ಹಾಲಿನ ಸಹಾಯಧನಕ್ಕೆ ಒತ್ತಾಯ
ತಿಪಟೂರು: ಕಾಲ ಕಾಲಕ್ಕೆ ಮಳೆ ಇಲ್ಲದೆ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಹೇಳತೀರದಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಹಾಲಿನ ಸಹಾಯಧನವನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಎಪಿಎಂಸಿ ನಿರ್ದೇಶಕ ಬಿ.ಬಿ.ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎಲ್ಲೆಡೆ ತೀವ್ರ ಬರಗಾಲ ಆವರಿಸಿದ್ದು, ರೈತರು ಒಂದು ಹಸು ಸಾಕಲು ಮೇವು, ಬೂಸ, ನೀರು ಜೊತೆಗೆ ಚಿಕಿತ್ಸಾ ವೆಚ್ಚ ದುಪ್ಪಟ್ಟಾಗಿದೆ. ಮಳೆ ಇಲ್ಲದೆ ಅಂತರ್ಜಲದ ಮಟ್ಟ ಕುಸಿದಿದೆ. ಇವುಗಳ ನಿರ್ವಹಣೆಯು ತುಂಬಾ ಕಷ್ಟವಾಗುತ್ತಿದೆ. ಹಾಲಿನ ಹಣ ಬೂಸ,ಮೇವುಗಳಿಗೆ ಸಾಕಾಗುತ್ತಿಲ್ಲ. ಸಾಲ ಮಾಡುವ ದುಸ್ಥಿತಿ ಉಂಟಾಗಿದೆ. ಇದರಿಂದ ರೈತರು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.
ಹಿಂದಿನ ಸರ್ಕಾರ ನೀಡಿದ್ದ 2 ಸಹಾಯಧನ ಬದಲಿಗೆ ಈಗಿರುವ ಸರ್ಕಾರ 4 ಕೊಡಲು ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆಯೇ ಹೊರತು ಈಡೇರಿಲ್ಲ. ಆದರೆ, ದಿನನಿತ್ಯದ ಬಳಕೆಯ ವಸ್ತುಗಳು ಗಗನಕ್ಕೇರುತ್ತಿವೆ. ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಬೆಳೆ ಕೈತಪ್ಪಿ ಹೋಗಿದೆ. ತೆಂಗಿನಮರಗಳಂತೂ ವಿನಾಶದಂಚಿಗೆ ತಲುಪಿವೆ. ಕೊಬ್ಬರಿ ಬೆಲೆ ಪಾತಾಳ ಕಂಡಿದೆ. ರೈತರು ಆತ್ಮಹತ್ಯೆಯತ್ತ ಮುಖಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸರ್ಕಾರ ಹಾಲಿನ ಸಹಾಯಧನವನ್ನು ಒಂದು ವಾರದೊಳಗೆ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಬಿ.ಬಿ. ಸಿದ್ದಲಿಂಗಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಕೇಬಲ್ ಕಳ್ಳನಿಗೆ ಗ್ರಾಮಸ್ಥರ ಗೂಸಾ
ತುಮಕೂರು: ಮೋಟಾರ್ ಕೇಬಲ್ ಕದಿಯುತ್ತಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಗೂಸ ಕೊಟ್ಟ ಘಟನೆ ನಗರಕ್ಕೆ ಸಮೀಪದ ಹಿರೇತೊಟ್ಟಿಕೆರೆಯಲ್ಲಿ ನಡೆದಿದೆ.
ಗುರುವಾರ ಬೆಳಿಗ್ಗೆ ಲೋಕೇಶ್ ಎಂಬಾತ ಎಂದಿನಂತೆ ಜಮೀನು ಬಳಿ ಹೋಗಿದ್ದ. ಇದ್ದಕ್ಕಿದ್ದಂತೆ ಜಮೀನು ಬಳಿ ಬಂದಿದ್ದ ವ್ಯಕ್ತಿಯೊಬ್ಬ ಇವರನ್ನು ಕಂಡು ಪಾರಿಯಾಗಲು ಯತ್ನಿಸಿದ್ದ. ಅನುಮಾನಗೊಂಡ ಲೋಕೇಶ್ ಹಿಂದೆ ಬಿದ್ದಿದ್ದಾನೆ.
ರೈತ ಲೋಕೇಶ್‌ನ ಕೂಗನ್ನು ಕೇಳಿದಂತ ಅಕ್ಕ ಪಕ್ಕದ ಜನರು ಹಾಗೂ ರೈತರು ಕೂಡ ಈತನಿಗೆ ಸಾಥ್ ನೀಡಿದ್ದಾರೆ. ಆಗ ಕಾಲಿಗೆ ಬುದ್ದಿ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಕಡೆಗೂ ಗ್ರಾಮಸ್ಥರಿಗೆ ಸಿಕ್ಕಬಿದ್ದ. ಆತ ಚನ್ನರಾಯಪಟ್ಟಣದ ಕುಮಾರ್ ಎಂಬಾತ. ಕೂಡಲೇ ಗ್ರಾಮಸ್ಥರೆಲ್ಲಾ ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ರೈತರ ಪಂಪ್ ಸೆಟ್ ಕೇಬಲ್ ಕಳವು ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು,ರೈತರಿಗೆ ಒಂದು ತಲೆ ನೋವಾಗಿ ಪರಿಣಮಿಸಿತ್ತು.