ಗುರುವಿನ ಋಣ ತೀರಿಸಲು ಉನ್ನತ ಸ್ಥಾನಕ್ಕೇರಿ
ಕ.ಪ್ರ.ವಾರ್ತೆ ಶಿರಾ ಆ. 3
ಗುರುವಿನ ಋಣ ತೀರಿಸಬೇಕೆಂದರೆ ವಿದ್ಯಾರ್ಥಿಗಳು ಓದಿ ಬುದ್ಧಿವಂತರಾಗಿ ಉನ್ನತ ಸ್ಥಾನಕ್ಕೇರಬೇಕು. ಇದೆ ವಿದ್ಯಾರ್ಥಿಗಳು ಗುರುವಿಗೆ ನೀಡುವ ಕಾಣಿಕೆ ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಜಯಪ್ರಕಾಶ್ ತಿಳಿಸಿದರು.
ಅವರು ಪಟ್ಟಣದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನಲ್ಲಿ 2013-14 ನೇ ಸಾಲಿನ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ದಿ. ಕೆ.ಮಲ್ಲಣ್ಣ ಸ್ಮಾರಕ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗುಣಾತ್ಮಕ ಚಿಂತನೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಬೇಕೆಂದ ಅವರು ಮೊಬೈಲ್ ಸಂಸ್ಕೃತಿಯಿಂದ ವಿದ್ಯಾರ್ಥಿಗಳು ದೂರವಿರಿ ಎಂದು ಕಿವಿ ಮಾತು ಹೇಳಿದರು. ಮಾನವೀಯತೆಗೆ ಸ್ಪಂದಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸೋಮು ಭಾಸ್ಕರಚಾರ್ ಅವರು ಮಾತನಾಡಿ ಶ್ರದ್ಧೆವಹಿಸಿ ಪಡೆದ ಶಿಕ್ಷಣ ಜೀವನದಲ್ಲಿ ದಾರಿದೀಪವಾಗುತ್ತದೆ. ಇಂತಹ ಶಿಕ್ಷಣ ಪಡೆಯುವಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮರ್ಥವಾಗಿ ಮುನ್ನಡೆಯಬೇಕು ಎಂದು ತಿಳಿಸಿ ಮನುಷ್ಯನಿಗೆ ವ್ಯಕ್ತಿತ್ವ ಬಹಳ ಮುಖ್ಯ ಎಂದರು.
ರಾಜ್ಯ ಪ.ಪೂ. ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರುಗಳ ಸಂಘದ ಟಿ.ಆರ್.ಬಸವರಾಜು ಸೇರಿದಂತೆ ಹಲವರು ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಜ್ಯೋತಿ.ಎಸ್.ಎನ್, ಮಧುಸೂಧನ, ವೇಣುಗೋಪಾಲ, ಚೇತನ್ಕುಮಾರ್ ಕೆ.ಎಚ್, ದಿನಕರ.ಎಸ್.ಎನ್, ಸಹನಾ ಇವರನ್ನು ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಜಯಪ್ರಕಾಶ್ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಉಪನ್ಯಾಸಕ ವೈ.ಎನ್. ಶಂಕರಪ್ಪ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಸನ್ಮಾನ: ಸಮಾರಂಭದಲ್ಲಿ ಇತ್ತೀಚೆಗೆ ವಿಜಯಿಗಳಾದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀಶ, ರಾಜ್ಯ ಪರಿಷತ್ ಸದಸ್ಯ ಆರ್.ಅನಂತರಾಜು, ಖಜಾಂಚಿ ರಮೇಶ್, ನಗರಸಭೆ ಸದಸ್ಯ ನಟರಾಜು, ರಾಜಣ್ಣ, ಶಾಂತಮ್ಮ ದೇವರಾಜ್ ಮತ್ತಿತರರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್.ನಾಗರಾಜು ವಹಿಸಿದ್ದರು. ಕಾರ್ಯದರ್ಶಿ ಎಚ್.ಜಿ.ಲಿಂಗಯ್ಯ, ಉಪಾಧ್ಯಕ್ಷರುಗಳಾದ ಕೆ.ಎಂ.ಹೆಂಜಾರಪ್ಪ, ಕೆ.ಎಲ್.ಮುಕುಂದಪ್ಪ, ಸಿ.ಎಂ.ಪ್ರಕಾಶಗೌಡ, ಖಜಾಂಚಿ ಬಿ.ಆರ್. ಜನಾರ್ದನ್, ನಿರ್ದೆಶಕರುಗಳಾದ ಶಶಿಧರಗೌಡ, ಅಜ್ಜೇಗೌಡರು, ಸುಧಾಕರ ಗೌಡ, ಬಾಂಬೆ ರಾಜಣ್ಣ, ಷಣ್ಮುಖ, ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಆರ್.ರಂಗನಾಥ್, ಪ್ರೊ.ಹೊನ್ನೇಶ್ ಸೇರಿದಂತೆ ನಿರ್ದೆಶಕರು ಹಾಜರಿದ್ದರು. ಕಾರ್ಯದರ್ಶಿ ಎಚ್.ಜಿ. ಲಿಂಗಯ್ಯ ಅವರು ಸ್ವಾಗತಿಸಿದರು. ಪ್ರಾಚಾರ್ಯ ಕೆ.ಎಂ. ಸೋಮಶೇಖರಪ್ಪ ವಂದಿಸಿ ಹಿರಿಯ ಉಪನ್ಯಾಸಕರಾದ ಎಂ.ಲೋಕನಾಥ್ ನಿರೂಪಿಸಿದರು.