ವಿಧಾನಸಭೆಯಲ್ಲಿ ವೈಯಕ್ತಿಕ ಚರ್ಚೆ ಖಂಡನೀಯ
ತುರುವೇಕೆರೆ: ವಿಧಾನಸಭೆಯಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಬದಲು ವೈಯಕ್ತಿಕ ವಿಷಯಗಳಿಗೆ ಒತ್ತು ನೀಡಿ ವಿಧಾನಸಭೆಯ ಪವಿತ್ರ ಸಮಯವನ್ನು ಹಾಳು ಮಾಡಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ರವಿಕುಮಾರ್, ವೈಯಕ್ತಿಕ ಘಟನೆಗಳನ್ನು ಚರ್ಚಿಸಲು ಬೇರೆ ವೇದಿಕೆಗಳಿವೆ. ಆದರೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿ ರಾಜ್ಯದ ಜನರ ತೆರಿಗೆ ಹಣವನ್ನು ಅನಾವಶ್ಯಕವಾಗಿ ಪೋಲು ಮಾಡಿರುವುದು ಸರಿಯಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ವಿದ್ಯುಚ್ಚಕ್ತಿ, ಪಡಿತರ ಚೀಟಿ, ವಸತಿ, ರೋಗ ರುಜಿನಗಳ ಸಮಸ್ಯೆ, ರಸ್ತೆ ಇತರ ಅಭಿವೃಧ್ಧಿ ಕಾಮಗಾರಿ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಯಾವುದಕ್ಕೂ ಬಾರದ ಚರ್ಚೆಗೆ ಸೀಮಿತವಾದುದು ದುರಂತವೇ ಸರಿ ಎಂದಿದ್ದಾರೆ.
ಹಾವು ಕಚ್ಚಿ ಮಹಿಳೆ ಸಾವು
ಪಾವಗಡ: ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ ಪರಿಣಾಮ ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸೇನ್ಪುರ ಗ್ರಾಮದಲ್ಲಿ ಗುರುವಾರ ನಡೆದಿದೆ. ಹಾವು ಕಚ್ಚಿ ಸಾವನ್ನಪ್ಪಿದ ಮಹಿಳೆ ಲಕ್ಷ್ಮಮ್ಮ(56)ಎಂಬುವರು.
ಹುಸೇನ್ಪುರ ಗ್ರಾಮಕ್ಕೆ ಸೇರಿದ ಲಕ್ಷ್ಮಮ್ಮ ಎಂಬುವರು ತಮ್ಮ ಜಮೀನಿನಲ್ಲಿ ಹಾಕಿದ್ದ ನೆಲೆಗಡಲೆ ಬೆಳೆಯಲ್ಲಿ ಕಳೆ ತೆಗೆಯುವಾಗ ಆಕಸ್ಮಿಕವಾಗಿ ಹಿಂಬದಿಯಿಂದ ಬಂದ ವಿಷ ಸರ್ಪವೊಂದು ಆಕೆಯ ಕಾಲಿಗೆ ಕಚ್ಚಿದೆ. ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಆಕೆಯನ್ನು ಕಂಡ ಅಕ್ಕಪಕ್ಕ ಜಮೀನಿನವರು ತುರ್ತು ವಾಹನಕ್ಕೆ ಕರೆ ಮಾಡಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾಳೆ. ಬಡ ರೈತ ಮಹಿಳೆಯ ಕುಟುಂಬಕ್ಕೆ ಸರ್ಕಾರದ ಯೋಜನೆ ಅಡಿಯಲ್ಲಿ ಪರಿಹಾರ ಕಲ್ಪಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.