ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಸ್ತೆಯ ಮೇಲೆ ಜೇಡಿ ಮಣ್ಣು ಕಿರಿಕಿರಿ

Srinivasa Murthy VN
Updated On : 1 Aug 2013, 11:59 am

ತುರುವೇಕೆರೆ: ಇದು ತಾಲೂಕು ಕೇಂದ್ರದಿಂದ ತಿಪಟೂರಿಗೆ ಸಂಪರ್ಕ ಸಲ್ಪಿಸುವ ರಸ್ತೆ. ಕಳೆದ ಒಂದೆರಡು ವರ್ಷಗಳಿಂದ ದಾರಿಯುದ್ದಕ್ಕೂ ಗುಂಡಿ ಬಿದ್ದಿದೆ. ಪ್ರತಿಯೊಂದು ಗುಂಡಿ ಕನಿಷ್ಠವೆಂದರೂ ಒಂದು ಅಡಿಗಿಂತಲೂ ಹೆಚ್ಚು. ಆಗಲೇ ರಸ್ತೆಯಲ್ಲಿ ದ್ವಿಚಕ್ರವಾಹನ ಚಾಲನೆ ಮಾಡುವುದು ಅಸಾಧ್ಯದ ಮಾತಾಗಿತ್ತು.
 ಅದೆಷ್ಟು ಮಂದಿ ಈ ಗುಂಡಿಗೆ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದಾರೋ ದೇವರೇ ಬಲ್ಲ. ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ತಿಪಟೂರು ರಸ್ತೆಯ ಮಗ್ಗುಲಲ್ಲೇ ಇರುವ ಕೆರೆಯಿಂದ ಹೂಳು ತೆಗೆಯುವ ಕಾಯಕವನ್ನು ರೈತರೇ ಸ್ವಯಂ ಇಚ್ಛೆಯಿಂದ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಜಮೀನುಗಳಿಗ ಅಗತ್ಯವಿರುವಷ್ಟು ಜೇಡಿಮಣ್ಣನ್ನು ಟ್ಯಾಕ್ಟರ್ ಮೂಲಕ ಹೊಡೆದುಕೊಳ್ಳುತ್ತಿದ್ದಾರೆ. ಇದಿಷ್ಟೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಈಗ ಮಳೆ ಬಿದ್ದಿದೆ. ಜೇಡಿಮಣ್ಣನ್ನು ತಮ್ಮ ಹೊಲ ಗದ್ದೆಗಳಿಗೆ ತೆಗೆದುಕೊಂಡು ಹೋಗುವಾಗ ಟ್ರ್ಯಾಕ್ಟರ್ ಟ್ರೈಲರ್‌ನ ಬಾಗಿಲು ಭದ್ರಪಡಿಸದೇ ಬಹಳ ವೇಗವಾಗಿ ಚಾಲನೆ ಮಾಡುತ್ತಿದ್ದಾರೆ. ಈ ವೇಳೆ ವಾಹನದಿಂದ ಜೇಡಿ ಮಣ್ಣು ರಸ್ತೆಗೆ ಬೀಳುತ್ತಿದೆ. ಆದರೆ ಆ ಮಣ್ಣನ್ನು ತೆಗೆಯುವ ಗೋಜಿಗೇ ಯಾರೂ ಹೋಗದ ಕಾರಣ ಇಂದು ಜನರು ಪರದಾಡುವಂತಾಗಿದೆ.
ನಡೆಯಲು ಅಸಾಧ್ಯ: ಮಳೆಯಿಂದಾಗಿ ಜೇಡು ಮಣ್ಣು ಜಿಗುಟು ಮಣ್ಣಾಗಿ ಸಂಪೂರ್ಣವಾಗಿ ರಸ್ತೆಯುದ್ದಕ್ಕೂ ಹರಡಿಕೊಂಡು ಜಾರುತ್ತಿದೆ. ನಡೆಯಲೂ ಅಸಾಧ್ಯವಾಗಿದೆ. ಪ್ರತಿದಿನ ತಿಪಟೂರು ರಸ್ತೆಯಲ್ಲಿ ಕನಿಷ್‌ಠವೆಂದರೂ ಐದಾರು ಮಂದಿ ವಾಹನದಿಂದ ಕೆಳಗೆ ಬಿದ್ದು ಅಂಗಾಂಗವನ್ನು ಕಳೆದು ಕೊಳ್ಳುತಿದ್ದಾರೆ. ಹಲವಾರು ಮಂದಿ ವಾಹನಗಳನ್ನು ರಿಪೇರಿಗೆ ಬಿಟ್ಟಿದ್ದಾರೆ. ಹಲವಾರು ಮಂದಿ ಇನ್ನೂ ಗಾಯದಿಂದ ಮುಕ್ತರಾಗಿಲ್ಲ. ಇಷ್ಟೆಲ್ಲಾ ಅವಾಂತರ ಇದ್ದರೂ ಸಹ ತಾಲೂಕು ಆಡಳಿತ ಕಣ್ಣೆತ್ತ ನೋಡಿಲ್ಲ. ತಮಗೆ ಸಂಬಂಧವೇ ಇಲ್ಲವೆಂಬಂತೆ ಲೋಕೋಪಯೋಗಿ ಇಲಾಖೆ ಮೌನವಾಗಿದೆ. ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಈಗಾಗಲೇ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗಿದೆ. ಆದರೆ ಅದೆಲ್ಲಿ ಮುಚ್ಚಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ತಪ್ಪಿದ ಅಪಾಯ: ಗುರುವಾರ ಸಾಯಂಕಾಲ ಕೆಎಸ್‌ಆರ್‌ಟಿಸಿಯ ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುವ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಸರಿದಿದೆ. ಅನತಿ ದೂರದಲ್ಲೇ ಇದ್ದ ಭಾರಿ ಗುಂಡಿಗೆ ವಾಹನ ಉರುಳಿದ್ದರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಬಸ್‌ನ್ನು ಚಾಲನೆ ಮಾಡಲು ಸಾಧ್ಯವೇ ಇಲ್ಲದಾಗ ಪ್ರಯಾಣಿಕರು ಸುಮಾರು 1ಕಿ ಮೀ ದೂರ ನಡೆದುಕೊಂಡು ಹೋಗಬೇಕಾಯಿತು.
ರಸ್ತೆಯುದ್ದಕ್ಕೂ ಜೇಡಿಮಣ್ಣು ತುಂಬಿರುವುದರಿಂದ ಮುಂದಿನ ದಿನವೂ ಅಪಘಾತ ತಪ್ಪಿದ್ದಲ್ಲ. ಸ್ವಲ್ಪ ಮಳೆಯಾದರೂ ವಾಹನಗಳ ಚಾಲನೆ ಮಾಡಲು ಸಾಧ್ಯವಿಲ್ಲ. ಮಳೆ ಬಾರದೇ ಬಿಸಿಲು ಬಂದರೆ ಮಣ್ಣಿನ ಧೂಳು ವಾಹನ ಚಾಲಕರ ಕಣ್ಣಿಗೆ ತೂರುತ್ತದೆ. ಇದರಿಂದಲೂ ಅಪಘಾತ ನಡೆಯುತ್ತಿದೆ. ತಾಲ್ಲೂಕು ಆಡಳಿತ ನಿದ್ದೆಯಿಂದ ಎದ್ದು ಅಮಾಯಕರಾದ ಜನರನ್ನು ಕಾಪಾಡುವುದೇ. ಗುರುವಾರ ದ್ವಿಚಕ್ರ ವಾಹನ ಸವಾರ ಜಾರಿ ಕೆಳಗೆ ಬಿದ್ದ ಪರಿಣಾಮ ಕಾಲು ಮುರಿದು ಹೋಗಿದೆ. ಹೊಸ ಟಿವಿಯನ್ನು ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಮತ್ತೊಬ್ಬ ವಾಹನ ಚಾಲಕ ಬಿದ್ದ ಪರಿಣಾಮ ಟಿವಿ ಚೂರು ಚೂರಾಯಿತು  ಎಂದು ತಿಳಿದು ಬಂದಿದೆ. ಬಸ್‌ಗಳೆರಡು ರಸ್ತೆಯ ಪಕ್ಕಕ್ಕೆ ಜಾರಿದ ಪರಿಣಾಮ ಸುಮಾರು 1 ಕಿಮೀ ನಷ್ಟು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಆಗಿತ್ತು. ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ರಸ್ತೆಯ ಪಕ್ಕದಲ್ಲೇ ಕೆರೆಯೂ ಇದ್ದು ಅಪಘಾತ ಮಾತ್ರ ಕಟ್ಟಿಟ್ಟ ಬುತ್ತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement