ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣಾ ಕರ್ತವ್ಯದಲ್ಲಿ ಲೋಪ ಎಸಗಿದರೆ ಕಠಿಣ ಕ್ರಮ

Srinivasa Murthy VN
Updated On : 3 Aug 2013, 12:22 pm

ಲೋಕಸಭಾ ಉಪಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಮೂರ್ತಿ ಎಚ್ಚರಿಕೆ
ಕ.ಪ್ರ.ವಾರ್ತೆ ಕುಣಿಗಲ್ ಆ.2
ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮಾರ್ಗಸೂಚಿ ನಿಯಮಾವಳಿಗಳನ್ವಯ ಮುಕ್ತ, ನ್ಯಾಯಸಮ್ಮತ, ನಿಷ್ಪಕ್ಷಪಾತ ಚುನಾವಣೆಗೆ ಶ್ರಮಿಸುವಂತೆ, ಯಾವುದೇ ಪಕ್ಷದ ಅಭ್ಯರ್ಥಿ ಪರ ಅಥವಾ ತಮ್ಮ ಚುನಾವಣಾ ಕರ್ತವ್ಯದಲ್ಲಿ ಲೋಪ ಎಸಗಿದ್ದೇ ಆದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ಎಚ್ಚರಿಕೆ ನೀಡಿದರು.
ಶುಕ್ರವಾರ, ಮಧಾಹ್ನ ಪಟ್ಟಣದ ಖಾಸಗಿ ಸಮುದಾಯಭವನದಲ್ಲಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಕುಣಿಗಲ್ ವಿಧಾನಸಭಾ ಕ್ಷೇತ್ರದ ವಿವಿಧ ಹಂತದ ಚುನಾವಣಾಧಿಕಾರಿಗಳು, ಸಿಬ್ಬಂದಿ, ಲೋಕಸಭಾ ಉಪಚುನಾವಣೆಯ ಪೂರ್ವಭಾವಿ ಸಭೆಯುದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಗೆ ನಿಯೋಜನೆಗೊಳ್ಳುವ ಸಿಬ್ಬಂದಿ ವಿನಾಕಾರಣ ಕುಂಟುನೆಪ ಹೇಳಿಕೊಂಡು ಕರ್ತವ್ಯದಿಂದ ಹಿಂದುಳಿಯುವುದು ಸರಿಯಲ್ಲ. ನಿಜವಾಗಿಯೂ ಅನಾರೋಗ್ಯದಿಂದ ಬಳಲುತ್ತಿರುವವರು, ಗರ್ಭಿಣಿಯರು ಸೇರಿದಂತೆ ಕೆಲ ಸಂದರ್ಭಗಳಲ್ಲಿ ಮಾತ್ರ ಮೇಲಾಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗೆ ಶಿಫಾರಸು ಮಾಡಬೇಕೆಂದರು.
ಆರ್ಥಿಕ ವರ್ಷದ ಪ್ರಾರಂಭಿಕ ದಿನಗಳಾಗಿರುವುದರಿಂದ ಯಾವುದೇ ಹಂತದ ಚುನಾವಣೆ ಸಿಬ್ಬಂದಿ, ಯಾವುದೇ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಪಕ್ಷಪಾತದಿಂದ ವರ್ತಿಸಿದ್ದಲ್ಲಿ, ಅವರನ್ನು ದೂರದ ಜಿಲ್ಲೆಗಳಿಗೆ ವರ್ಗಾಯಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯುವ ದಿಸೆಯಲ್ಲಿ ತಾಲೂಕು ಮಟ್ಟದಲ್ಲಿ ಸಂಬಂಧಿಸಿದ ಪ್ರಮುಖ ಚುನಾವಣಾಧಿಕಾರಿಗಳ ದೂರವಾಣಿ ಸಂಖ್ಯೆಗಳ ಪ್ರಚಾರಕ್ಕೆ ಕ್ರಮ ಕೈಗೊಳ್ಳುವುದು ಸೇರಿದಂತೆ, ಚುನಾವಣೆ ಕಾರ್ಯದಲ್ಲಿ ನಿರತರಾದ ಸಿಬ್ಬಂದಿ ತಮಗೆ ವಹಿಸಿದ ಕೆಲಸವನ್ನು ಶ್ರದ್ದೆಯಿಂದ, ಯಾವುದೇ ದೂರುಗಳಿಗೆ ಆಸ್ಪದವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ, ಅನುಮತಿ ಇಲ್ಲದೆ ಬ್ಯಾನರ್ ಬಂಟಿಂಗ್ಗಳನ್ನು ಬಳಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೀತಿ ಸಂಹಿತೆ ಪಾಲನಾಧಿಕಾರಿ ಮುಖ್ಯಾಧಿಕಾರಿ ಹೇಮಂತ್ಶರಣ್ಗೆ ಸೂಚನೆ ನೀಡಿದ ಅವರು, ಚುನಾವಣೆ ಆಯೋಗದ ಕಟ್ಟುನಿಟ್ಟಿನ ಸೂಚನೆ ಅನ್ವಯ ಯಾವುದೇ ದೂರಿಗೆ ಆಸ್ಪದವಿಲ್ಲದಂತೆ ಲೋಕಸಭಾ ಚುನಾವಣೆಯ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.
ಚುನಾವಣೆ ನಡೆಯುವ ಕುಣಿಗಲ್ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶಕ್ಕೆ ಹೊಂದುಕೊಂಡಿರುವ ಇತರೆ ಪ್ರದೇಶಗಳಲ್ಲಿ ಚುನಾವಣೆ ಪ್ರಕ್ರಿಯೆ ಇಲ್ಲದಿರುವ ಕಾರಣ ಅಕ್ರಮ ಮದ್ಯ ನುಸುಳುವಿಕೆ ತಡೆಗಟ್ಟಲು ಅಬಕಾರಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಇಒ, ಮಳೆಗಾಲ ಪ್ರಾರಂಭವಾಗಿದ್ದು ಗ್ರಾಪಂ ಪಿಡಿಒಗಳ ಮೇಲೆ ಕಾರ್ಯಭಾರ ಅಧಿಕವಾಗಿದೆ, ದಯಮಾಡಿ ಪಿಡಿಒಗಳನ್ನು ಚುನಾವಣೆಕಾರ್ಯದಿಂದ ಕೈಬಿಡುವಂತೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಇದನ್ನು ನಯವಾಗಿಯೆ ತಾಪಂ ಇಒಗೆ ತಿಳಿಹೇಳಿ, ಆಯೋಗದ  ಮಾರ್ಗಸೂಚಿಯಂತೆ ಎಲ್ಲರೂ ಸಹಕರಿಸಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಹೇಮಂತ್ಶರಣ್, ತಮ್ಮನ್ನು ಕಸಬಾ ಹೋಬಳಿ ವೀಕ್ಷಕರನ್ನಾಗಿ, ಪುರಸಭೆ ವ್ಯಾಪ್ತಿ ನೀತಿಸಂಹಿತೆ ಪಾಲನಾಧಿಕಾರಿಯಾಗಿ ಎರಡು ಹುದ್ದೆಗೆ ನೇಮಿಸಿದ್ದು, ಯಾವುದಾದರೂ ಒಂದು ಹುದ್ದೆ ನೀಡಬೇಕೆಂದರೆ, ತಾಪಂ ನರೇಗ ಸಹಾಯಕ ನಿರ್ದೇಶಕ ಬೆಟ್ಟಸ್ವಾಮಿಗೌಡ, ತಾವೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀತಿಸಂಹಿತೆ ಅನುಷ್ಠಾನಾಧಿಕಾರಿಯಾಗಿ 24 ತಾಸು ಕೆಲಸ ಮಾಡಿದ್ದು, ದಯಮಾಡಿ ಈ ಕೆಲಸವನ್ನು ಇಬ್ಬರಿಗೆ ನೀಡುವಂತೆ ಕೋರಿಕೊಂಡರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಸಮಸ್ಯೆ, ಸಲಹೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟು ಮಾಹಿತಿ ವಿನಿಮಯ ಮಾಡಿಕೊಂಡರು.
ಉಪಚುನಾವಣಾಧಿಕಾರಿ ಅನೂಪ್, ತಹಶೀಲ್ದಾರ್ ಜಗದೀಶ್, ಚುನವಣಾ ತಹಶೀಲ್ದಾರ್ ಶ್ರೀಧರಮೂರ್ತಿ, ತಾಪಂ ಇಒ ರಾಮಚಂದ್ರಪ್ಪ, ಹೆಚ್ಚುವರಿ ಎಸ್ಪಿ ಹನುಮಂತರಾಯ, ಡಿವೈಎಸ್ಪಿ ಉಮಾರಾಣಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಪಿಡಿಒಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement