ಶರಣರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಿ
ಕ.ಪ್ರ.ವಾರ್ತೆ ತುಮಕೂರು ಆ. 4
12ನೇ ಶತಮಾನದಲ್ಲಿ ಶರಣರು ಆಚರಣೆಯ ಮೂಲಕ ತೋರಿಸಿಕೊಟ್ಟ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಆಸ್ತಿಯಾಗಬೇಕು ಎಂದು ಚಿತ್ರದುರ್ಗ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಸಿದ್ಧಗಂಗಾ ಕಾಲೇಜಿನಲ್ಲಿ ಬಸವ ಕೇಂದ್ರ, ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ಹಾಗೂ ಜಿ ಶರಣ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದಿಗೂ 12ನೇ ಶತಮಾನವನ್ನು ನಾವು ಅಪೂರ್ವ ಶತಮಾನವೆಂದು ಕರೆಯುತ್ತೇವೆ. ಸಾಮಾಜಿಕ ಬದಲಾವಣೆ ಜನಪರ ಪ್ರಯೋಗಗಳು ನಡೆದಿರುವ ಕಾರಣದಿಂದ ಅಪೂರ್ವ ಶತಮಾನ ಎಂದು ಕರೆಯಲಾಗುತ್ತಿದೆ. ಇಂತಹ ಅಪೂರ್ಣ ಶತಮಾನವನ್ನು ಮತ್ತೊಮ್ಮೆ ನೋಡಲು ಶರಣತತ್ವ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಅಲ್ಪಶ್ರಮ: ಪ್ರಸ್ತುತ ಜನರಲ್ಲಿ ಅಲ್ಪಶ್ರಮ ಬಹು ಲಾಭ ನಿರೀಕ್ಷೆಯಿದೆ. ಇಂತಹ ನಿರೀಕ್ಷೆಗಳಿಂದ ಬದುಕು ಕಟ್ಟಿಕೊಳ್ಳುವುದು ಅಥವಾ ಸಮಾಜ ನಿರ್ಮಾಣ ಮಾಡುವುದು ಸಾಧ್ಯವಿಲ್ಲ. ಜನರು ಕಡಿಮೆ ಕೆಲಸ ಮಾಡಿ ಹೆಚ್ಚಿನ ವೇತನ ನಿರೀಕ್ಷೆ ಮಾಡುವ ಮನೋಭಾವವನ್ನು ಬದಲಾಯಿಸಿಕೊಂಡು ಕಾಯಕ ಯೋಗಿಗಳಾಗಬೇಕು ಎಂದರು.
ರಾಜ್ಯದಲ್ಲಿ ಜಾತಿಗಣತಿ ನಡೆಸಲಾಗುತ್ತಿದೆ. ಹಾಗೆಯೇ ದುಡಿಯುವ ವರ್ಗದ ಗಣತಿಯೂ ಆಗಬೇಕು. ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಕೆಲಸ ಮಾಡದಿರುವ ವ್ಯಕ್ತಿಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾರತಮ್ಯ ನಿವಾರಿಸಿ: ಸಾಮಾಜಿಕ ಸಮಾನತೆ ತರುವ ಮೂಲಕ ತಾರತಮ್ಯವನ್ನು ನಿವಾರಿಸಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದಂತೆ ಎಲ್ಲಾ ಕುಲಕಸುಬುಗಳಿಗೆ ಸಾಮಾಜಿಕ ಮನ್ನಣೆ ನೀಡುವ ಮೂಲಕ ಬಸವಣ್ಣನವರ ಕಾಯಕ ತತ್ವವನ್ನು ಆಚರಣೆಗೆ ತರಬೇಕು ಎಂದರು.
ಶರಣ ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ಮಾಧ್ಯಮಗಳು ಸಮಾಜ ನಿರ್ಲಕ್ಷಿಸಬೇಕಾದ ವಿಷಯಗಳನ್ನು ವೈಭವಿಕರಿಸುತ್ತಿವೆ. ವೈಭವಿಕರಿಸಬೇಕಾದ ವಿಚಾರಗಳನ್ನು ನಿರ್ಲಕ್ಷಿಸುತ್ತಿವೆ ಇದರಿಂದ ಸ್ವಾಸ್ಥ ಸಮಾಜದ ನಿರ್ಮಾಣ ಅಸಾಧ್ಯ ಎಂದು ಅಭಿಪ್ರಾಯಪಟ್ಟರು. ಬಸವ ತತ್ವಗಳಲ್ಲಿ ಇಂದಿನ ಯುವ ಪೀಳಿಗೆಗೆ ತಿಳಿಸುವ ಅನಿವಾರ್ಯತೆ ಇದೆ. ಬಸವ ತತ್ವಗಳು ನಮ್ಮ ಬದುಕಿಗೆ ಬೆಳಕಾಗಿ ದಾರಿ ತೋರಿಸುವುದರಿಂದ ಅವಗಳ ಪ್ರಚಾರ ಹೆಚ್ಚಾಗಬೇಕು ಎಂದರು.
ಶಾಸಕ ರಫೀಕ್ ಅಹಮದ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ.ಡಿ.ಎನ್. ಯೋಗೀಶ್, ಪ್ರಾಚಾರ್ಯ ವೈದ್ವೇಶ್ವರ್, ಅಕ್ಕ ನಾಗಮ್ಮ, ಸಿದ್ಧಗಂಗಮ್ಮ, ಡಾ.ರಾಜಶೇಖರ್ ಉಪಸ್ಥಿತರಿದ್ದರು.