ಹೆಬ್ಬೂರು ಠಾಣೆ ಎಸ್‌ಐ ಸಿದ್ದರಾಜು ಅಮಾನತಿಗೆ ಆಗ್ರಹ, ಪ್ರತಿಭಟನೆ
ಕ.ಪ್ರ.ವಾರ್ತೆ ತುಮಕೂರು ಆ.27
ತುಮಕೂರು ಗ್ರಾಮಾಂತರದ ಹೆಬ್ಬೂರು ಠಾಣೆ ಎಸ್‌ಐ ಸಿದ್ದರಾಜು ಅಮಾನತ್ತಿಗೆ ಆಗ್ರಹಿಸಿ ಸಮತಾ ಸೈನಿಕ ದಳದ ವತಿಯಿಂದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.
ಎಸ್‌ಐ ಸಿದ್ದರಾಜು ದಲಿತ ವಿರೋಧಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೆಬ್ಬೂರು ಹೋಬಳಿ ಗರಗದಕುಪ್ಪೆ ಗ್ರಾಮದ ಸರ್ವೆ ನಂ. 47 - 1 ರ 26 ಗುಂಟೆ ಜಮೀನಿನಲ್ಲಿ ದಲಿತ ಜನಾಂಗದ ನರಸಿಂಹಯ್ಯನವರು 40 ವರ್ಷಗಳಿಂದ ಸ್ವಾಧೀನದಲ್ಲಿದ್ದು ಅವರ ಹೆಸರಿಗೆ ಕಳೆದ 15 ವರ್ಷಗಳಿಂದ ಪಹಣಿ ಬರೆಯಲಾಗಿದೆ. ಇದೀಗ ಅವರ ಮಗನಾದ ನರಸಿಂಹಮೂರ್ತಿಯವರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವ ಎಸ್‌ಐ ಸಿದ್ದರಾಜು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಮತಾ ಸೈನಿಕ ದಳ ಆಗ್ರಹಿಸಿದೆ.
ದಲಿತರಿಗೆ ರಕ್ಷಣೆ ನೀಡುವ ಬದಲು ದಲಿತರ ಮೇಲೆ ದೌರ್ಜನ್ಯ ಎಸಗಿ ಅವಮಾನಿಸಿರುವ ಎಸ್‌ಐ ಸಿದ್ದರಾಜು ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು. ಹಾಗೂ ಬೇರೊಬ್ಬ ಅಧಿಕಾರಿಯನ್ನು ತನಿಖೆಗೆ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎರಡು ವಾರಗಳ ಕೆಳಗೆ ತಮ್ಮ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯತೆ ತೋರಿರುವುದರಿಂದ ಪ್ರತಿಭಟನೆ ಅನಿವಾರ್ಯವಾಗಿದೆ. ಬೇಡಿಕೆ ಈಡೇರದಿದ್ದರೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗಲಿದೆ ಎಂದು ತುಮಕೂರು ಜಿಲ್ಲಾ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಹೇರೂರು ಧನರಾಜ್ ಎಚ್ಚರಿಸಿದ್ದಾರೆ.