ಸರ್ವ ಭಾಷೆಗಳಿಗೂ ಸಂಸ್ಕೃತವೇ ಮಾತೃ ಭಾಷೆ: ವೆಂಕಟೇಶ್
ಕ.ಪ್ರ.ವಾರ್ತೆ ತುರುವೇಕೆರೆ ಆ.3
ಸರ್ವ ಭಾಷೆಗಳ ಉಗಮಕ್ಕೆ ಕಾರಣವಾಗಿರುವ ಸಂಸ್ಕೃತವು ಅತಿ ಪ್ರಾಚೀನವಾಗಿದ್ದು. ಎಲ್ಲಾ ಭಾಷೆಗಳ ತಳಹದಿ ಆಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಮಾಯಸಂದ್ರ ಟಿಬಿಯ ಕಲ್ಪತರು ಆಶ್ರಮದಲ್ಲಿ ನಡೆದ ಕಲ್ಪತರು ಸಂಸ್ಕೃತ ಕಾಲೇಜು ಮತ್ತು ಸಂಸ್ಕೃತ ಪಾಠಶಾಲೆಯ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸಂಸ್ಕೃತ ಎಂಬ ತಾಯಿ ಬೇರಿನಿಂದ ಸಕಲ ಭಾಷೆಗಳ ಉಗಮವಾಗಿದೆ. ಮಾತೃ ಸ್ಥಾನದಲ್ಲಿರುವ ಸಂಸ್ಕೃತವನ್ನು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಡೆಗಣಿಸುತ್ತಿರುವುದು ವಿಷಾದದ ಸಂಗತಿ. ದೇಶದ ಪರಂಪರೆಯನ್ನು ತಿಳಿಯಲು ವಿವಿಧ 'ಮೇಧಾವಿಗಳ ಯಶಸ್ಸನ್ನು ಕಾಣುವುದು ಸಂಸ್ಕೃತದಲ್ಲೇ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು. ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಮಾತನಾಡಿ ಸಂಸ್ಕೃತಕ್ಕೆ ತಮ್ಮ ಮಠ ಬಹಳ ಪ್ರಾಮುಖ್ಯತೆಯನ್ನು ನೀಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂಸ್ಕೃತದ ಸುಗಂಧವನ್ನು ಅರಿಯುವಂತೆ ಮಾಡಲಾಗಿದೆ ಎಂದರು. ಸಂಸ್ಕೃತ ಕಲಿಕೆಯಿಂದ ಕೇವಲ ಜ್ಞಾನ ಮಾತ್ರ ಸಂಪಾದನೆಯಾಗದು. ಜೀವನ ನಿರ್ವಹಣೆಗೆ ಅಗತ್ಯವಾಗಿ ಬೇಕಾಗುವ ಸಂಸ್ಕೃತಿಯನ್ನೂ ಸಹ ನೀಡಲಿದೆ ಎಂದರು.
ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ.ನಂಜುಂಡಯ್ಯ ಮಾತನಾಡಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಂಸ್ಕೃತ ಭಾಷಾಭಿಮಾನ ಮೂಡಿಸಲು ಶ್ರೀ ಮಠ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಲ್ಪತರು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಟಿ.ಎಸ್.ಕುಮಾರಸ್ವಾಮಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ವಿದ್ವಾನ್ ಸಿ.ಜೆ.ಶಂಕರೇಗೌಡ ವಂದಿಸಿದರು.