ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಳೆರೋಗ ಪರಿಹಾರಕ್ಕಾಗಿ ಹೋರಾಟ: ಸದಾನಂದಗೌಡ

Srinivasa Murthy VN
Updated On : 27 Aug 2013, 1:06 am

ಪುತ್ತೂರು: ಕೊಳೆರೋಗದಿಂದ ಈ ಬಾರಿ ಅಡಕೆ ಬೆಳೆಗಾರರಿಗೆ ಶೇ.80ರಿಂದ 90ರಷ್ಟು ನಷ್ಟ ಸಂಭವಿಸಿದ್ದು, ಸರ್ಕಾರ ತಕ್ಷಣವೇ ಅಡಕೆ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ಕೊಳೆರೋಗ ಶಾಶ್ವತ ತಡೆಗೆ ಪರಿಹಾರ ರೂಪಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಎಚ್ಚರಿಸಿದರು.
 ಅವರು ಸೋಮವಾರ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಜಿನ್ನಪ್ಪ ಪೂಜಾರಿ ಮತ್ತು ಮೋಹನ ಪಕಳ ಎಂಬವರ ತೋಟಕ್ಕೆ ಭೇಟಿ ನೀಡಿ ಕೊಳೆರೋಗ ಸಮಸ್ಯೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 10 ಜಿಲ್ಲೆಗಳ ರೈತರಿಗೆ ಅಡಕೆಯೇ ಜೀವನಾಧಾರವಾಗಿದ್ದು, 6 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಅಡಕೆಯನ್ನೇ ಅವಲಂಭಿಸಲಾಗಿದೆ. ಅಡಕೆ ಮತ್ತು ಮಿಶ್ರ ಬೆಳೆಗಳಿಂದ ಸರ್ಕಾರಕ್ಕೆ 1ಸಾವಿರ ಕೋಟಿ ಆದಾಯವಿದೆ. ರಾಜ್ಯದಲ್ಲಿ ಒಟ್ಟು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ಈ ಪೈಕಿ 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ಸುಮಾರು 35 ಸಾವಿರ ಕುಟಂಬ ನೆಲೆ ಕಳೆದುಕೊಳ್ಳುವ ಭೀಕರ ದುಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಕಳೆದ ಬಾರಿ ಕೊಳೆರೋಗದಿಂದ ಶೇ.15ರಿಂದ20ರಷ್ಟು ನಷ್ಟವುಂಟಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡಕೆ ಬೆಳೆಗಾರರಿಗೆ ಬೆಂಬಲ ಬೆಲೆ, ದೇಶೀಯ ಅಡಕೆಗೆ ಮಾರುಕಟ್ಟೆ ಹಾಗೂ ಬಡ್ಡಿ ರಹಿತ ಸಾಲ ನೀಡುವ ಮೂಲಕ ಉತ್ತೇಜಿಸಲಾಗಿತ್ತು. ಇದೀಗ ಆಡಳಿತ ಪಕ್ಷ ರೈತರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದರು.
 ಅಡಕೆ ಬೆಳೆಯ ಬಗ್ಗೆ ತೋಟಗಾರಿಕಾ ಇಲಾಖೆ ಮತ್ತು ಆಹಾರ ಇಲಾಖೆಗಳು ಜನರನ್ನು ದಾರಿ ತಪ್ಪಿಸುತ್ತಿದೆ. ಅಲ್ಲದೆ ಕೊಳೆರೋಗ ಪರಿಹಾರ ನೀಡುವ ಬಗ್ಗೆ ರೈತರಿಗೆ ಪಹಣಿ ಪತ್ರ ನೀಡುವಂತೆ ಹಾಗೂ ಭಾವಚಿತ್ರ ಇನ್ನಿತರ ದಾಖಲೆಗಳನ್ನು ನೀಡುವಂತೆ ಸತಾಯಿಸುತ್ತಿದ್ದಾರೆ. ಇದನ್ನು ಕೈಬಿಡುವಂತೆ ತಾನು ಈಗಾಗಲೇ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದು, ದ.ಕ. ಜಿಲ್ಲಾಧಿಕಾರಿಗಳಲ್ಲಿಯೂ ಈ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.

ಬಿಪಿಎಲ್‌ಗೆ 2 ಕೆ.ಜಿ. ಬೆಲ್ಲ ವಿತರಣೆಗೆ ಚಿಂತನೆ: ಪ್ರಕಾಶ್ ಹುಕ್ಕೇರಿ
ಹಾವೇರಿ:
ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಿಗೆ 2 ಕೆ.ಜಿ. ಬೆಲ್ಲವನ್ನೂ ವಿತರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಚಿಂತಿಸಿದೆ ಎಂದು ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಖಾತೆ ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು. ಸೋಮವಾರ ರಾಜ್ಯ ಸರ್ಕಾರದ 'ನೂರು ದಿನ-ನೂರಾರು ನಿರ್ಣಯ' ಎಂಬ ಕಿರುಹೊತ್ತಿಗೆ ಬಿಡುಗಡೆಗೊಳಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಬೆಲ್ಲ ವಿತರಿಸುವ ಕುರಿತಾದ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಅವರ ಮುಂದಿಡಲಾಗಿದೆ. ಸಚಿವ ದಿನೇಶ ಗುಂಡೂರಾವ್ ಅವರೂ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರಲ್ಲದೆ ಈ ಕುರಿತಂತೆ ಸಿಎಂ ಅವರೊಟ್ಟಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಬೆಳೆಯಲಾಗಿರುವ ಕಬ್ಬನ್ನು ನುರಿಸದೇ ಇರುವುದರಿಂದ ಪಕ್ಕದ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಪಾಲಾಗುತ್ತಿದೆ. ಪಡಿತರ ಮೂಲಕ ಬೆಲ್ಲವನ್ನು ವಿತರಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ಗಾಣಗಳು ಸ್ಥಾಪನೆಗೊಳ್ಳಲಿವೆ. ಈ ಪ್ರಕ್ರಿಯೆಯಿಂದ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹಿಸಲು ಸಾಧ್ಯ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement