'ಶರಣರ ಸಂಪನ್ನತೆ ಸಮಾಜಕ್ಕೆ ಆದರ್ಶ'
ತಿಪಟೂರು: ಬಸವಣ್ಣ, ಬುದ್ದ, ಅಕ್ಕಮಹಾದೇವಿ ಅವರಂಥ ಶರಣರ ಆದರ್ಶಗಳು ಇಂದು ಸಮಾಜಕ್ಕೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಇವುಗಳನ್ನು ಅಳವಡಿಸಿಕೊಂಡ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಗುರುಕುಲಾನಂದಾಶ್ರಮ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನವೀರಶೈವ ಗುರುಕುಲಾನಂದಾಶ್ರಮದಲ್ಲಿ ನಡೆದ 202ನೇ ಬೆಳದಿಂಗಳ ಶರಣಧರ್ಮ ಚಿಂತನಾಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸೃಷ್ಟಿ, ಸ್ಥಿತಿ, ಲಯ ಉಂಟಾಗುವುದು ಲಿಂಗದಿಂದ. ಜೀವನವಿದ್ದಾಗಲೇ ಮುಕ್ತಿ ಪಡೆಯುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಪುನರ್ ಜನ್ಮದ ಕಲ್ಪನೆಯನ್ನು ತಿರಸ್ಕರಿಸಿ ಈಗಿನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕಿವಿಮಾತು ತಿಳಿಸಿದರು.
ಉಪನ್ಯಾಸಕ ಡಾ.ಎಲ್.ಎಂ.ವೆಂಕಟೇಶ್ ಮಾತನಾಡಿ, ಕಲ್ಯಾಣ ಕ್ರಾಂತಿ ಇಡೀ ಜಗತ್ತಿನ ಕ್ರಾಂತಿಗಳಿಗೆಲ್ಲ ಮೊದಲಿನದು. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಜೀವನ ಪುನರ್ ಪರಿಷ್ಕರಿಸಿ ಸಾಮಾನ್ಯರ ಬದುಕಿಗೆ ಪೂರಕವಾಗುವಂತೆ ಸಮಾಜ ನಿರ್ಮಾಣ ಮಾಡ ಹೊರಟವರಲ್ಲಿ ಕಲ್ಯಾಣ ಕ್ರಾಂತಿಯ ಶರಣರು ಮೊದಲಿಗರಾಗಿದ್ದಾರೆ. ಸುಮಾರು 800 ವರ್ಷಗಳ ಇತಿಹಾಸವಿರುವ ಇದಕ್ಕೆ ಸ್ತ್ರೀಪರವಾದ ಚಳುವಳಿ, ಕಾಯಕ ಕ್ರಾಂತಿ, ಗುಡಿ ಕೈಗಾರಿಕೆಗಳ ಕ್ರಾಂತಿ ಅಲ್ಲದೆ, ಪ್ರಜಾಪ್ರಭುತ್ವ ಮಾದರಿಯ ಪ್ರಥಮ ಹೆಜ್ಜೆಯಾಗಿ ಈ ಕ್ರಾಂತಿ ಗಮನ ಸೆಳೆದಿದೆ. ಆ ಕಾರಣದಿಂದ ನಾವೆಲ್ಲರೂ ಇದರ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಆಧುನಿಕ ಪಠ್ಯಗಳ ಸೇರ್ಪಡೆ ಮಾಡುವುದ ಮೂಲಕ ಸಮಾಜ ಸುಧಾರಣೆಗೆ ಹೊಸ ಭಾಷ್ಯಾ ಬರೆಯಬೇಕೆಂದು ತಿಳಿಸಿದರು.
ಗೋಷ್ಠಿಯಲ್ಲಿ ಜಿ. ಬಸವರಾಜು, ಪ್ರೊ. ನರಸಿಂಹರಾಜು, ಪ್ರೊ. ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.ಆಕಾಶವಾಣಿ ಕಲಾವಿದ ಈರಪ್ಪ ಪ್ರಾರ್ಥಿಸಿದರು. ಕಾರ್ಯನಿರ್ವಾಹಣಾಧಿಕಾರಿ ಹರಿಪ್ರಸಾದ್ ಸ್ವಾಗತಿಸಿದರು. ಉಪನ್ಯಾಸಕ ನಾಗರಾಜು ನಿರೂಪಿಸಿದರು. ಆರಾಧ್ಯ ವಂದಿಸಿದರು.