ಕಿಲ್ಲರ್ ಸಲಗನ ತುಳಿತಕ್ಕೆ ಮತ್ತೊಬ್ಬ ಬಲಿ
ಹನುಮಯ್ಯನನ್ನು ತಿವಿದು, ತುಳಿದು, ಎಳೆದಾಡಿ ಸಾಯಿಸಿದ ಸಲಗ ್ಣ ಕಡೆಗೂ ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದ ಸಿಬ್ಬಂದಿ
ಕನ್ನಡಪ್ರಭ ವಾರ್ತೆ ತುಮಕೂರು ಆ.1
ಮೊನ್ನೆಯಷ್ಟೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಿರಾ ಮೂಲದ ವ್ಯಕ್ತಿಯೊಬ್ಬನನ್ನು ಒಂಟಿಸಲಗವೊಂದು ಸಾಯಿಸಿದ ಘಟನೆ ಮರೆಯುವ ಮುನ್ನವೇ ಅದೇ ಸಲಗ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರೈತನೊಬ್ಬನನ್ನು ಬಲಿ ತೆಗೆದುಕೊಂಡಿದೆ.
ಕಳೆದ ಶುಕ್ರವಾರ ಬನ್ನೇರುಘಟ್ಟದಿಂದ ಈ ಒಂಟಿ ಸಲಗ ಹೊರಟಿದ್ದು ಚಿತ್ರದುರ್ಗ, ಹಿರಿಯೂರು ತಾಲೂಕಿನವರೆಗೆ ಹೋಗಿ ಮತ್ತೆ ವಾಪಸ್ ತುಮಕೂರು ಜಿಲ್ಲೆಗೆ ಆಗಿತ್ತು. ಗುರುವಾರ ಬೆಳಗ್ಗೆ 6 ಗಂಟೆಗೆ ಜಿಲ್ಲೆಯ ಬುಕ್ಕಾಪಟ್ಟಣ ಬಳಿಯ ಮತ್ತಿಕೆರೆ ಅರಣ್ಯ ಪ್ರದೇಶದಿಂದ ಹೊರಟು ಗುಬ್ಬಿ ತಾಲೂಕಿನ ಬಿಳಿಕಲ್ಲುಪಾಳ್ಯ ಊರೊಳಗೆ ನುಗ್ಗಿದ ಒಂಟಿಸಲಗ ಹನುಮಯ್ಯ (60) ಎಂಬಾತನನ್ನು ತಿವಿದು, ತುಳಿದು, ಎಳೆದಾಡಿ ಸಾಯಿಸಿದೆ. ಹನುಮಯ್ಯನನ್ನು ತಿವಿದ ಬಳಿಕೆ ಎಂ.ಎಚ್. ಪಟ್ಟಣ ಕೆರೆಯಲ್ಲಿ ಬೀಡು ಬಿಟ್ಟಿದ್ದವು.
ಬಳಿಕ ಸಮೀಪದ ಎಂ.ಎಚ್.ಪಟ್ಟಣ ಕೆರೆಯಂಗಳ ಸೇರಿಕೊಂಡಿದ್ದು, ಗುರುವಾರ ಸಂಜೆವರೆಗೂ ಅಲ್ಲೇ ಇತ್ತು.
ಈ ಆನೆಯನ್ನು ಸೆರೆಹಿಡಿಯಲು ದಸರಾ ಆನೆಗಳು ಆಗಮಿಸಿದ್ದವು. ಗುರುವಾರ ಸಂಜೆ ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಕಡೆಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಘಟನೆ ನಡೆದದ್ದು ಹೀಗೆ: ಗುರುವಾರ ಬೆಳಗ್ಗೆ ಈ ಒಂಟಿ ಸಲಗ ಈ ಗ್ರಾಮಕ್ಕೆ ನುಗ್ಗಿದೆ. ಅದೇ ಸಮಯದಲ್ಲಿ ನಾರಾಯಣಪ್ಪ ತಮ್ಮ ಕರುವನ್ನು ಹೊರಗೆ ಕಟ್ಟಲು ಬಂದಾಗ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ತಕ್ಷಣ ಗಾಬರಿಗೊಂಡ ನಾರಾಯಣಪ್ಪ ಕರುವನ್ನು ಬಿಟ್ಟು ದೌಡೋಡಿದ್ದಾನೆ. ಆಗ ಸಲಗ ಆ ಕರುವನ್ನು ತುಳಿದು ಸಾಯಿಸಿತು.
ತಿವಿದು ಸಾಯಿಸಿತು: ಅದೇ ಮಾರ್ಗದಲ್ಲಿ ಬರುತ್ತಿದ್ದ ಇಬ್ಬರು ವಯೋವೃದ್ಧರು ಕೂಡ ಆನೆಯನ್ನು ಕಂಡು ದೌಡೋಡಿದರು. ನಂತರ ಸಲಗ ಕೆರೆ ಹಾದಿ ಹಿಡಿಯಿತು. ಕೆರೆ ದಾರಿಯಲ್ಲಿ ಹನುಮಯ್ಯ ಎಂಬಾತ ಸಗಣಿ ಬಿಸಾಡಲು ಹೋಗುತ್ತಿದ್ದ ಅಪ್ಪನಿಗೆ ಸಲಗ ಬಂದ ವಿಷಯ ಹೇಳಲು ಆತನ ಮಗ ಮಂಜುನಾಥ ಹೇಳಲು ಬರುತ್ತಿದ್ದಾಗಲೇ ತನ್ನ ಕಣ್ಣೆದುರೇ ತನ್ನ ಅಪ್ಪ ಹನುಮಯ್ಯನನ್ನು ಸಲಗ ತಿವಿದು ಸಾಯಿಸಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಹನುಮಯ್ಯನ ಶವವನ್ನು ಗುಬ್ಬಿ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ಆನೆಯೊಂದು ರಾದ್ಧಾಂತ ನಡೆಸಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಯಿತು.
ಹನುಮಯ್ಯ ಸತ್ತ ಸುದ್ದಿ ಕಿವಿಯಿಂದ ಕಿವಿಗೆ ಬಿದ್ದ ಕೂಡಲೇ ಎಲ್ಲೆಡೆ ಆತಂಕ ಶುರುವಾಯಿತು. ಎಂ.ಹೆಚ್. ಪಟ್ಟಣ ಕೆರೆ ಪೊದೆಯಲ್ಲಿ ಇದ್ದ ಆನೆ 2 ಗಂಟೆ ವರೆಗೆ ಅಡ್ಡಾಡಿದೆ. ಆನೆ ಸೃಷ್ಟಿಸಿದ ಅವಾಂತರದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಹೊಸಪಾಳ್ಯ, ಕೊಟ್ನಳ್ಳಿ, ದೊಡ್ಡನಾರವಂಗಲ, ಚಿಕ್ಕನಾರವಂಗಲ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ಎಚ್ಚರಿಕೆ ಸಂದೇಶವನ್ನು ಅರಣ್ಯ ಇಲಾಖೆ ನೀಡಿತು.
2 ಲಕ್ಷ ರು. ಚೆಕ್: ಆನೆ ತುಳಿತಕ್ಕೆ ಸಾವನ್ನಪ್ಪಿದ ಹನುಮಯ್ಯನ ಕುಟುಂಬಕ್ಕೆ ಅರಣ್ಯ ಇಲಾಖೆ 2 ಲಕ್ಷ ರು. ಪರಿಹಾರ ನೀಡಿದೆ.
ಗುಬ್ಬಿಯ ಆಸ್ಪತ್ರೆಗೆ ತೆರಳಿದ ಪ್ರಭಾರ ಡಿಎಫ್ಒ ದೇವರಾಜ್, ಎಸ್ಪಿ ರಮಣಗುಪ್ತ,
ಡಿಸಿ ಕೆ.ಎಸ್. ಸತ್ಯಮೂರ್ತಿ, ಶಾಸಕ ಎಸ್.ಆರ್. ಶ್ರೀನಿವಾಸ್, ಗುಬ್ಬಿ ಆರ್ಎಫ್ಒ ಹರೀಶ್ ಮತ್ತಿತರ ಅಧಿಕಾರಿಗಳು, ಮೃತನ ಪುತ್ರ ಮಂಜುನಾಥಗೆ 2 ಲಕ್ಷ ರು. ಚೆಕ್ ನೀಡಿದರು. ಇದಲ್ಲದೆ ತಹಸೀಲ್ದಾರ್ ಅವರು ಅಂತ್ಯ ಸಂಸ್ಕಾರಕ್ಕೆ 1 ಸಾವಿರ ರು. ನೀಡಿದರು.