ಕ್ಷೀರಭಾಗ್ಯ ಯೋಜನೆ ಮಹಾತ್ವಾಕಾಂಕ್ಷೆ ಯೋಜನೆ: ಮರಿದೇವರು
ತಿಪಟೂರು: ರಾಜ್ಯದಾದ್ಯಂತ ಪ್ರಪ್ರಥಮವಾಗಿ ಪ್ರಾರಂಭವಾಗಿರುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಕ್ಷೀರಭಾಗ್ಯ ಯೋಜನೆಯು ಅರ್ಥಪೂರ್ಣ ಹಾಗೂ ಆರೋಗ್ಯಕರ ಯೋಜನೆಯಾಗಿದ್ದು, ಸಂಬಂಧಪಟ್ಟ ಹಾಲು ಪೂರೈಸುವ ಇಲಾಖೆ ಮತ್ತು ಶಿಕ್ಷಕರುಗಳು ಮಕ್ಕಳಿಗೆ ಸಮರ್ಪಕವಾಗಿ ವಿತರಿಸುವ ಮೂಲಕ ಸರ್ಕಾರದ ಆಶಯವನ್ನು ಈಡೇರಿಸಬೇಕೆಂದು ತುಮಕೂರಿನ ಖ್ಯಾತ ಸಾಹಿತಿ ಸಿ.ಎಚ್.ಮರಿದೇವರು ತಿಳಿಸಿದರು. ನಗರದ ಎಸ್.ವಿ.ಪಿ ಮತ್ತು ಸುಮತಿ ಬಾಲಿಕ ಪ್ರೌಢಶಾಲೆಯಲ್ಲಿ ಇಂದು ಕ್ಷೀರಭಾಗ್ಯ ಯೋಜನೆಯನ್ನು ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಸದೃಢರಾಗಿ ತಮ್ಮ ಭವಿಷ್ಯದ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸುಮತಿ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಚ್.ಕೆ. ಪದ್ಮಾಕ್ಷಮ್ಮ ಮಾತನಾಡಿ ಕ್ಷೀರಭಾಗ್ಯವೇ ಆರೋಗ್ಯ ಭಾಗ್ಯವೆಂಬ ನುಡಿಮುತ್ತಿಗೆ ಅನುಗುಣವಾಗಿ ಇದನ್ನು ಸ್ವೀಕರಿಸಿ ತಮ್ಮ ಆರೋಗ್ಯ ಮತ್ತು ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯಬೇಕೆಂದು ಮಕ್ಕಳಿಗೆ ತಿಳಿಸಿದರು. ಪ್ರಾಂಶುಪಾಲ ಎಚ್.ಎನ್.ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ಹಾಲಪ್ಪ ಉಪಸ್ಥಿತರಿದ್ದರು.