ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಸದ, ಸಚಿವ, ಡಿಸಿಗೆ ವಿಜ್ಞಾನಗುಡ್ಡ ಅಗ್ನಿಪರೀಕ್ಷೆ

Srinivasa Murthy VN
Updated On : 5 Aug 2013, 12:54 pm

-ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ.ವಾರ್ತೆ ತುಮಕೂರು ಆ. 4
ಜಿಲ್ಲೆಯಲ್ಲಿ ಏಕಕಾಲದಲ್ಲಿ ಸತ್ಯ, ಬಸವತತ್ವ, ಕಾನೂನು ಪರೀಕ್ಷೆಗೆ ಅವಕಾಶ ಒದಗಿ ಬಂದಿದೆ. ವಿಜ್ಞಾನಗುಡ್ಡ ಒತ್ತುವರಿ ಭೂತ ಬಿಡಿಸುವ ಹಿನ್ನೆಲೆಯಲ್ಲಿ ಈ ಅಪರೂಪದ ಪರೀಕ್ಷೆಗೆ ವೇದಿಕೆ ಸಜ್ಜಾಗಬೇಕಿದೆ. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದ್ದು, ದಿನಾಂಕ ನಿಗದಿಯಾಗಬೇಕಿದೆ.
ಬಸವ ತತ್ವ ಪ್ರತಿಪಾದಿಸುವ ತುಮಕೂರು ಸಂಸದ ಜಿ.ಎಸ್. ಬಸವರಾಜ್‌ಗೆ ಬಸವ ತತ್ವ ಪರೀಕ್ಷೆ, ದಾಖಲಾತಿಗಳ ಆಧಾರದಲ್ಲಿ ಸತ್ಯ ಎತ್ತಿ ಹಿಡಿಯಲೇಬೇಕಾಗಿರುವ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿಯವರಿಗೆ ಸತ್ಯ ಪರೀಕ್ಷೆ ಹಾಗೂ ಕಾನೂನು ಎತ್ತಿ ಹಿಡಿಯಲೇಬೇಕಾದ ಅನಿವಾರ್ಯತೆಯಲ್ಲಿರುವ ಕಾನೂನು, ಸಂಸದೀಯ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ.
ಕಳೆದ ಜೂ. 1 ರಂದು ಜಿಲ್ಲಾ ಸಪಪೂ ಕಾಲೇಜು ಮೈದಾನದಲ್ಲಿ ನೆರವೇರಿದ ಅನ್ನಭಾಗ್ಯ ಯೋಜನೆ ಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ, ಆಡಳಿತದಲ್ಲಿ ಸತ್ಯ ಎತ್ತಿ ಹಿಡಿಯುವಂತೆ, ಪ್ರಾಮಾಣಿಕತೆಗೆ ಒತ್ತು ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿಯವರಿಗೆ ಆದೇಶ ನೀಡಿದ್ದರು. ಸಚಿವರಿಗೆ ತಿರುಗೇಟು ನೀಡುವ ರೀತಿಯಲ್ಲೇ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಮೂರ್ತಿಯವರು, ಸತ್ಯ ಎತ್ತಿ ಹಿಡಿಯಲು ಸಹಕರಿಸಿ ಎಂದು ಮಾತು ಮುಗಿಸಿದ್ದರು.
ಸತ್ಯ ಎತ್ತಿ ಹಿಡಿಯುವ ಭರವಸೆ ನೀಡಿರುವ ಡಿಸಿ ಸತ್ಯಮೂರ್ತಿಯವರಿಗೆ ಜಯಚಂದ್ರ ವಿಜ್ಞಾನಗುಡ್ಡ ಒತ್ತುವರಿ ಭೂತ ಬಿಡಿಸಲು ಸಹಕರಿಸುವರೇ, ಕಾನೂನಿನಂತೆ ಕ್ರಮ ಜರುಗಿಸಲು ಅವಕಾಶ ಕೊಡುವರೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಮಧ್ಯೆ ಕಳೆದೊಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ವಿಜ್ಞಾನಗುಡ್ಡದ ಬೆನ್ನು ಹತ್ತಿರುವ ಜಿ.ಎಸ್. ಬಸವರಾಜ್ ಬಸವಾನುಯಾಯಿ. ವಿಜ್ಞಾನಗುಡ್ಡ ಒತ್ತುವರಿ ತೆರವು ಕುರಿತಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸುಮ್ಮನಾಗಿರುವ ಜಿಎಸ್‌ಬಿ ಬಸವ ತತ್ವ ಎತ್ತಿ ಹಿಡಿಯಲೇ ಬೇಕಾಗಿರುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದರೆ ತಪ್ಪಾಗಲಾರದು. ಬಸವರಾಜ್ ವಿಜ್ಞಾನಗುಡ್ಡ ಒತ್ತುವರಿ ತೆರವು ಕುರಿತಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ.
ಡಿಸಿ, ಎಸಿ, ತಹಶೀಲ್ದಾರ್ ಸಂದೇಶವೇನು?: ಕಳೆದ 5 ದಿನಗಳಿಂದ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ವಿಜ್ಞಾನಗುಡ್ಡ ಒತ್ತುವರಿ ಭೂತಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ. ಈ ಮೂಲಕ ಜಿಲ್ಲೆಯ ಜನತೆಗೆ ಯಾವ ಸಂದೇಶ ನೀಡಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕರದ್ದು.
4 ಪಕ್ಷಗಳ ನಿಲುವೇನು?: ಸರ್ಕಾರಿ ಭೂಮಿ ಒತ್ತುವರಿ ತೆರವಿನ ಕುರಿತು ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ (ಸಿಪಿಐ, ಸಿಪಿಐಎಂ ಬಿಟ್ಟು) ಕಿಂಚಿತ್ತೂ ವ್ಯತ್ಯಾಸವಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಒತ್ತುವರಿ ತೆರವು ಕುರಿತಂತೆ ಸೊಲ್ಲೆತ್ತದೆ ಮೌನ ವಹಿಸಿವೆ. ಈಗ ಈ ಮೂರು ಪಕ್ಷಗಳ ಜತೆಗೆ ಹೊಸದಾಗಿ ಸೇರ್ಪಡೆಗೊಂಡಿದೆ ಕರ್ನಾಟಕ ಜನತಾ ಪಕ್ಷ. ಹೀಗಾಗಿ ಸರ್ಕಾರಿ ಭೂಮಿ ಒತ್ತುವರಿ ತೆರವು ಮಾತಿಗಷ್ಟೇ ಸೀಮಿತಗೊಂಡಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ಅಥವಾ ಕಾರ್ಯಾಚರಣೆ ಬೆಂಬಲಿಸಲು ಯಾವೊಂದು ಪಕ್ಷವೂ ಸಿದ್ದವಿಲ್ಲ. ಈ ಹಿಂದೆ ಇದು ಸಾಬೀತಾಗಿದೆ. ಈಗ ಅದೇ ಧೋರಣೆ ಮುಂದುವರೆದಿದೆ. ಮಹತ್ವಾಕಾಂಕ್ಷಿ ವಿಜ್ಞಾನಗುಡ್ಡ ಯೋಜನೆಯಲ್ಲೂ ಗೋಚರಿಸಿದೆ. ಕಣ್ಣಿಗೆ ರಾಚುತ್ತಿದೆ.
ವರ್ಷದಿಂದ ಚರ್ಚೆ: ವಿಜ್ಞಾನಗುಡ್ಡ ಯೋಜನೆ ಜಾರಿ ಕುರಿತಂತೆ ಕಳೆದ ಒಂದು ವರ್ಷದಿಂದಲೂ ಚರ್ಚೆ ನಡೆದೇ ಇದೆ. ಆದರೆ ಯೋಜನೆ ಜಾರಿಗೆ ನಿಜಕ್ಕೂ ಅಡ್ಡಿಯಾಗಿರುವುದು ಸರ್ಕಾರಿ ಭೂಮಿ ಒತ್ತುವರಿಯಾಗಿರುವುದು.
ಒಂದಲ್ಲ, ಎರಡಲ್ಲ, ಬರೋಬ್ಬರಿ 327 ಎಕರೆ ಜಮೀನು. ಈ ಕುರಿತು ಕನ್ನಡಪ್ರಭ ಕಳೆದ 4 ದಿನಗಳಿಂದ ಸರಣಿ ಲೇಖನ ಪ್ರಕಟಿಸುತ್ತಾ ಬಂದಿದ್ದರೂ, ಈವರೆವಿಗೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಾವುವೂ ಒತ್ತುವರಿ ತೆರವು ಕುರಿತಂತೆ ಸೊಲ್ಲೆತ್ತಿಲ್ಲ. ಈ ಮಧ್ಯೆ ವಿಜ್ಞಾನಗುಡ್ಡದ ಬಗ್ಗೆ ಆಗಾಗ್ಗೆ ಸದ್ದು ಮಾಡುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸರ್ವ ಪಕ್ಷಗಳ ಮುಖಂಡರನ್ನು, ಎಂಎಲ್‌ಎ, ಎಂಪಿ, ಎಂಎಲ್‌ಸಿ ಗಳನ್ನೂ ಕರೆದು ಸಭೆ ನಡೆಸಿ, ಅವರಿಂದ ಸಕಾರಾತ್ಮಕ  ಹೇಳಿಕೆ ನೀಡಿಸಿ, ಇನ್ನೇನು ಯೋಜನೆ ಜಾರಿಯಾಗೇ ಹೋಯಿತು ಎಂಬುವಂತಹ ವಾತಾವರಣ ನಿರ್ಮಾಣ ಮಾಡಿತ್ತು. ಆದರೆ ವಸ್ತು ಸ್ಥಿತಿ ಬೇರೆಯೇ ಇತ್ತು. ಒತ್ತುವರಿ ತೆರವುಗೊಳಿಸದೇ ಯೋಜನೆ ಜಾರಿ ಅಸಾಧ್ಯವೆಂಬ ಕಟು ಸತ್ಯ ಗೊತ್ತಿದ್ದರೂ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ತೀವ್ರತರ ಪ್ರಯತ್ನ ನಡೆಸದೇ, ಸಂಬಂಧಪಟ್ಟವರಿಗೆ ನಾಮಕಾವಸ್ಥೆಗೆಂಬಂತೆ ಪತ್ರ ಬರೆಯುತ್ತಲೇ ಇರುವುದು ಗೋಚರಿಸಿತ್ತು. ಯೋಜನೆ ಜಾರಿಗೆ ಶ್ರಮಿಸುತ್ತಲೇ ಬಂದಿರುವ ಸಂಸದ ಜಿ.ಎಸ್. ಬಸವರಾಜ್ ಕೂಡ ಇದಕ್ಕೆ ಹೊರತಾಗಿಲ್ಲ ಎಂಬುದು ವಿಷಾದನೀಯ ಸಂಗತಿ.

ಸದ್ದು ಮಾಡುವ ಅಪ್ಪ, ಸದ್ದೇ ಮಾಡದ ಮಗ
ತುಮಕೂರು: ಸದಾ ಸದ್ದು ಮಾಡುತ್ತಲೇ, ಅಭಿವೃದ್ಧಿ ಕುರಿತಂತೆ ಚಿಂತಿಸುತ್ತಲೇ ಇರುವ ಸಂಸದ ಜಿ.ಎಸ್ ಬಸವರಾಜು ಒಂದು ಕಡೆಯಾದರೆ, ಸದ್ದೇ ಮಾಡದ ಆದರೆ ರಾಜಕೀಯ, ಸಾರ್ವಜನಿಕ ಜೀವನದಲ್ಲಿರುವ, ಕೆಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅವರ ಪುತ್ರ ಜ್ಯೋತಿಗಣೇಶ್ ಇನ್ನೊಂದು ಕಡೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕೆಜೆಪಿ ಅಭ್ಯರ್ಥಿಯಾಗುವುದರ ಮೂಲಕ ಸಾರ್ವಜನಿಕ, ರಾಜಕೀಯ ಜೀವನ ಪ್ರವೇಶಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ. ರಫೀಕ್ ಅಹಮದ್ ಅವರಿಗೆ ತೀವ್ರ ಪೈಪೋಟಿ ನೀಡಿ, ಗೆಲವಿನ ಸನಿಹಕ್ಕೆ ಬಂದು, ಸೋತರು. ಸೋತ ಎರಡನೇ ವಾರಕ್ಕೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಸೋತಿದ್ದೇನೆ. ಆದರೆ ರಾಜಕೀಯ ಜೀವನದಿಂದ ಹಿಂದೆ ಸರಿಯಲಾರೆ. ಸಮಸ್ಯೆಗಳನ್ನೆತ್ತಿಕೊಂಡು ಹೋರಾಟ ಮಾಡುತ್ತೇನೆ. ಜನರ ಮಧ್ಯದಲ್ಲೇ ಇರುತ್ತೇನೆ. ವಿಶೇಷವಾಗಿ ತುಮಕೂರು ನಗರದಲ್ಲಿ ಆಗಿರುವ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ ಮೇ. 31 ರೊಳಗೆ ಸುದ್ದಿಗೋಷ್ಠಿ ನಡೆಸಿ, ಒತ್ತುವರಿಯನ್ನು ಎಳೆ -ಎಳೆಯಾಗಿ ಬಿಡಿಸಿಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಕನ್ನಡಪ್ರಭದಲ್ಲಿ ಅದು ದೊಡ್ಡ ಸುದ್ದಿಯೂ ಆಗಿತ್ತು. ಜ್ಯೋತಿಗಣೇಶ್ ಬೆಂಬಲಕ್ಕೆ ಅಂದು ತುಮಕೂರು ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಹೆಬ್ಬಾಕ ರವಿಶಂಕರ್ ಕೂಡ ನಿಂತಿದ್ದರು. ಆದರೆ ಸುದ್ದಿಗೋಷ್ಠಿ ನಡೆದು ಎರಡೂವರೆ ತಿಂಗಳು ಕಳೆದರೂ ಜ್ಯೋತಿಗಣೇಶ್ ಸದ್ದೇ ಇಲ್ಲ. ಹೆಬ್ಬಾಕ ರವಿಶಂಕರ್ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವು ಕುರಿತಂತೆ ಸದ್ಯ ಒಂದು ಜೋಕ್ ಚಾಲ್ತಿಯಲ್ಲಿದೆ. ಅದು ಸದ್ದು ಮಾಡುವ ಅಪ್ಪ, ಸದ್ದೇ ಮಾಡದ ಮಗ.

ಅಭಿವೃದ್ಧಿ ಕ್ರಾಂತಿ ಸಾಧ್ಯವೇ?
ಮಹತ್ವಾಕಾಂಕ್ಷಿ ವಿಜ್ಞಾನಗುಡ್ಡ ಯೋಜನೆ ಜಾರಿಗೆ ಈಗ ಒತ್ತುವರಿ ಭೂತ ಅಡ್ಡಗಾಲಾಗಿದೆ. ಒತ್ತುವರಿ ಭೂತ ತೆರವುಗೊಳಿಸದೆ ನಿರಕ್ಷೀತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುವುದು ಸಾಧ್ಯವಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿಯೇ ಸ್ಥಾಪಿಸಲ್ಪಟ್ಟಿರುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಯಾವ ಪಾತ್ರ ವಹಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement