ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ
ಕ.ಪ್ರ.ವಾರ್ತೆ ತಿಪಟೂರು ಆ. 4
ತಾಲ್ಲೂಕಿನ ದೊಡ್ಡಿಕಟ್ಟೆ ಗ್ರಾಮದಲ್ಲಿ ಕೆರೆಯ ಏರಿ ನಿರ್ಮಾಣ ಮಾಡಲು ಗೋಮಾಳ ಹಾಗೂ ರೈತರು ಕೃಷಿ ಮಾಡುವ ಭೂಮಿಯಲ್ಲಿ ಅನುಮತಿ ಇಲ್ಲದೆ ಮಣ್ಣನ್ನು ತೆಗೆಯಲಾಗಿದೆ ಎಂದು ತಾ.ಪಂ. ಅಧ್ಯಕ್ಷ ಭಾನುಪ್ರಕಾಶ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ. ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ರೈತರು ಪ್ರಶ್ನಿಸಿದರೆ ಗುತ್ತಿದಾರರು ದಬ್ಬಾಳಿಕೆ ನಡೆಸುತ್ತಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಅಸಮಂಜಸ ಉತ್ತರ ನೀಡಿದರು. ಈ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ಸೂಚಿಸಿದರು.
ನಿಲಕ್ಷ್ಯ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೇ ಇಲಾಖೆಯ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಡೆದ ವಿವಿಧ ಕಾಮಗಾರಿಗಳಿಗೆ ಶಿಷ್ಟಾಚಾರಕ್ಕಾದರೂ ತಾ.ಪಂ. ಅಧ್ಯಕ್ಷರನ್ನು ಗುದ್ದಲಿ ಪೂಜೆಗೆ ಆಹ್ವಾನಿಸಲಿಲ್ಲ, ಪ್ರತಿ ಬಾರಿಯ ಕೆಡಿಪಿ ಸಭೆಯಲ್ಲಿ ಗೈರಾಗುತ್ತಿರುವ ಬಿಸಿಎಂ ಅಧಿಕಾರಿ ಈ ಬಾರಿಯೂ ಗೈರಾಗಿದ್ದು ಅಧ್ಯಕ್ಷರ ಕೆಂಡಾಮಂಡಲಕ್ಕೆ ಕಾರಣವಾಗಿ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ವೈದ್ಯರಿಗಾಗಿ ರೋಗಿಗಳು ದಿನವಿಡಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಸ್ತ್ರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಹೋದ ರೋಗಿಗಳಿಗೆ ಚಿಕಿತ್ಸೆಗೆ ಖಾಸಗಿ ನರ್ಸಿಂಗ್ ಹೋಂಗೆ ಸೂಚಿಸುತ್ತಾರೆ ಎಂದು ಸದಸ್ಯೆ ವಸಂತಗಂಗಾಧರ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ. ಅಧ್ಯಕ್ಷರು ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಮಾಧಾನಗೊಳಿಸಿದರು.
ಸಭೆಗಷ್ಟೇ ಸೀಮಿತ: ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲು ತಾ.ಪಂ. ಅನುದಾನ ನೀಡಿದರೂ ಶಿಶು ಯೋಜನಾಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿ ಸಭೆಯಲ್ಲೂ ಅಂಗನವಾಡಿ ಕಟ್ಟಡಗಳ ಬಗ್ಗೆ ಚರ್ಚಿಸುವುದು ಸಭೆಗಷ್ಟೇ ಸೀಮಿತವಾಗಿದೆ. ಇನ್ನು ಹತ್ತು ದಿನಗಳ ಒಳಗೆ ಕಟ್ಟಡ ಕಾಮಗಾರಿ ಆರಂಭಿಸಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗೆ ಅಧ್ಯಕ್ಷರು ತಾಕೀತು ಮಾಡಿದರು.
ಪಶು ಇಲಾಖೆಯ ವತಿಯಿಂದ ಕಳೆದ ಬಾರಿ ಕೋಳಿ ಸಾಕಣೆಗೆ ನೀಡಿದ ಮರಿಗಳು ಸಾವನ್ನಪ್ಪಿವೆ ಎಂದು ಸ್ವಾಮಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಪಶು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಪಶು ವೈದ್ಯಾಧಿಕಾರಿಗಳು ಕೋಳಿಮರಿಗಳಿಗೆ ನೀಡುವ ಆಹಾರದಲ್ಲಿ ವ್ಯತ್ಯಾಸ ಉಂಟಾಗಿ ಈ ಘಟನೆ ಸಂಭವಿಸಿದೆ ಎಂದು ಸಭೆಗೆ ಉತ್ತರಿಸಿದರು. ಕೋಳಿ ಮರಿ ನೀಡುವುದಷ್ಟೆ ನಿಮ್ಮ ಜವಾಬ್ದಾರಿಯಲ್ಲ ಅವುಗಳ ಸಾಕಾಣಿಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಅಧ್ಯಕ್ಷರು ಸೂಚಿಸಿದರು, ಉಪಾಧ್ಯಕ್ಷ ರಾಜು, ಸ್ಥಾಯಿಸಮಿತಿ ಅಧ್ಯಕ್ಷೆ ನೇತ್ರಾವತಿ, ಇಓ ಕೃಷ್ಣಾರೆಡ್ಡಿ ಇದ್ದರು.
ಸಭೆಯಿಂದ ಹೊರ ನಡೆದ ಸದಸ್ಯರು: ಕೆಡಿಪಿ ಸಭೆ ಆರಂಭಕ್ಕೆ ವೇದಿಕೆಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿಯವರನ್ನು ಆಹ್ವಾನಿಸುತ್ತಿದ್ದಂತೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷರ ಬದಲಾವಣೆ ಆಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಅಲ್ಲದೇ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸದಸ್ಯರ ಗಮನಕ್ಕೆ ಬಂದಿಲ್ಲ ಎಂದು ಸದಸ್ಯ ರವಿ ಸಭೆ ಪ್ರಾರಂಭಕ್ಕೆ ಅವಕಾಶ ನೀಡಿದ್ದರಿಂದ, ಅಧ್ಯಕ್ಷರ ಅಪ್ಪಣೆ ಮೇರೆಗೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ನಡೆಯಿತು. ಸದಸ್ಯೆ ನೇತ್ರಾವತಿ ಹಾಗೂ ರವಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. 9 ಮತಗಳನ್ನು ಪಡೆದ ನೇತ್ರಾವತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯ ರವಿ 8 ಮತಗಳಿಗೆ ತೃಪ್ತಿ ಪಡಬೇಕಾಯಿತು. ಇದರಿಂದ ಅಸಮಾಧಾನಗೊಂಡ ಸದಸ್ಯರು ರವಿ ಬೆಂಬಲಿತ ಸದಸ್ಯರು ಈವರೆಗೆ ಸ್ಥಾಯಿ ಸಮಿತಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿಲ್ಲ. ಆಡಳಿತ ಪಕ್ಷದವರೇ ಎಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷರಾದರೆ, ನಮಗೇನು ಇಲ್ಲ ಕೆಲಸ ಎಂದು ಕೆಡಿಪಿ ಸಭೆ ಆರಂಭಕ್ಕೂ ಮುನ್ನವೇ ಸಭೆಯಿಂದ ಹೊರನಡೆದರು.