ಸಿರಿವರ ಶಿವರಾಮಯ್ಯರಿಂದ ಜಿಲ್ಲಾ ಕವಿಗಳ ಕವನ ವಾಚನ
ಕ.ಪ್ರ.ವಾರ್ತೆ ತುಮಕೂರು ಆ.4
ಪಟ್ಟ ಪಾಡು ಹಾಡಾಗಿ ಬಂದಿರುವ ಜಾನಪದ ಗೀತೆಗಳು ಜೀವಂತಿಕೆಯನ್ನು ಹೊಂದಿವೆ. ಅನುಭವದ ನೆಲೆಯಲ್ಲಿ ಕಟ್ಟಿದ ಗೀತೆಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ಚಿಕ್ಕನಹಳ್ಳಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಎನ್. ನಾಗಪ್ಪ ಅಬಿಪ್ರಾಯಪಟ್ಟರು.
ಅವರು ಜಿಲ್ಲಾ ಕಸಾಪ, ತಾಲೂಕು ಹಾಗೂ ನಗರಶಾಖೆಗಳ ಆಶ್ರಯದಲ್ಲಿ ಸಿದ್ಧಗಂಗಾ ಡಿ.ಇಡಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ವಾರದ ಸಾಹಿತ್ಯ ಸಂಭ್ರಮ 6ನೇ ವಾರದ ಕಾರ್ಯಕ್ರಮದಲ್ಲಿ ಸಿರಿವರ ಶಿವರಾಮಯ್ಯ ಅವರಿಂದ ಜಿಲ್ಲಾ ಕವಿಗಳ ಕವನ ವಾಚನ ಹಾಗೂ ಗಾಯನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೊಂದು ಸಾರ್ಥಕ ಕಾರ್ಯಕ್ರಮವಾಗಿದ್ದು ಸಿರಿವರ ಶಿವರಾಮಯ್ಯನವರು ಸಿರಿಕಂಠದ ಅದ್ಭುತ ಗಾಯಕ. ಇಂತಹ ಗಾಯಕರ ಹಾಡುಗಳನ್ನು ಕೇಳುವವರೇ ಕಡಿಮೆಯಾಗುತ್ತಿದ್ದಾರೆ. ಅಲ್ಲದೇ ನಮ್ಮ ಮಕ್ಕಳೇ ಜಾನಪದ ಗೀತೆ, ಭಾವಗೀತೆಗಳನ್ನು ಕೇಳುವ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಿಲ್ಲ. ಜೀವನದ ಮಾಧುರ್ಯ ತುಂಬಿದ ಅನುಭವದ ಹಾಡುಗಳು ನೆನಪಾಗಿ ಉಳಿಯುತ್ತದೆ ಎಂದರು. ಪತ್ರಕರ್ತ ರಾಮಣ್ಣ ಮಾತನಾಡಿ ಸಭೆ, ಸಮಾರಂಭಗಳಿಗೆ ಆ ಗಮಿಸುವ ಆಸಕ್ತ ಪ್ರೇಕ್ಷಕರು ಮುಖ್ಯ. ಚಿಕ್ಕವೇದಿಕೆ, ದೊಡ್ಡ ವೇದಿಕೆ ಮುಖ್ಯವಲ್ಲ. ಕಸಾಪ ಕಾರ್ಯಕ್ರಮಗಳು ಹೀಗೆ ನಿಯಮಿತವಾಗಿ ನಡೆಯಲಿ ಎಂದು ಹಾರೈಸಿದರು.
ದಸೂಡಿ ಗ್ರಾ.ಪಂ. ಉಪಚುನಾವಣೆ ಶಾಂತಿಯುತ
ಹುಳಿಯಾರು: ಹೋಬಳಿ ದಸೂಡಿ ಗ್ರಾ.ಪಂ.ಯ ಒಂದನೇ ವಾರ್ಡ್ ರಾಮನಾಯ್ಕ ಅವರ ಸಾವಿನಿಂದ ತೆರವಾಗಿದ್ದ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆಯಿತು. ಉಪಚುನಾವಣಾ ಕಣದಲ್ಲಿ ರಂಗಸ್ವಾಮಿ, ಕುಮಾರನಾಯ್ಕ, ಚಂದ್ರಾನಾಯ್ಕ ಸೇರಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ದಸೂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೂತ್‌ನಲ್ಲಿ ಮತದಾನ ನಡೆದಿದ್ದು ಒಟ್ಟು 1230 ಮತಗಳಲ್ಲಿ 660 ಮತ ಚಲಾವಣೆಯಾಗಿವೆ.
ಮಲಾಲ ಶೋಷಿತ ಹೆಣ್ಣು ಮಕ್ಕಳ ಆಶಾಕಿರಣ
ತುಮಕೂರು: ಮಲಾಲ ಶೋಷಿತ ಹೆಣ್ಣು ಮಕ್ಕಳ ಆಶಾಕಿರಣ ಎಂದು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್.ಪಿ. ರವೀಂದ್ರನಾಥ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಲಾಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ನಾಗಭೂಷಣ್ ಅವರು ಮಹಿಳಾ ಸಬಲೀಕರಣ ಮತ್ತು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಗಳಿಸುವ ಅಗತ್ಯ ಬಗ್ಗೆ ವಿಶ್ಲೇಶಿಸಿದರು. ಬಿಂದು ವಂದಿಸಿದರು. ಸಬಲೀಕರಣ ಸಂಚಾಲಕಿ ಬಿ.ಎಸ್. ಮಂಜುಳ ಹಾಜರಿದ್ದರು.
ದಲಿತರ ಹಕ್ಕಿಗಾಗಿ ರಥಯಾತ್ರೆ
ತುಮಕೂರು: ದಲಿತರ ಹಕ್ಕೊತ್ತಾಯಕ್ಕಾಗಿ ಹೆಬ್ಬೂರಿನಿಂದ ತುಮಕೂರಿನವರೆಗೆ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಈ ರಥಯಾತ್ರೆಯನ್ನು ಹೆಬ್ಬೂರಿನ ಅಂಬೇಡ್ಕರ್ ಭವನದಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೆಬ್ಬೂರು ಪೊಲೀಸ್ ಠಾಣಾ ಪಿಎಸ್‌ಐ ಸಿದ್ದರಾಜು, ತಾ.ಪಂ. ಮಾಜಿ ಸದಸ್ಯ ಹೆಚ್. ಗಂಗಪ್ಪ, ಗ್ರಾ.ಪಂ. ಉಪಾಧ್ಯಕ್ಷ ಜೆ. ವೆಂಕಟೇಶಯ್ಯ, ಸಮಾಜ ಸೇವಕ ಸಿ.ವಿ. ರಾಘವೇಂದ್ರ, ಹಾಗೂ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಈ ರಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದವು. ಅದೇ ರೀತಿ ಬಳ್ಳಗೆರೆ, ನಾಗವಲ್ಲಿ, ಹೊಳಕಲ್ಲು, ಗೂಳೂರು, ಗ್ರಾ.ಪಂ. ಸಂಘ ಸಂಸ್ಥೆಯವರು ರಥಯಾತ್ರೆಯನ್ನು ಸ್ವಾಗತಿಸಿ ಬೀಳ್ಕೊಡುಗೆ ಮಾಡಿದ್ದು ವಿಶೇಷ. ರಥಯಾತ್ರೆ ತುಮಕೂರು ತಲುಪಿದಾಗ ದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ಡಿ. ದೊಡ್ಡೇಗೌಡ ಸ್ವಾಗತಿಸಿದರು. ದಸಂಸ ವಿಭಾಗೀಯ ಸಂಚಾಲಕ ಗಾಂಧಿರಾಜ್, ದಲಿತ ಮುಖಂಡ ಸಿರಿವರ ಶಿವಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು.