ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸನಾತನ ದೇಗುಲಗಳನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯ

Srinivasa Murthy VN
Updated On : 4 Aug 2013, 12:38 pm

ಮಧುಗಿರಿ: ತಾಲೂಕಿನಲ್ಲಿ ಶಿಥಿಲಗೊಂಡಿರುವ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಮ್ಮ ಸನಾತನ ದೇವಸ್ಥಾನಗಳನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು. ತಾಲೂಕಿನ ದೊಡ್ಡದಾಳವೆಟ್ಟ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ಉತ್ಸವ ಸಂದರ್ಭದಲ್ಲಿ ದೊಡ್ಡದಾಳವೆಟ್ಟ ಗ್ರಾಮದ ಬ್ರಾಹ್ಮಣ ಸಂಘದ ಅಧ್ಯಕ್ಷ ತಾಡಿ ಶಿವರಾಂ  ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೊಡ್ಡದಾಳವೆಟ್ಟ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಸದಸ್ಯರು ದೇವಾಲಯದ ಜೀರ್ಣೋದ್ಧಾರ ಹಾಗೂ ದೇವಸ್ಥಾನದ ಬಳಿ ಸಮುದಾಯ ಭವನ ಕಟ್ಟಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜಣ್ಣ, ಸಮುದಾಯ ಭವನದ ಅನುಕೂಲಕ್ಕಾಗಿ ಒಂದು ಕೊಳವೆ ಬಾವಿ ಕೊರೆಸಿ ಕೊಡುವುದಾಗಿ ಭರವಸೆ ನೀಡಿದರು. ಸಂಸದ ಜಿ.ಎಸ್.ಬಸವರಾಜು, ವಿದ್ವಾನ್ ಮಧುಸೂದನಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

'ಚಿಕ್ಕನಹಳ್ಳಿ ಕಾಲೇಜು ಶಾಂತಿ ನಿಕೇತನವಿದ್ದಂತೆ'
ತುಮಕೂರು: ಶಿರಾ ತಾಲೂಕು ಚಿಕ್ಕನಹಳ್ಳಿ ಕಾಲೇಜು ಶಾಂತಿನಿಕೇತನವಿದ್ದಂತೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ವೀರೇಶಾನಂದ ಸರಸ್ವತಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಶಿರಾ ತಾಲೂಕು ಚಿಕ್ಕನಹಳ್ಳಿ ಸರ್ಕಾರಿ ಎಸ್‌ಕೆವಿಡಿ ಪ.ಪೂ. ಕಾಲೇಜು ಆವರಣದಲ್ಲಿ ನಡೆದ ದಿ. ಉಗ್ರೇಗೌಡರ ಪುಣ್ಯ ಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳಿಗೆ 120 ಎಕರೆ ಭೂಮಿಯನ್ನು ದಾನ ಮಾಡಿದ ದಿ. ಉಗ್ರೇಗೌಡರನ್ನು ಸ್ಮರಿಸುತ್ತಾ, ದೈಹಿಕವಾಗಿ ಈಗ ಉಗ್ರೇಗೌಡರು ಇಲ್ಲದಿದ್ದರೂ ಹತ್ತಾರು ಹಳ್ಳಿಗಳ ಜನರ ಮನಸ್ಸಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ. ವಿದ್ಯಾರ್ಥಿಗಳು ವೈಚಾರಿಕವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಎಸ್‌ಎಲ್‌ಎನ್ ಪ್ರಸಾದ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘದ ಕಾಲೇಜು ವಿಭಾಗದಿಂದ ಚುನಾವಣೆಯಲ್ಲಿ ಸತತ 3ನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾದ ಹೆಚ್.ಎಸ್. ಯಶವಂತ್ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ. ಸದಸ್ಯ ರಮೇಶ್, ಈಶ್ವರಿಪ್ರಸಾದ್, ಕಾಲೇಗೌಡ, ಬಿ. ಹನುಮಯ್ಯ, ಮುಕುಂದಪ್ಪ ಉಪಸ್ಥಿತರಿದ್ದರು. ಗ್ರಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಧಿಕ ಪ್ರಾರ್ಥಿಸಿದರು. ನಾಗಭೂಷಣ್ ಸ್ವಾಗತಿಸಿದರು. ಎನ್. ನಾಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಯ್ಯ ವಂದಿಸಿದರು. ಎಂ. ಶಂಕರ್ ನಿರೂಪಿಸಿದರು.

ಹಿರಿಯ ನಾಗರಿಕರ ಕ್ರೀಡಾಕೂಟ
ಚಿಕ್ಕನಾಯಕನಹಳ್ಳಿ: 67ನೇ ಭಾರತ ಸ್ವಾತಂತ್ರೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಂಚಾಲಕರಾದ ಮಾಧವರಾವ್ ತಿಳಿಸಿದ್ದಾರೆ. ಆಗಸ್ಟ್ 11ರಂದು ಭಾನುವಾರ ಬೆಳಿಗ್ಗೆ 6.30ರಿಂದ 10.00ಗಂಟೆಯವರಗೆ  60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಡೆಯುವ ಕ್ರೀಡಾಕೂಟವನ್ನು ಪಟ್ಟಣದ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ.ಪ್ರದೀಪ್ ಕುಮಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಪ್ರಶಾಂತ್‌ಕುಮಾರ್ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಡಾ.ಸಿ.ಎಂ.ಸುರೇಶ್, ಡಾ. ಎಚ್.ಕೆ.ದಾಸ್, ಡಾ. ಭಾಸ್ಕರ ಹೆಗಡೆ ಸಾಹಿತಿ ಎಂ.ವಿ.ನಾಗರಾಜರಾವ್ ಉಪಸ್ಥಿತರಿರುತ್ತಾರೆ.

ಗ್ರಾಪಂ ಸದಸ್ಯ ಸ್ಥಾನಕ್ಕೆ ಚುನಾವಣೆ
ಕುಣಿಗಲ್:  ವಿವಿಧ  ಗ್ರಾಪಂ ಸದಸ್ಯ ಸ್ಥಾನ ಪೈಕಿ, ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾದರೆ, ಮೂರು ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಲಿದೆ.   ಉಜ್ಜಿನಿ ಗ್ರಾಪಂ ವ್ಯಾಪ್ತಿಯ ಉಜ್ಜಿನಿಗ್ರಾಮದ ಸ್ಥಾನಕ್ಕೆ ದೇವಸಂದ್ರದ ಶಂಭುಲಿಂಗಯ್ಯ ಅವಿರೋಧ ಆಯ್ಕೆಯಾದರೆ,  ಬಾಗೇನಹಳ್ಳಿ ಗ್ರಾಪಂನ ಶೆಟ್ಟಿಕೆರೆ ಸದಸ್ಯ ಸ್ಥಾನಕ್ಕೆ ಧನಂಜಯ, ನಂಜೇಗೌಡ ಕಣದಲ್ಲಿದ್ದು 963 ಮತಗಳಿವೆ. ಜಿನ್ನಾಗರೆ ಗ್ರಾಪಂ ನ ಜಿನ್ನಾಗರ  ಸದಸ್ಯ ಸ್ಥಾನಕ್ಕೆ ನಾರಾಯಣಪ್ಪ ಮತ್ತು ಸರೋಜಮ್ಮ ಕಣದಲ್ಲಿದ್ದು 506 ಮತಗಳಿದ್ದು, ತಾವರೆಕೆರೆ ಗ್ರಾಪಂನ ತಾವರೆಕೆರೆ ಸದಸ್ಯ ಸ್ಥಾನಕ್ಕೆ ಬಿ.ಸಿ.ರಮೇಶ್,ಬಿ.ಸಿ.ರಾಮಣ್ಣ ಕಣದಲ್ಲಿದ್ದು 1243 ಮತಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement