ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಸಮಸ್ಯೆಗಳ ನಿವಾರಣೆಗಾಗಿ ಶಾಸಕರ ಪ್ರಾಮಾಣಿಕ ಯತ್ನ'

Srinivasa Murthy VN
Updated On : 29 Aug 2013, 12:16 pm

ಪಾವಗಡ: ಸಮಸ್ಯೆಗಳ ನಿವಾರಣೆಗಾಗಿ ಹಾಗೂ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಶ್ರಮಿಸಿದ್ದಾರೆ ಎಂದು ಸ್ವಾಮಿ ವಿವೇಕಾನಂದ ಅಂಗವಿಕಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುಧೀಂದ್ರಕುಮಾರ್ ಸ್ಮರಿಸಿದರು.
ಅವರು ತಾಲೂಕು ಪಂಚಾಯಿತಿ ಮತ್ತು ಸ್ವಾಮಿ ವಿವೇಕಾನಂದ ಅಂಗವಿಲಕರ ಒಕ್ಕೂಟದ ವತಿಯಿಂದ ಬುಧವಾರ ಪಟ್ಟಣದ ತಾಪಂ ಆವರಣದಲ್ಲಿ ಏರ್ಪಡಿಸಿದ್ದ ವಿವಿಧ ಯೋಜನೆ ಅಡಿಯ ಸೌಲಭ್ಯ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಾಸಕರು ಅಂಗವಿಕಲರ ಸಮಸ್ಯೆ ನಿವಾರಣೆಗೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಪ್ರತಿ ಹಂತದಲ್ಲಿಯೂ ವಿಕಲಾಂಗರಿಗೆ ನೆರವಾಗಿ ಸಲಹೆ, ಸಹಕಾರ ನೀಡಿದ್ದಾರೆ ಎಂದು ಶಾಸಕರನ್ನು ಕೊಂಡಾಡಿದರು. ತಾಪಂ ಸದಸ್ಯರು ಸೇರಿದಂತೆ ತಾಪಂ ಇಒ ರಂಗನಾಥ್ ಅವರು ಸಮಸ್ಯೆಗೆ ಸ್ಪಂದಿಸಿ ಒಕ್ಕೂಟಕ್ಕೆ ಅನೇಕ  ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಅವರನ್ನು ಒಕ್ಕೂಟ ಎಂದಿಗೂ ಮರೆಯುವಂತಿಲ್ಲ. ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಒಕ್ಕೂಟದ ಪರವಾಗಿ ಇಒ ರಂಗನಾಥ್ ಅವರನ್ನು ಅಭಿನಂದಿಸಿದರು.

ಬೋಧಕರ ಸಂಘ
ತುಮಕೂರು: ಕುಣಿಗಲ್ ತಾಲೂಕಿನ ಪ್ರೌಢಶಾಲಾ  ಗಣಿತ ಬೋಧಕರ ಸಂಘವನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಿ. ಕೃಷ್ಣರವರ ಉಪಸ್ಥಿತಿಯಲ್ಲಿ ಪುನರ್ ರಚಿಸಲಾಯಿತು. ಸಂಘದ ಈ ಕೆಳಗಿನ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಜಿ.ಎನ್. ಮಂಜುನಾಥ್ (ಅಧ್ಯಕ್ಷರು), ವಿ. ಸುಭಾಷಿಣಿ (ಗೌರವಾಧ್ಯಕ್ಷರು), ಕೆ.ಜೆ. ಪ್ರಕಾಶ್ ಮೂರ್ತಿ  (ಕಾರ್ಯದರ್ಶಿ), ಎಸ್.ವಿ.  ವಿಜಯಕುಮಾರಿ (ಸಹಕಾರ್ಯದರ್ಶಿ), ಸೋಮಶೇಖರ್ (ಖಜಾಂಚಿ)ಇವರೊಂದಿಗೆ ಸರ್ವಾನುಮತದಿಂದ ಆಯ್ಕೆಯಾದ ಹೋಬಳಿವಾರು ಪ್ರತಿನಿಗಳೆಂದರೆ ಗಣೇಶ್ (ಕೊತ್ತಗೆರೆ), ಬಿ.ವಿ. ನಾಗರಾಜ್ (ಅಮೃತೂರು), ಮಮತ (ಹುಲಿಯೂರುದುರ್ಗ), ಹೆಚ್.ಬಿ. ಜ್ಞಾನೇಶ್ (ಹುತ್ರಿದುರ್ಗ), ರುಕ್ಸಾನ ಬೇಗಂ (ಕಸಬ) ಹಾಗೂ ಹರೀಶ್ (ಯಡಿಯೂರು).

ಅರ್ಜಿ ಆಹ್ವಾನ
2013-14ನೇ  ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಅಡ್‌ಹಾಕ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ವಿದ್ಯಾರ್ಹತೆ ಹೊಂದಿ ಇಚ್ಚೆಯುಳ್ಳ ಅಭ್ಯರ್ಥಿಗಳು ಆ. 31 ರೊಳಗೆ ನಿಗದಿತ  ನಮೂನೆಯಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ವಿವರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಸಮಯಕ್ಕೆ ಸರಿಯಾಗಿ ಬಾರದ ಬಸ್: 7 ಗಂಟೆಗೂ ಅಧಿಕ ಕಾಲ ರಸ್ತೆ ತಡೆ, ಪ್ರತಿಭಟನೆ
ಗುಬ್ಬಿ: ಸಮಯಕ್ಕೆ ಸರಿಯಾಗಿ ಬಸ್ ಬಾರದಿದ್ದಕ್ಕೆ ಏಳು ತಾಸಿಗೂ ಅಧಿಕವಾಗಿ ರಸ್ತೆ ತಡೆ ನಡೆಸಿರುವ ಘಟನೆ ತಾಲೂಕಿನ ಕಡಬ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಲೂಕು ಎ.ಬಿ.ವಿ.ಪಿ ಘಟಕ ಮತ್ತು  ಜಯಕರ್ನಾಟಕ ಸಂಘದ ಜೊತೆಗೂಡಿ ಬುಧವಾರ ಬೆಳಿಗ್ಗೆ ಸುಮಾರು 6.30 ರಿಂದ ಪ್ರತಿಭಟನೆ ಪ್ರಾರಂಭಿಸಿದ ವಿದ್ಯಾರ್ಥಿಗಳು ಹಾಗೂ ಜಯಕರ್ನಾಟಕ ಸಂಘದ ಕಾರ್ಯಕರ್ತರು ಮಧ್ಯಾಹ್ನ 1 ಗಂಟೆವರೆಗೂ ರಸ್ತೆ ತಡೆ ನಡೆಸಿದರು.  
ಗ್ರಾಮೀಣ ಪ್ರದೇಶದಿಂದ ಶಾಲಾ ಕಾಲೇಜುಗಳಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಬಸ್‌ಗಳ ಸಂಖ್ಯೆ ಮಾತ್ರ ದಿನೇ ದಿನೇ ಕೆಲವು ತಾಂತ್ರಿಕ ದೋಷಗಳನ್ನು ನೀಡಿ ಕಡಿಮೆಯಾಗುತ್ತಿವೆ. ಜೊತೆಗೆ ಬೆಳಗಿನ ವೇಳೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಹೆಚ್ಚಿರುತ್ತದೆ. ಬಸ್‌ಗಳು ನಮ್ಮ ಊರಿನ ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ಭರ್ತಿಯಾಗಿರುತ್ತದೆ. ಆದ ಕಾರಣ ನಮ್ಮ ನಿಲ್ದಾಣದಲ್ಲಿ ಮೈಸೂರು ಮಾರ್ಗದಿಂದ ಆಗಮಿಸುವ ಯಾವುದೇ ವೇಗದೂತ ಬಸ್‌ಗಳನ್ನು ನಿಲ್ಲಿಸುವುದಿಲ್ಲ ಎಂದು ದೂರಿದರು.  ಪಾಠ ಪ್ರವಚನಗಳಿಂದ ವಂಚಿತವಾಗುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಹಾಗೂ ಸಂಜೆ ವೇಳೆಯಲ್ಲಿ ಸಹ ವಿದ್ಯಾರ್ಥಿಗಳನ್ನು ಬಸ್‌ಗೆ ಹತ್ತಿಸುವುದಿಲ್ಲ ಎಂದು ಪ್ರತಿಭಟನಾ ನಿರತರು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು. ಸೂಕ್ತ ಕ್ರಮವನ್ನು ಶೀಘ್ರವಾಗಿ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಶ್ವ ವಿಜಯ ವಿದ್ಯಾ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
ತುರುವೇಕೆರೆ: ಇಲ್ಲಿಯ ವಿಶ್ವ ವಿಜಯ ವಿದ್ಯಾ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.  ಕೃಷ್ಣನ ವೇಷವನ್ನು ಪುಟಾಣಿ ಮಕ್ಕಳು ಧರಿಸಿ ಸಂಭ್ರಮಿಸಿದರು. ರಾಧೆ, ಕೃಷ್ಣ, ರುಕ್ಮಿಣಿಯ ವೇಷ ತೊಟ್ಟ ಮಕ್ಕಳನ್ನು ನೋಡುವುದೇ ಖುಷಿ ತರಿಸಿತ್ತು. ಶಾಲಾ ಆಡಳಿತ ಮಂಡಲಿಯ ಅಧ್ಯಕ್ಷೆ ಶೋಭಾ, ಮಂಜುಳಾ, ಉಷಾಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಲ್ಲಿ ದೇಶ ಭಕ್ತಿ, ದೇಶದ ಸಂಸ್ಕೃತಿಯನ್ನು ತುಂಬುವ ಕಾಯಕ ಮಾಡಬೇಕಿದೆ. ವಿದೇಶೀ ವ್ಯಾಮೋಹವನ್ನು ದೂರ ಮಾಡುವುದು ಅನಿವಾರ್ಯವಾಗಿದೆ. ದೇಶದ ಸಂಸ್ಕೃತಿಯನ್ನು ಸಾರುವ ಹಬ್ಬ ಹರಿದಿನಗಳನ್ನು ಚಿಕ್ಕಂದಿನಲ್ಲೇ ವಿದ್ಯಾರ್ಥಿಗಳಿಗೆ ಪರಿಚಯ ಮಾಡಬೇಕು ಎಂದು ಮುಖ್ಯೋಪಧ್ಯಾಯಿನಿ ವಿಜಯ ವಿಶ್ವೇಶ್ವರಯ್ಯ ಹೇಳಿದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಪಾವಗಡ: ಶ್ರೀಕೃಷ್ಣ ಜನ್ಮಷ್ಟಾಮಿ ಅಂಗವಾಗಿ ಯಾದವ ಕುಲ ಬಾಂಧವರು ಹಾಗೂ ಸಾರ್ವಜನಿಕರು ವಿವಿಧ ವೇಷ ಭೂಷಣಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಚಾರಣೆ ಆಚರಿಸಿದರು. ಚಿಕ್ಕಮಕ್ಕಳು ವಿವಿಧ ರೀತಿಯ ಬಾಲಕೃಷ್ಣನ ವೇಷಭೂಷಣಗಳನ್ನು ಧರಿಸಿ ಭಾಗವಹಿಸಿದ್ದರು. ನಂತರ ವಿವಿಧ ರೀತಿಯ ಕಲೆ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಪಟ್ಟಣದಲ್ಲಿ ಶ್ರೀಕೃಷ್ಣನನ್ನು ಮೆರವಣಿಗೆ ಮಾಡಿದರು.

ಸಂಭ್ರಮದ ಕೃಷ್ಣಜನ್ಮಾಷ್ಟಮಿ
ಹುಳಿಯಾರು: ಕೃಷ್ಟಜನ್ಮಾಷ್ಟಮಿಯನ್ನು ಹುಳಿಯಾರಿನ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು.ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗೀತಕ್ಕ ಅವರಿಂದ ಸಾರ್ವಜನಿಕರಿಗೆ ವಿಶೇಷ ಉಪನ್ಯಾಸ ನಡೆಯಿತು. ಸಮೀಪದ ಜೋಡಿ ತಿರುಮಲಾಪುರದಲ್ಲಿ  ಕೃಷ್ಟ ಜನ್ಮಾಷ್ಟಮಿ ಅಂಗವಾಗಿ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಅಲಂಕಾರ ಸಹಿತ ಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.  ವಿ.ಟಿ.ಶ್ರೀನಿವಾಸಯ್ಯ, ಸುಬ್ಬುಕೃಷ್ಣ, ರಾಘವೇಂದ್ರ, ನಂಜುಂಡರಾವ್ ಮುಂತಾದವರಿದ್ದರು.

ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ
ತುಮಕೂರು: ತುರುವೇಕೆರೆ ತಾಲೂಕಿನ ಗೋಣಿತುಮಕೂರು ಗ್ರಾಮಪಂಚಾಯತಿ ವ್ಯಾಪ್ತಿಯ ಬಡಗರಹಳ್ಳಿ  ಅಂಗನವಾಡಿ ಕೇಂದ್ರಕ್ಕೆ ಸಾಮಾನ್ಯ ವರ್ಗದ ಅಂಗನವಾಡಿ ಸಹಾಯಕಿ ಹುದ್ದೆಗೆ ಸಾಮಾನ್ಯ ವರ್ಗದ ಅರ್ಹ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.16  ಕಡೆ ದಿನ. ಆಸಕ್ತರು ಹೆಚ್ಚಿನ  ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೈ.ಟಿ. ರಸ್ತೆ, ಗಣಪತಿ ಪೆಂಡಾಲ್ ಪಕ್ಕ, ತುರುವೇಕೆರೆ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement