಾಗ ವಿಷ ಸೇವಿಸಿದ
ಕ.ಪ್ರ.ವಾರ್ತೆ ಶಿರಾ ಆ. 1
ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ಹೈಕೋರ್ಟ್ ಆದೇಶದಂತೆ ವಶಪಡಿಸಿಕೊಳ್ಳಲು ಮುಂದಾದ ತಹಸೀಲ್ದಾರ್ ಮತ್ತಿತರೆ ಅಧಿಕಾರಿಗಳ ಸಮ್ಮುಖದಲ್ಲೇ ಒತ್ತುವರಿದಾರ ಗಿರಿಯಪ್ಪ ಎಂಬಾತ ವಿಷ ಕುಡಿದು ಆಸ್ಪತ್ರೆ ಸೇರಿದ ಘಟನೆ ನಡೆಯಿತು.
ಪಟೇಲ್‌ದಾರಿಕೆಯನ್ನು ನಡೆಸಿಕೊಂಡು ಬಂದಿದ್ದ ತಿಮ್ಮೇಗೌಡ ವಂಶಸ್ಥರು ತಮ್ಮ ಸ್ವಾಧೀನಕ್ಕೆ ನೀಡಿದ್ದ 8 ಎಕರೆ 35 ಗುಂಟೆ ಜಮೀನನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದರು. ಇನ್ನು ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ತಿಮ್ಮೇಗೌಡ ಕಳೆದ 62 ವರ್ಷಗಳಿಂದ ಹೋರಾಟ ನಡೆಸಿದ್ದರ ಫಲವಾಗಿ ಹೈಕೋರ್ಟ್ ಜಮೀನನ್ನು ವಶಪಡಿಸಿಕೊಳ್ಳುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದಂತೆ ಜಮೀನನ್ನು ಒತ್ತುವರಿದಾರರಿಂದ ವಶಪಡಿಸಿಕೊಳ್ಳಲು ಮುಂದಾದಾಗ ಗಿರಿಯಪ್ಪ ವಿಷ ಕುಡಿದ. ತಕ್ಷಣವೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ವಿವರ: ತಾಲೂಕಿನ ಗೌಡಗೆರೆ ಹೋಬಳಿಗೆ ಸೇರುವ ಹೆಂದೊರೆ ಪಂಚಾಯ್ತಿ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದಲ್ಲಿ ಗೊಲ್ಲ ಜನಾಂಗದ ಹಟ್ಟಿ ತಿಮ್ಮೇಗೌಡ 1948 ರಿಂದ ಪಟೇಲಗಾರಿಕೆಯನ್ನು ಮಾಡುತ್ತಿದ್ದರು. ಸರ್ಕಾರದಿಂದ ಇನಾಮತಿ ಜಮೀನಾಗಿ ಅವರಿಗೆ 8 ಎಕರೆ ಮಂಜೂರಾಗಿತ್ತು. ಈ ಬಗ್ಗೆ ಮಧುಗಿರಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಪಟ್ಟಿತಿಮ್ಮೇಗೌಡರೇ ಪಟೇಲರೆಂದು, ಅದರಂತೆ ಪಟೇಲರಿಗೆ ಇನಾಂ ಆಗಿ ಸರ್ವೆ ನಂ. 243 ರಲ್ಲಿ 8 ಎಕರೆ 35 ಗುಂಟೆ ಜಮೀನನ್ನು ಪಡೆಯಲು ಹಕ್ಕುಳ್ಳವರು ಎಂದು ನ್ಯಾಯಾಲಯದಲ್ಲಿ ತೀರ್ಮಾನವಾಗಿತ್ತು. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ನ್ಯಾಯಾಲಯದ ಆದೇಶದಂತೆ ಸೂಕ್ತ ಪೊಲೀಸ್ ಬಂದೋಬಸ್ತ್‌ನೊಂದಿಗೆ ಅಕ್ರಮ ಸ್ವಾಧೀನದಾರರಿಂದ ತಹಸೀಲ್ದಾರರು ತೆರವುಗೊಳಿಸಲು ಮುಂದಾದರು. ಈ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿ, ಈ ಎಲ್ಲಾ ಪ್ರಕರಣಗಳ ಆದೇಶಗಳಂತೆ ವಕೀಲ ಬಂದಕುಂಟೆ ಜಯರಾಮಯ್ಯ ಹಾಗೂ ಶಿರಾ ತಹಸೀಲ್ದಾರರು ಜೀಲ್ಲಾಧಿಕಾರಿಗಳ ಅಧೀನದಲ್ಲಿರುವ ಕಾನೂನು ಸಲಹೆಗಾರರಿಂದ ಕಾನೂನು ಸಲಹೆ ಪಡೆದು ಕರ್ನಾಟಕ ಭೂಕಂದಾಯ ಕಾಯಿದೆ ರೀತ್ಯಾ ಕಾನೂನು ಕ್ರಮ ತೆಗೆದುಕೊಂಡ ನಂತರ ಅಕ್ರಮ ಸ್ವಾಧೀನದಾರರಿಂದ ಇನಾಂ ಜಮೀನನ್ನು ಪಡೆಯುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿಂದು ಈ ನಾಟಕೀಯ ಬೆಳವಣಿಗೆ ನಡೆಯಿತು.