ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಧಾನಸೌಧ ಬೇಕಾದ್ರೂ ಕ್ರಯ ಮಾಡಿಕೊಡ್ತೀರ

Srinivasa Murthy VN
Updated On : 29 Aug 2013, 12:15 pm

ಅಧಿಕಾರಿ ವಿರುದ್ಧ ಉಪಲೋಕಾಯುಕ್ತ ನ್ಯಾ. ಆದಿ ಗರಂ ಟಿ ಚುರುಕಿನ ಕೆಲಸಕ್ಕೆ ಸೂಚನೆ, ಜಿಲ್ಲೆಯಲ್ಲಿ 500 ಪ್ರಕರಣ ಬಾಕಿ
ಕನ್ನಡಪ್ರಭ ವಾರ್ತೆ ತುಮಕೂರು ಆ.28
ತುಮಕೂರು ಜಿಲ್ಲೆಯಲ್ಲಿ ಒಟ್ಟು 500 ಪ್ರಕರಣ ಬಾಕಿ ಇದ್ದು ಜನರ ಬಳಿಯೇ ನ್ಯಾಯ ಕೊಡಿಸುವ ಉದ್ದೇಶದಿಂದ ಈಗಾಗಲೇ ಮಧುಗಿರಿ ಮತ್ತು ತಿಪಟೂರಿನಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಉಪಲೋಕಾಯುಕ್ತ ನ್ಯಾ. ಸುಭಾಷ್ ಆದಿ ಸ್ಪಷ್ಟಪಡಿಸಿದರು.
ನಮ್ಮ ಬಳಿ ಜನರು ದೂರು ತೆಗೆದುಕೊಂಡು ಬರುವುದನ್ನು ತಪ್ಪಿಸುವ ಸಲುವಾಗಿ ಜನರ ಬಳಿ ನಾವೇ ಹೋಗಿ ವಿಚಾರಣೆ ನಡೆಸಿ ನ್ಯಾಯ ಕೊಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕುಣಿಗಲ್ ಮತ್ತು ಗುಬ್ಬಿ ತಾಲೂಕುಗಳಿಗೆ ಸಂಬಂಧಿಸಿದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ತುಮಕೂರಿನಲ್ಲಿ ಬುಧವಾರ ಮಧ್ಯಾಹ್ನದವರೆಗೆ 78 ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆಯನ್ನು ನ್ಯಾ.ಸುಭಾಷ್ ಬಿ.ಆದಿ ನಡೆಸಿದರು. ಅಲ್ಲದೇ ಫಿರ್ಯಾದುದಾರರು ಹಾಗೂ ಅಧಿಕಾರಿಗಳ ವಾದವನ್ನು ಆಲಿಸಿದರು. ಕೆಲವು ಪ್ರಕರಣಗಳನ್ನು ಶೀಘ್ರದಲ್ಲೇ ಬಗೆಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.
ಕುಣಿಗಲ್ ತಾಲೂಕು ಕಸಬಾ ಹೋಬಳಿಯ ಬೇಗೂರು ಗ್ರಾ.ಪಂ. ಬಿಲ್ ಕಲೆಕ್ಟರ್ ಹಾಗೂ ಅಟೆಂಡರ್ ಸೇರಿ ತಮ್ಮ ಸಂಬಂಧಿಕರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆಂಬ ದೂರನ್ನು ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಉಪಲೋಕಾಯುಕ್ತರಿಗೆ ಸಲ್ಲಿಸಿದರು.
ಹಳೆಯ ದಾಖಲೆಗಳನ್ನು ತಿದ್ದಿರುವುದು ಸೇರಿದಂತೆ ಹತ್ತು ಹಲವಾರು ಪ್ರಕರಣಗಳನ್ನು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಉಪಯೋಕಾಯುಕ್ತರಿಗೆ ತಂದರು.
ಗರಂ: ದಾಖಲೆ ತಿರುಚಿ ಕ್ರಯ ಮಾಡಿಕೊಟ್ಟಿರುವುದರ ಬಗ್ಗೆ ಉಪಲೋಕಾಯುಕ್ತರು ಕುಣಿಗಲ್ ತಾಲೂಕು ಇಓ ಅವರನ್ನು ಕೇಳಿದಾಗ ಅವರು ಉತ್ತರ ಹೇಳಲು ತಡವರಿಸಿದರು. ಇದರಿಂದ ಸಿಟ್ಟಾದ ಉಪಲೋಕಾಯುಕ್ತರು ನೀವು ವಿಧಾನಸೌಧವನ್ನು ಕೂಡ ಕ್ರಯ ಮಾಡಿಕೊಡುತ್ತೀರ ಎಂದು ಗರಂ ಆದರು.
ಪಂಚಾಯತ್ ರಾಜ್ ಕಾಯ್ದೆ ಅಡಿ ಖಾತೆಯನ್ನು ರದ್ದುಪಡಿಸಿ ಮುಂದಿನ ಕ್ರಮಕೈಗೊಳ್ಳುವಂತೆ ಜಿಪಂ ಸಿಇಒ ಗೋವಿಂದರಾಜು ಅವರಿಗೆ ಉಪಲೋಕಾಯುಕ್ತರು ಸೂಚಿಸಿದರು.
ಕಂದಾಯ ಇಲಾಖೆಗೆ ಸಂಬಂಧಪ್ಟ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಣಿಗಲ್ ತಹಸೀಲ್ದಾರ್ ಮಧ್ಯಾಹ್ನದ ತನಕ ವಿಚಾರಣೆ ಎದುರಿಸಿದರು.  ಹಿಂದಿನ ತಹಸೀಲ್ದಾರ್‌ಗಳು ಮಾಡಿದ ತಪ್ಪುಗಳಿಗೆಲ್ಲಾ ಜಗದೀಶ್ ಬೆಲೆ ಕೊಡಬೇಕಾಗಿ ಬಂತು.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ, 300 ಪಡಿತರ ಚೀಟಿ ವಿತರಣೆ, ತ್ಯಾಜ್ಯ ವಸ್ತುಗಳಿಂದ ಆಗುತ್ತಿರುವ ತೊಂದರೆ, ಯಲಿಯೂರು ಗ್ರಾಪಂ ನೀರಿನ ಸಮಸ್ಯೆ, ಹುತ್ರಿದುರ್ಗ ಹೋಬಳಿಯ ಹಾಲಿವಾಗಲು ಗ್ರಾಮದ 3 ಗುಂಡುತೋಪುಗಳ 3 ಎಕರೆ 7 ಗುಂಟೆ ಜಮೀನು ಭೂಗಳ್ಳರು ಕಬಳಿಸಿರುವ ಪ್ರಕರಣ, ಪೊಲೀಸ್ ಇಲಾಖೆಯ ಪ್ರಕರಣಗಳ ವಿಚಾರಣೆ ನಡೆಯಿತು.
ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಜಿಪಂ ಸಿಇಒ ಗೋವಿಂದರಾಜು, ಜಿಲ್ಲಾ ಪೊಲೀಸ್ ವರಿಷ್‌ಠಾಧಿಕಾರಿ ರಮಣಗುಪ್ತ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.

ಉಪಲೋಕಾಯುಕ್ತರು ನಡೆಸಿದ ವಿಚಾರಣಾ ಪ್ರಕರಣಗಳ ಮಾಹಿತಿ
ನಗರದ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿ ಉಪಲೋಕಾಯುಕ್ತರು ನಡೆಸಿದ  ಇಲಾಖಾವಾರು ವಿಚಾರಣಾ ಪ್ರಕರಣಗಳ ಮಾಹಿತಿ ಈ ಕೆಳಕಂಡಂತಿದೆ.
ಗುಬ್ಬಿ ತಾಲೂಕಿನ ಕಂದಾಯ ಇಲಾಖೆಯ - 6, ನಗರಸಭೆ -2, ತಾ.ಪಂ. -4, ಪೊಲೀಸ್ ಇಲಾಖೆ -7, ನೋಂದಾವಣಿ ಇಲಾಖೆ -1, ಡಿ.ಎಸ್.ಡಬ್ಲ್ಯೂ.ಓ., ಡಾ.ಅಂಬೇಡ್ಕರ್ (ಎಸ್.ಸಿ.ಎಸ್.ಟಿ.) -1, ಇ.ಇ.ಪಿ.ಆರ್.ಇ.ಡಿ.-1, ಬೆಸ್ಕಾಂ -1, ಆರ್.ಎಫ್.ಓ. -1, ಡಿ.ಡಿ.ಎಲ್.ಆರ್.- 1, ಹೇಮಾವತಿ 1, ಶಿಕ್ಷಣ ಇಲಾಖೆ ಪಿ.ಯು.  4 ಸೇರಿದಂತೆ ಒಟ್ಟು 30 ಪ್ರಕರಣಗಳು ವಿಚಾರಣೆಯನ್ನು ಮಾನ್ಯ ಉಪಲೋಕಾಯುಕ್ತರು ನಡೆಸಿದರು.
ಕುಣಿಗಲ್ ತಾಲೂಕಿನ ಕಂದಾಯ ಇಲಾಖೆಯ - 23, ನಗರಸಭೆ -3, ತಾ.ಪಂ. -7, ಸಿ.ಡಿ.ಪಿ.ಓ.  1, ಪೊಲೀಸ್ ಇಲಾಖೆ -5, ಕೋ-ಆಪರೇಟೀವ್-2, ಪಿ.ಡಬ್ಲ್ಯೂಡಿ.-1, ಅಬಕಾರಿ 1, ಶಿಕ್ಷಣ ಇಲಾಖೆ ಪಿ.ಯು.  1, ಎಲ್.ಎ.ಕ್ಯೂ. 1, ಡಿ.ವಿ.ಎಸ್.- 1 ಸೇರಿದಂತೆ ಒಟ್ಟು 46 ಪ್ರಕರಣಗಳು ವಿಚಾರಣೆಯನ್ನು ಉಪಲೋಕಾಯುಕ್ತರು ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement