ಮೂಢನಂಬಿಕೆ ಸಾಫ್ಟ್ವೇರ್ನಿಂದ ಹೊರಬನ್ನಿ
ಕ.ಪ್ರ.ವಾರ್ತೆ ತುಮಕೂರು ಆ. 27
ಈಗಾಗಲೇ ಬಲವಾಗಿ ಬೇರುಬಿಟ್ಟಿರುವ ಮೂಢನಂಬಿಕೆ ಎಂಬ ಸಾಫ್ಟ್ವೇರ್ನಿಂದ ಹೊರ ಬರುವಂತೆ ಸಾಮಾಜಿಕ ಕಾರ್ಯಕರ್ತ ಸಿ.ಸಿ.ಪಾವಟೆ ಅವರು ಕರೆ ನೀಡಿದರು.
ಅವರು ತುಮಕೂರಿನ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ತುಮಕೂರಿನ ಎಸ್.ಐ.ಟಿ. ಬಡಾವಣೆಯ ಎಚ್.ಎಸ್.ಆರ್. ಸಭಾಂಗಣದಲ್ಲಿ ಏರ್ಪಾಟಾಗಿದ್ದ ಅಧ್ಯಯನ ಗೋಷ್ಠಿಯಲ್ಲಿ ಆರೋಗ್ಯ ಮತ್ತು ಮನಸ್ಸು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇಲ್ಲದ್ದನ್ನು ಇದೆ ಎಂದು ನಂಬಿಸುವ, ಮನುಷ್ಯನನ್ನು ಪರಾವಲಂಬಿಯನ್ನಾಗಿ ಮಾಡುವ ಮೂಢನಂಬಿಕೆಯ ಸಾಫ್ಟ್ವೇರ್ ಭಾರತೀಯರ ಮನಸ್ಸಿನಲ್ಲಿ ಬಲವಾಗಿ ಬೇರು ಬಿಡುವಂತೆ ಮಾಡಲಾಗಿದೆ.
ಚಿಕ್ಕಂದಿನಿಂದಲೇ ಈ ಮೂಢನಂಬಿಕೆಯ ಸಾಫ್ಟ್ವೇರ್ ಅನ್ನು ಅಳವಡಿಸಲಾಗುತ್ತದೆ. ಇದು ಕೊನೆಯವರೆಗೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಸರಿ ಯಾವುದು, ತಪ್ಪು ಯಾವುದು ಎಂದು ನಿರ್ಧರಿಸುವ ಶಕ್ತಿ ಮನುಷ್ಯನಿಗಿದ್ದು, ಮನುಷ್ಯ ತನ್ನ ಶಕ್ತಿಯನ್ನು ತಾನು ಅರಿಯುವುದರ ಮೂಲಕ, ಈ ಮೂಢನಂಬಿಕೆಯ ಸಾಫ್ಟ್ವೇರ್ ಅನ್ನು ಕಿತ್ತೊಗೆದು ಸ್ವಾವಲಂಬಿಯಾಗುವಂತೆ ಮಾಡುವ ತುರ್ತು ಇಂದು ಬಂದೊದಗಿದೆ ಎಂದು ಪಾವಟೆ ಅಭಿಪ್ರಾಯಪಟ್ಟರು.
ದುರದೃಷ್ಟಕರ: ಮನುಷ್ಯ ಇತರೆ ಪ್ರಾಣಿ, ಪಕ್ಷಿಗಳಂತೆ ಅಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಮನುಷ್ಯನಿಗೆ ಪ್ರಾಣಿ, ಪಕ್ಷಿಗಳಿಗೆ ಇರುವಂತೆ ನಿರ್ದಿಷ್ಟ ಗುಣ, ಲಕ್ಷಣಗಳಿಲ್ಲ. ಮನುಷ್ಯ ಚಿಂತಿಸುವ, ಯೋಚಿಸಿದ್ದನ್ನು ಸಾಧಿಸುವ ಗುಣದಿಂದಾಗಿಯೇ ಪ್ರಾಣಿ ವರ್ಗದಿಂದ ಬೇರ್ಪಟ್ಟಿದ್ದಾನೆ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಇದನ್ನು ಮರೆತ ಪರಿಣಾಮ ಮೂಢನಂಬಿಕೆಯ ಫಿಕ್ಸ್ ಸಾಫ್ಟ್ವೇರ್ಗೆ ಜೋತು ಬಿದ್ದಿದ್ದೇವೆ. ಇಂದು ವಿಜ್ಞಾನಿಗಳೂ ಕೂಡ ದೇವರು, ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗೆ ಒಳಗಾಗಿರುವುದು ದುರದೃಷ್ಟಕರ ಎಂದು ಪಾವಟೆ ವಿಷಾದಿಸಿದರು.
ಯಶಸ್ಸು ಖಚಿತ: ಮನುಷ್ಯನನ್ನು ಪರಾವಲಂಬಿಯನ್ನಾಗಿ ಮಾಡುವ ದೇವರು, ಜ್ಯೋತಿಷ್ಯದ ಮೇಲೆ ಭಾರ ಹಾಕುವುದನ್ನು ಬಿಟ್ಟು, ಕೆಲಸ ಮಾಡಲು ಮುಂದಾದಲ್ಲಿ ಯಶಸ್ಸು ಖಚಿತ. ಯಾವುದೇ ದೇವರು, ಧರ್ಮ ಬಂದವರಿಗೆಲ್ಲಾ ಒಳ್ಳೆಯದು ಮಾಡುತ್ತೇವೆಂದು ಎಲ್ಲಿಯೂ ಹೇಳಿಲ್ಲ ಎಂಬುದನ್ನು ನೆನಪಿಡಿ ಎಂದು ಮಾರ್ಮಿಕವಾಗಿ ನುಡಿದರು.
ದೇವರು ಎಂಬ ಸಾಫ್ಟ್ವೇರ್ ಅನ್ನು ಈಗಾಗಲೇ ಫಿಕ್ಸ್ ಮಾಡಲಾಗಿದೆ. ತ್ರಿಶಂಕು ಸ್ವರ್ಗವನ್ನು ಸೃಷ್ಟಿಸಿದ ವಿಶ್ವಾಮಿತ್ರ ಕೂಡ ಮನುಷ್ಯನೇ ಎಂಬುದನ್ನು ನೆನಪಿನಲ್ಲಿಡಿ. ಮನುಷ್ಯ ಅಗಾಧ ಶಕ್ತಿಯ ಆಗರ. ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಅದ್ಭುತಶಕ್ತಿ ಎಂಬುದು ಮನುಷ್ಯನ ಮನಸ್ಸಿನೊಳಗೇ ಇದೆ. ಇದನ್ನು ಅರಿಯುವ ಸಂಕಲ್ಪ ಮಾಡಬೇಕಿದೆ. ಮನುಷ್ಯನ ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ. ನಿನಗೆ ನೀನೇ ದೇವರು. ನಿನ್ನಲ್ಲೇ ದೈವಶಕ್ತಿಯಿದೆ ಎಂಬುದನ್ನು ಅರಿತು ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಯೋಗಪಟು - ಆಹಾರ ತಜ್ಞ ಜಿ.ವಿ.ವಿ.ಶಾಸ್ತ್ರಿ ಅವರು ಪಾವಟೆ ಅವರ ಅಭಿಪ್ರಾಯಗಳಿಗೆ ಪೂರಕವಾಗಿ ಮಾತನಾಡಿ ಭಾರತದ ಹಿಂದಿನ ಸಂತರು-ಮಹಂತರು ಮನಸ್ಸಿನ ಅದ್ಭುತ ಶಕ್ತಿಯನ್ನು ಅರಿತು ಅದರ ಸಮರ್ಪಕ ಬಳಕೆ-ನಿಯಂತ್ರಣದಿಂದ ಅಸಾಧ್ಯವೆಂಬಂತಹ ಕಾರ್ಯಗಳನ್ನು ಮಾಡಬಲ್ಲರೆಂಬುದನ್ನು ನಿರೂಪಿಸಿದ್ದಾರೆ. ಪಾಶ್ಚಾತ್ಯರು ಇತ್ತೀಚಿನ ಎರಡು ಶತಮಾನಗಳಿಂದ ಮನಸ್ಸಿನ ಶಕ್ತಿಯ ಅಧ್ಯಯನದಲ್ಲಿ ತೊಡಗಿದ್ದು ಅದರ ವಿವಿಧ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಭಾರತೀಯರು ಹಿಂದಿನ ಪರಂಪರೆಯ ಕೊಂಡಿ ಕಳಚಿಕೊಂಡಿರುವುದರಿಂದ ನಮ್ಮಲ್ಲೇ ಅರಿವಿಗೆ ಬಂದಿರುವ ವಿಷಯಗಳಿಗೂ ಪಾಶ್ಚಾತ್ಯರ ಸಂಶೋಧನೆಗಳತ್ತ ದೃಷ್ಟಿ ಹರಿಸುತ್ತಿದ್ದೇವೆ. ಮನಸ್ಸಿನ ಅದ್ಭುತ ಶಕ್ತಿ ಅರಿತು ಮುನ್ನಡೆಯಬೇಕು ಎಂದು ವಿವರಿಸಿದರು.
ಅರಿತು ಮುನ್ನಡೆಯಬೇಕು: ಹಿರಿಯ ವೈದ್ಯ ಡಾ. ಬಿ.ಎನ್. ನಿರ್ವಾಣಿರಾವ್ ಅವರು ಶಬ್ದಮಾಲಿನ್ಯ, ವಾಯುಮಾಲಿನ್ಯ, ಆಹಾರಮಾಲಿನ್ಯ, ಅನೈರ್ಮಲ್ಯ ಇತ್ಯಾದಿ ಪರಿಸರ ಮಾಲಿನ್ಯದಿಂದ ಮನುಷ್ಯನ ಜೀವನ ದುಸ್ತರವಾಗಿ ವಿವಿಧ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಸ್ವಚ್ಛ ಪರಿಸರ, ಶುಚಿ ರುಚಿಯಾದ ಆಹಾರ ಸೇವನೆ, ಶಿಸ್ತಿನ ದಿನಚರಿ, ಅಗತ್ಯ ವ್ಯಾಯಾಮ-ಇವುಗಳಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ತಿಳಿಸಿದರು.
ಎಚ್.ಎಸ್. ರಾಮಣ್ಣ ಮತ್ತು ಎಚ್.ಎಸ್.ಸಾವಿತ್ರಿ ರಾಮಣ್ಣ ದಂಪತಿ ಹಿರಿಯ ವೈದ್ಯರಾದ ಡಾ. ಬಿ.ಎನ್. ನಿರ್ವಾಣಿರಾವ್ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಹಿರಿಯ ಯೋಗಪಟು ಎಂ.ಕೆ. ನಾಗರಾಜರಾವ್, ಹಾಸ್ಯಪಟು ಜಿ.ಕೆ. ಕುಲಕರ್ಣಿ, ತತ್ವಪದ ಗಾಯಕ ಶಾನುಭೋಗ್, ಸಾಮಾಜಿಕ ಕಾರ್ಯಕರ್ತರಾದ ಕೆ.ಆರ್. ವಾಸುದೇವನ್, ವಿಜಯಕುಮಾರ್, ಉಪನ್ಯಾಸಕ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.