ಸರಪಳಿ ವ್ಯವಸ್ಥೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಕೃಷ್ಣಮೂರ್ತಿ
ತುಮಕೂರು: ಜನಸಾಮಾನ್ಯರಲ್ಲಿ ಮತ್ತು ತಾಂತ್ರಿಕೇತರ ಸಿಬ್ಬಂದಿಯಲ್ಲಿ ತಾಂತ್ರಿಕ ಜ್ಞಾನ ಕೊರತೆ ಎದ್ದುಕಾಣುತ್ತಿರುವುದು ಆತಂಕದ ಸಂಗತಿಯಾಗಿದೆ. ಸರಪಳಿ ವ್ಯವಸ್ಥೆಯಂತೆ ಕಲಿತವರು ಕಲಿಯದೇ ಇರುವ ತಾಂತ್ರಿಕೇತರ ಸಿಬ್ಬಂದಿಗೆ ಕಲಿಸಿಕೊಡಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಸಿದ್ದಾರ್ಥ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಕೆ.ಎ. ಕೃಷ್ಣಮೂರ್ತಿ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗ, ಟೆಕ್ವಿಪ್ ಸಹಯೋಗದೊಂದಿಗೆ ಶೈಕ್ಷಣಿಕ ಅಭಿವೃದ್ಧಿಗಾಗಿ ಕಂಪ್ಯೂಟರ್‌ನ ಬಳಕೆ ಮತ್ತು ಉಪಯೋಗ ಕುರಿತು ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಈ ವಿಷಯ ತಿಳಿಸಿದರು.
ಎಲ್ಲರಿಗೂ ಅಲ್ಪಸ್ವಲ್ಪ ಕಂಪ್ಯೂಟರ್ ಜ್ಞಾನ ತಿಳಿದೇ ಇರುತ್ತದೆ. ಅದು ಕೇವಲ ಟೈಪ್ ಮಾಡುವುದು, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಸುವುದಕ್ಕೆ ಸೀಮಿತವಾಗಬಾರದು. ಕಂಪ್ಯೂಟರ್ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ತಮ್ಮ ದಿನ ನಿತ್ಯದ ವೃತ್ತಿಯಲ್ಲಿ ಅನ್ವಯಿಸಿಕೊಳ್ಳಬೇಕು ಎಂದರು.
ಅಷ್ಟೇ ಅಲ್ಲದೆ ಸರಪಳಿ ವ್ಯವಸ್ಥೆಯಂತೆ ಕಲಿತ ಜ್ಞಾನವು ಹಂಚಿಕೆಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಶೋಕ್ ಮೆಹ್ತಾ, ಪ್ರಸ್ತುತ ದಿನಗಳಲ್ಲಿ ಜನರು ಮೊಬೈಲ್‌ಗಳತ್ತ ಗಮನ ಹರಿಸಿ ಇನ್ನಿತರ ವಲಯಗಳಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಕುರಿತಾಗಿ ನಡೆಯುವ ಕಾರ್ಯಾಗಾರಗಳಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವುದರಿಂದ ತಾಂತ್ರಿಕ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು ಎಂದರು. ಕರುಣಾಕರ್ ಸ್ವಾಗತಿಸಿದರು. ವಾಣಿ ಪ್ರಾರ್ಥಿಸಿದರು, ಪ್ರದೀಪ್ ವಂದಿಸಿದರೆ, ರಾಜೇಶ್ವರಿ ನಿರೂಪಿಸಿದರು.