ಕೆಪಿಟಿಸಿಎಲ್ ಸಂಘದ ಕಾರ್ಯ ಶ್ಲಾಘನೀಯ'
ತಿಪಟೂರು: ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರ ಸಂಘಗಳಿಂದ ನೌಕರರ ಸಣ್ಣಪುಟ್ಟ ಆರ್ಥಿಕ ಸಂಕಷ್ಟಗಳು ನೀಗಲಿದ್ದು, ತಮ್ಮಗಳ ಉಳಿತಾಯಕ್ಕೂ ಇದೊಂದು ಉತ್ತಮ ಮಾರ್ಗವಾಗಿದ್ದು, ನೌಕರರು ತಮ್ಮ ಉಳಿತಾಯಗಳನ್ನು ಸಂಘಗಳಲ್ಲೇ ಮಾಡುವುದರ ಮೂಲಕ ಸಂಘವನ್ನು ಬೆಳೆಸಬೇಕೆಂದು ಜಿಲ್ಲಾ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧೀಕ್ಷಕ ಕೆ.ವಿ.ಗೋವಿಂದಪ್ಪ ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಪಟೂರು ನೌಕರರ ಪತ್ತಿನ ಸಹಕಾರ ಸಂಘದ 6ನೇ ವರ್ಷದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಿಜಕ್ಕೂ ಈ ಸಂಘ ಇಲ್ಲಿನ ನೌಕರರುಗಳ ಸಹಕಾರದಿಂದ ಉತ್ತಮವಾಗಿ ಬೆಳೆಯುತ್ತಿದ್ದು, ಜಿಲ್ಲೆಯಲ್ಲಿಯೇ ಉತ್ತಮ ಸಂಘವಾಗಿ ಹೊರಹೊಮ್ಮಲಿ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎ.ಎಂ.ಮರಿಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ.ಎಸ್.ಚಂದ್ರು, ಹರಿಹರಪ್ಪ, ಟಿ.ಸೀತಾರಾಮಶೆಟ್ಟರು, ತಿಮ್ಮೇಗೌಡರು,ಶ್ರೀನಿವಾಸ್,ಚಿದಾನಂದ, ಪ್ರಭುಸ್ವಾಮಿ, ಬೋರೇಗೌಡ ಮತ್ತಿತರರು ಭಾಗವಹಿಸಿದ್ದರು. ಕಾರ್ಯದರ್ಶಿ ಧರ್ಮರಾಜು ಕಾರ್ಯದರ್ಶಿ ವರದಿ ಮತ್ತು ಆಯವ್ಯಯ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಗೋವಿಂದಪ್ಪ ಮತ್ತು ಸಂಘದ ನಿರ್ದೇಶಕರಾಗಿ ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಟಶೆಟ್ಟಿ ಇವರುಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಚುನಾವಣೆ ವೀರಕ್ಯಾತರಾಯ ವಿಜಯ
ಕೊರಟಗೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ಕೊರಟಗೆರೆ ತಾಲೂಕು ಶಾಖೆಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ನೌಕರರ ಸಂಘದ ಮಾಜಿ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ 27 ಮತಗಳನ್ನು ಪಡೆಯುವ ಮೂಲಕ 3 ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಅದ್ಯಕ್ಷ ಸ್ಥಾನಕ್ಕೆ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಪರಮೇಶ್ ಮತ್ತು ಖಜಾನೆ ಇಲಾಖೆಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ವಿ.ಕೆ.ವೀರಕ್ಯಾತರಾಯ ಸ್ಪರ್ಧಿಸಿದ್ದರು.
ಒಟ್ಟು 36 ಮತಗಳಲ್ಲಿ ಪರಮೇಶ್ 7 ಮತಗಳು, ವಿ.ಕೆ.ವೀರಕ್ಯಾತರಾಯ 27 ಮತಗಳು ಪಡೆದು ವಿಜೇತರಾಗುವ ಮೂಲಕ 3ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗದ ಎಸ್. ದೇವರಾಜಯ್ಯ 6 ಮತಗಳನ್ನು, ಕೃಷಿ ಇಲಾಖೆಯ ಟಿ.ಕೆ. ವಿಜಯನರಸಿಂಹ 28 ಮತಗಳನ್ನು ಪಡೆದು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರೌಢಶಾಲಾ ವಿಭಾಗದ ಡಿ.ಆರ್. ಸಿದ್ದಲಿಂಗಾರಾಧ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.