ಕುಡಿವ ನೀರಿನ ಕಾಮಗಾರಿ ಪ್ರಗತಿ ವೀಕ್ಷಣೆ
ಕ.ಪ್ರ.ವಾರ್ತೆ ತುಮಕೂರು ಆ.3
ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೇಮಾವತಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು ಈ ಕಾಮಗಾರಿಯನ್ನು ಸಂಸದ ಜಿ.ಎಸ್. ಬಸವರಾಜು ಹಾಗೂ ಶಾಸಕ ಸಿ.ಬಿ. ಸುರೇಶ್ಬಾಬು ಪರಿಶೀಲನೆ ನಡೆಸಿದರು.
ಕಾಮಗಾರಿಯ ಪರಿಶೀಲನೆ ನಂತರ ಮಾತನಾಡಿದ ಈ ಇಬ್ಬರು ನಾಯಕರು ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು ಚಿಕ್ಕನಾಯಕನಹಳ್ಳಿ ಜನತೆಯ ಬಹುದಿನಗಳ ಕನಸು ನನಸಾಗಲಿದೆ ಎಂದು ತಿಳಿಸಿದ್ದಾರೆ. ತಿಪಟೂರಿನಿಂದ ಚಿಕ್ಕನಾಯಕನಹಳ್ಳಿಯ ವಿವಿಧ ಹಳ್ಳಿಗಳಿಗೆ ನೀರನ್ನು ಕೊಂಡೊಯ್ಯುವ ಮಾರ್ಗ ಮಧ್ಯೆ ನಡೆಯುತ್ತಿರೋ ಕಾಮಗಾರಿಗಳನ್ನ ವೀಕ್ಷಿಸಿದರು. ತಿಪಟೂರು ತಾಲೂಕಿನ ಬಿಳೆಗೆರೆ, ಗ್ಯಾರೆ ಹಳ್ಳಿ, ತಿಮ್ಲಾಪುರ ಬಾಣಸಂದ್ರ ಗ್ರಾಮಗಳಿಗೆ ತೆರಳಿ ಕಾಮಗಾರಿಗೆ ಭೂಮಿಯನ್ನ ಬಿಟ್ಟುಕೊಟ್ಟಿರೋ ರೈತರನ್ನ ಭೇಟಿ ಮಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಸುಮಾರು 94 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರೋ ಈ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಮತ್ತು ಹೇಮಾವತಿ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ 35 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಸುಮಾರು 26 ಕೆರೆಗಳಿಗೆ ಪೈಪ್ ಲೈನ್ ಮತ್ತು ನಾಲಾ ಮುಖಾಂತರ ನೀರನ್ನು ಕೊಂಡೊಯ್ಯಲಾಗುತ್ತಿದೆ. ಶೆಟ್ಟಿಕೆರೆ ಭಾಗಕ್ಕೆ ನಾಲೆ ಮುಖಾಂತರ ಮತ್ತು ಜೆ.ಸಿ.ಪುರ ಭಾಗದ ಹಳ್ಳಿಗಳಿಗೆ ಪೈಪ್ಲೈನ್ ಮುಖಾಂತರ ನೀರನ್ನು ಕೊಂಡೊಯ್ಯುವ ಯೋಜನೆ ಇದಾಗಿದೆ. ಈ ವೇಳೆ ರೈತರೊಂದಿಗೆ ಸಮಾಲೋಚಿಸಿದ ಸುರೇಶ್ ಬಾಬು ಮತ್ತು ಬಸವರಾಜು ಶೀಘ್ರದಲ್ಲೇ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಹೀಗೆ ಹಲವಾರು ವರ್ಷಗಳ ಕನಸಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನ ಜನತೆ ಈ ಯೋಜನೆ ಪ್ರಗತಿಯ ಹಂತದಲ್ಲಿದೆ. ಯೋಜನೆ ಅನುಷ್ಠಾನಕ್ಕಾಗಿ ಪರಿಹಾರ ಪಡೆಯದೇ ಮುಂಗಡವಾಗಿ ಭೂಮಿಯನ್ನ ನೀಡಿರೋ ರೈತರು ಆದಷ್ಟು ಬೇಗ ನೀರನ್ನ ತರಬೇಕು ಎಂದು ಒತ್ತಾಯಿಸಿದ್ದಾರೆ.