ಸಾವಿರಾರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಶಿಕ್ಷಣ ಮೇಳ
6 ರೀವ್ಸ್, ಕನ್ನಡ ಪ್ರಭ, ಇಂಡಿಯನ್ ಎಕ್ಸ್ಪ್ರೆಸ್ನಿಂದ ಆಯೋಜನೆ
ಕ.ಪ್ರ.ವಾರ್ತೆ ತುಮಕೂರು ಆ.2
6 ರೀವ್ಸ್, ಕನ್ನಡಪ್ರಭ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ಶಿಕ್ಷಣ ಮೇಳ ಅಭೂತಪೂರ್ವ ಯಶಸ್ಸು ಕಂಡಿದೆ.
ತುಮಕೂರಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಉನ್ನತ ಶಿಕ್ಷಣ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಶಿಕ್ಷಣ ಮೇಳಕ್ಕೆ ಹಲವಾರು ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿ ಮಾಹಿತಿ ಪಡೆದರು.
ಹತ್ತು ಹಲವಾರು ಶಿಕ್ಷಣ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಸ್ಟಾಲ್ಗಳನ್ನು ಹಾಕಿದ್ದು ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿ ಪಡೆದುಕೊಂಡರು. ಬೆಳಗ್ಗೆ 11 ಗಂಟೆಗೆ ಆರಂಭವಾದ ಈ ಶಿಕ್ಷಣ ಮೇಳೆ ಮಧ್ಯಾಹ್ನ 3 ರವರೆಗೆ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅವರು ಶೈಕ್ಷಣಿಕವಾಗಿ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಉದ್ಭವಿಸಿದಾಗ ಇಂತಹ ಶಿಕ್ಷಣ ಮೇಳಗಳು ಅವರಿಗೆ ಉತ್ತರ ನೀಡುತ್ತದೆ ಎಂದರು.
ಹಿಂದೆ ಕೇವಲ ಪಾರಂಪರಿಕ ಕೋರ್ಸ್ಗಳನ್ನಷ್ಟೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈಗ ವೈವಿಧ್ಯಮಯ ಕೋರ್ಸುಗಳು ಬಂದಿವೆ. ಕರ್ನಾಟಕದಲ್ಲಿ ಸಿಇಟಿಯಲ್ಲಿ 8 ಸಾವಿರ ಸೀಟುಗಳು ಖಾಲಿ ಇವೆ. ಅವೆಲ್ಲಾ ವಿದ್ಯಾರ್ಥಿಗಳು ಇಷ್ಟಪಡುವ ಕೋರ್ಸ್ಗಳಲ್ಲ. ಹಾಗಾಗಿ ಯಾವ ಕೋರ್ಸ್ಗಳು ತಮ್ಮ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆ ಎಂಬುದನ್ನು ಇಂತಹ ಶಿಕ್ಷಣ ಮೇಳಗಳಲ್ಲಿ ಹೇಳಿಕೊಡಲಾಗುತ್ತದೆ ಎಂದು ವಿವರಿಸಿದರು.
ಹಿಂದೆ ಕೇವಲ ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸುಗಳು ಮಾತ್ರ ಇದ್ದವು. ಆದರೆ ಈಗ ಹತ್ತು ಹಲವಾರು ಕೋರ್ಸ್ಗಳು ಇವೆ. ಕೆಲ ವಿದ್ಯಾರ್ಥಿಗಳು ಕೇವಲ ಐಟಿಐ ಮಾಡಿಕೊಂಡಿರುತ್ತಾರೆ. ಆದರೆ ಅದಷ್ಟೇ ಸಾಲುವುದಿಲ್ಲ. ಮತ್ತಷ್ಟು ಕೋರ್ಸ್ಗಳನ್ನು ಮಾಡಿಕೊಂಡರೆ ಉದ್ಯೋಗಾವಕಾಶಗಳು ಹೆಚ್ಚುತ್ತದೆ ಎಂದರು.
ಮೊದಲು ಕೆರಿಯರ್: ಕಿರುತೆರೆ ನಟ ಹನುಮಂತೇಗೌಡ ಮಾತನಾಡಿ ಕೋರ್ಸ್ ಯಾವುದಾದರೂ ಆಗಲಿ ಮೊದಲು ಪರಿಣತಿ ಗಳಿಸಿ. ನಿಮ್ಮ ಕೆರಿಯರ್ನ ಅಭಿವೃದ್ಧಿಪಡಿಸಿಕೊಳ್ಳಿ. ಆಮೇಲೆ ಪ್ರವೃತ್ತಿಗಳ ಕಡೆ ಗಮನ ಕೊಡಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಚೆನ್ನಾಗಿ ಓದಿ ಉದ್ಯೋಗ ತೆಗೆದುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ರೀತಿಯ ಶಿಕ್ಷಣ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ಈ ರೀತಿಯ ಶಿಕ್ಷಣ ಮೇಳದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ 6 ರೀವ್ಸ್ ಸಿಎಂಡಿ ಯುವರಾಜ್, ವಿದ್ಯಾರ್ಥಿಗಳಿಗೆ ಕೆರೆಯಿರ್ ತುಂಬಾ ಗಂಭೀರವಾದ ವಿಷಯ. ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. 6 ರೀವ್ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದ್ದು ಹೊಸ ಹೊಸ ಕೋರ್ಸ್ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ಮಾಡುತ್ತದೆ ಎಂದರು. ಈಗಾಗಲೇ ಹಲವಾರು ಕಡೆ 6 ರೀವ್ಸ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲೆಡೆ ಅಭೂತಪೂರ್ವ ಯಶಸ್ಸು ದೊರೆತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪ್ರಧಾನ ವರದಿಗಾರ ಉಗಮ ಶ್ರೀನಿವಾಸ್, ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರ ದೇವರಾಜ್ ಹಿರೇಹಳ್ಳಿ, ಪ್ರಸರಣ ವಿಭಾಗದ ಕಿರಿಯ ವ್ಯವಸ್ಥಾಪಕ ಎಚ್.ಎನ್. ಗಣೇಶ್, ತುಮಕೂರು ವಿಭಾಗದ ಮುಖ್ಯಸ್ಥ ಎಸ್. ಸುರೇಶ್, ನಗರ ವಿತರಕ ಮುರುಗೇಶ್ ಇದ್ದರು.