ವಸತಿ ಶಾಲೆಗೆ ತಾಪಂ ಅಧ್ಯಕ್ಷೆ ದಿಢೀರ್ ಭೇಟಿ
ಪಾವಗಡ: ಪಟ್ಟಣದ ವಸತಿ ಶಾಲೆಯೊಂದಕ್ಕೆ ದಿಢೀರ್ ಭೇಟಿ ಕೊಟ್ಟ ಜೆಡಿಎಸ್ ಹಿರಿಯ ಮುಖಂಡ ತಾಪಂ ಸದಸ್ಯ ಚಂದ್ರಶೇಖರ್ ಹಾಗೂ ತಾಪಂ ಅಧ್ಯಕ್ಷೆ ರಾಧಾ ರಾಜ್ಗೋಪಾಲ್ ಹಾಸ್ಟೆಲ್ನ ಅತಂತ್ರ ಸ್ಥಿತಿ ಕಂಡು ವಸತಿ ಶಾಲೆಯ ಪ್ರಾಂಶುಪಾಲ ಸುರೇಶ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದ ಪ್ರಸಂಗ ಗುರುವಾರ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯಿತು. ಇತರೆ ತಾಲೂಕಿನಿಂದ ಬಂದ ಸುಮಾರು 250 ಮಂದಿ ಬಡ ವಿದ್ಯಾರ್ಥಿಗಳು ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೊಳೆತ ತರಕಾರಿಯಿಂದ ತಯಾರಿಸಿದ ಸಾಂಬರು, ಕೆಳದರ್ಜೆ ಅಕ್ಕಿಯಿಂದ ಮಾಡಿದ ಕಳಪೆ ಆಹಾರ ವಿತರಣೆ, ಪ್ರಾಂಶುಪಾಲರ ಕಿರುಕುಳ ಸೇರಿದಂತೆ ಸೊಳ್ಳೆ ತಿಗಣಿಗಳ ಹಾವಳಿಯಿಂದ ನಿತ್ಯ ನರಕ ಅನುಭವಿಸುತ್ತಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದರು. ವಿದ್ಯಾರ್ಥಿಗಳ ತಿಂಡಿ ವಿತರಣೆಗೆ ಗುತ್ತಿಗೆದಾರರಿಂದ ಸರಬರಾಜು ಆಗಿದ್ದ ಸುಮಾರು 90 ಕ್ವಿಂಟಾಲ್ ಗೋಧಿಯನ್ನು ಪ್ರಾಂಶುಪಾಲ ಸುರೇಶ್ ಕಾಳ ಸಂತೆಯಲ್ಲಿ ಮಾರಾಟ ಮಾಡಿಕೊಂಡಿದ್ದಾರೆ. ಇದು ತನಿಖೆ ಆಗಬೇಕು ಎಂದು ವಿದ್ಯಾರ್ಥಿಗಳ ಪೋಷಕರಾದ ತಾ.ಪಳವಳ್ಳಿ ಸುಬ್ಬರಾಜ್ ಹಾಗೂ ಐವಾರ್ಲಾಹಳ್ಳಿ ನಾಗರಾಜ್ ಎಂಬುವರ ದೂರಿನ ಮೇರೆಗೆ ಭೇಟಿ ನೀಡಿ ಮೊರಾರ್ಜಿ ವಸತಿ ಶಾಲೆಯನ್ನು ಪರಿಶೀಲಿಸಿದಾಗ ವಸತಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಅಳಲು ಮನಕರಗುವಂತಿತ್ತು.