ಕೃಷಿಯನ್ನು ಉದ್ಯಮವೆಂದು ಘೋಷಿಸಿ
ಕ.ಪ್ರ.ವಾರ್ತೆ ಗುಬ್ಬಿ ಆ. 27
ಪ್ರಸ್ತುತ ದಿನಗಳಲ್ಲಿ ಕೃಷಿಯನ್ನು ಉದ್ಯಮವೆಂದು ಘೋಷಿಸಿ ಅದರ ಮೇಲೆ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡದ ಹೊರತು ಕೃಷಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು ಮೇಲುಕೋಟೆ ಕ್ಷೇತ್ರ ಶಾಸಕ ಹಾಗೂ ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಶಿವರಾತ್ರಿ ಕಲ್ಯಾಣ ಮಂದಿರದಲ್ಲಿ ಗುಬ್ಬಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಗುಬ್ಬಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಕೈಗಾರಿಕಾ ಕ್ಷೇತ್ರದಲ್ಲಿ ವರ್ಷಕ್ಕೆ 5 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳುವ ಸರಕಾರ ಕೃಷಿಯಲ್ಲಿ ವರ್ಷಕ್ಕೆ 3 ಲಕ್ಷ ಕೋಟಿ ನಷ್ಟವಾಗುತ್ತಿದ್ದರೂ ಅದನ್ನು ನಷ್ಟವೆಂದು ಏಕೆ ಪರಿಗಣಿಸಿಸುವುದಿಲ್ಲ ಎಂದು ಪ್ರಶ್ನಿಸಿದರು.
ಕೃಷಿ ಬಜೆಟ್ ಅನ್ನು ಕೇವಲ ನಾಮಕಾವಸ್ತೆಗಷ್ಟೇ ಮಂಡಿಸಿರುವ ಸರಕಾರ ಬೆಳೆಗೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆಯಾಗಲೀ, ಸಹಾಯಧನಗಳನ್ನಾಗಲೀ ನಿರ್ಧರಿಸುವಲ್ಲಿ ವಿಫಲವಾಗಿದೆಎಂದು ಆರೋಪಿಸಿದ ಅವರು ಸರಕಾರದ ಈ ಅನಿಷ್ಠ ಪದ್ಧತಿಯಿಂದ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ರಾಜ್ಯದ ರೈತಾಪಿ ವರ್ಗ ನೇಣಿಗೆ ಶರಣಾಗುತ್ತಿದ್ದರೆ, ಅನ್ನದಾತನ ಜೀವಕ್ಕೆ ಯಾವುದೇ ರಕ್ಷಣೆ ಮತ್ತು ಬೆಲೆಯಿಲ್ಲದಂತ್ತಾಗಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ದೇಶ ಘೋರ ಆಹಾರ ಕ್ಷಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕಾದರೆ ಪರಮಶಿವಯ್ಯನವರ ಮಹತ್ತರ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತಂದರೆ ಮಾತ್ರ ಸಾಧ್ಯವೆಂದರು.
ಡಿಸಿ ಅನುಚಿತ ವರ್ತನೆ: ತುಮಕೂರು ರಾಯದುರ್ಗ ರೇಲ್ವೆ ಮಾರ್ಗದಲ್ಲಿ ನಡೆದಿರುವ ಭೂಸ್ವಾಧೀನದ ಬಗ್ಗೆ ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲು ಮುಂದಾದಾಗ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಸರಕಾದ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳತ್ತೇವೆ ಎಂದರು. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಾಗದೆ ಅಂತರ್ಜಲದ ಕುಸಿತದಿಂದ ಪ್ರಮುಖ ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆ ಮರಗಳು ನಾಶವಾಗಿವೆ ಎಂದು ತಿಳಿಸಿದರು.
ಸರಕಾರ ವೈಜ್ಞಾನಿಕ ರೀತಿಯಲ್ಲಿ ಒಂದು ತೆಂಗಿನ ಮರಕ್ಕೆ 25 ಸಾವಿರ ರು.ಗಳನ್ನು ಮತ್ತು ಪ್ರತೀ ಅಡಿಕೆ ಮರಕ್ಕೆ 6 ಸಾವಿರ ರು.ಗಳನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಉದ್ಘಾಟಿಸಿ ಮತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸೋಮಗುದ್ದ ರಂಗಸ್ವಾಮಿ ಮಾತನಾಡಿ ಕೊಬ್ಬರಿ ಖರೀದಗಾಗಿ ಕನಿಷ್ಠ ತಾಲೂಕಿನಲ್ಲಿ 10 ನಫೇಡ್ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಅನಕೂಲ ಮಾಡಿಕೊಡುವುದರ ಜೊತೆಗೆ ಕನಿಷ್ಠ ಒಬ್ಬ ರೈತನಿಂದ 25 ಕ್ವಿಂಟಲ್ ಕೊಬ್ಬರಿ ಖರೀದಿಸಬೇಕೆಂದರು.
ಆಗ್ರಹ: ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಅವರು ಗುಬ್ಬಿ ತಾಲೂಕಿನ ಚೇಳೂರು, ಹಾಗಲವಾಡಿ, ಕಸಬ ಹೋಬಳಿಯ ಕೊಡಗಿ ಹಳ್ಳಿ, ಹೊಸಹಳ್ಳಿ, ಕೊಪ್ಪ, ಕುನ್ನಾಲ ಹೀಗೆ ಹಲವು ಹಳ್ಳಿಗಳು ಹೇಮಾವತಿ ನೀರಿನಿಂದ ವಂಚಿತವಾಗಿದ್ದು ಆ ಭಾಗದಲ್ಲಿನ ಜನತೆಗೆ ಹೇಮಾವತಿ ನೀರಿನ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸುವಂತೆ ಆಗ್ರಹಿಸಿದರು. ಇಷ್ಟೆಲ್ಲಾ ಅವಾಂತರಗಳ ಜೊತೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಜಿಲ್ಲೆಯ ಹಲವು ಬ್ಯಾಂಕುಗಳು ರೈತರ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಹರಾಜು ಮಾಡುತ್ತಿರುವುದನ್ನು ನಿಲ್ಲಿಸಿ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ. ಗೋವಿಂದರಾಜು ಮಾತನಾಡಿ ರಾಜ್ಯ ಸರಕಾರ ಮತ್ತು ರಾಜಕಾರಣಿಗಳು ರೈತರ ಬಗ್ಗೆ ಕಾಳಜಿ ವಹಿಸದ ಹೊರತು ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು. ರೈತ ಸಂಘದ ಅಭ್ಯುದಯಕ್ಕೆ ಅವಿರತ ಹೋರಾಟ ಮಾಡಿದ ಕೆ.ಎಸ್.ಪುಟ್ಟಣ್ಣಯ್ಯನವರ ಸಾಧನೆ ಅವಿಸ್ಮರಣೀಯವಾದುದು. 33 ವರ್ಷಗಳ ಹೋರಾಟದ ಫಲವಾಗಿ ಇಂದು ಶಾಸಕರಾಗಿ ಆಯ್ಕೆಯಾಗಿರುವುದು ಇಡೀ ರಾಜ್ಯದ ರೈತರಿಗೆ ಸಂದ ಜಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಕುಮಾರ್, ರೈತ ಸಂಘ ಮಹಿಳಾಧ್ಯಕ್ಷೆ ನಂದಿನಿ ಜಯರಾಂ, ಕಾರ್ಯಾಧ್ಯಕ್ಷ ಜಿ.ಟಿ.ರಾಮಸ್ವಾಮಿ ಹಾಗೂ ಸಂಘದ ಶೀರಾಮು, ರಾಮಕೃಷ್ಣಯ್ಯ, ತುಮಕೂರು ಜಿಲ್ಲಾ ರೈತ ಸಂಘದ ಎ. ಗೋವಿಂದ ರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ.ನಿಜಾನಂದ ಮೂರ್ತಿ, ಹಸಿರು ಸೇನೆ ಅಧ್ಯಕ್ಷ ಸಿ.ಟಿ. ಕುಮಾರು, ಕೆ.ಎನ್. ವೆಂಕಟೇಗೌಡ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ರೈತ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು.