ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಿಕ್ಷೆ ಬೇಡಿ ಕ್ರೀಡಾಕೂಟ ಆಯೋಜನೆ ಸಲ್ಲ

Srinivasa Murthy VN
Updated On : 29 Aug 2013, 11:50 am

ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅಭಿಮತ ಟಿ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಆ.29
ಭಿಕ್ಷೆ ಬೇಡಿ ಕ್ರೀಡಾಕೂಟಗಳನ್ನು ನಡೆಸುವ  ಸ್ಥಿತಿಗೆ ಶಿಕ್ಷಣ ಇಲಾಖೆ ಬಂದಿರುವುದು ದುರ್ದೈವದ ಸಂಗತಿ ಎಂದು ವಿಧಾನಪರಿಷತ್ ಸದಸ್ಯಾರದ ವೈ.ಎ.ನಾರಾಯಣಸ್ವಾಮಿ ವಿಷಾದಿಸಿದರು.
ಅವರು ಗುರುವಾರ ಪಟ್ಟಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದ ಉದ್ಘಾಟನೆ ನಂತರ ರೋಟರಿ ಆಂಗ್ಲ ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಸರ್ಕಾರದಲ್ಲಿ ಹಣವಿದ್ದರು ಕ್ರೀಡಾ ಚಟುವಟಕೆ ಬಗ್ಗೆ ಅಸಡ್ಡೆ ತಾಳಿದೆ. ಅದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಪದಕ ಗೆಲ್ಲುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಶಾಲಾಮಟ್ಟದಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ತುಂಬಬೇಕು ಎಂದರು. ಸರ್ಕಾರ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಈಗಿರುವ 70 ಮಕ್ಕಳಿಗೆ ಒಬ್ಬ ಶಿಕ್ಷಕ ಅನುಪಾತವನ್ನು ತೆಗೆದು, ಪ್ರಾಥಮಿಕ ಹಂತದಲ್ಲಿ 25 ಮಕ್ಕಳಿಗೆ ಒಬ್ಬ ಶಿಕ್ಷಕ, ಪ್ರೌಢಶಾಲಾ ಮಟ್ಟದಲ್ಲಿ 40 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಅನುಪಾತವನ್ನು ನಿಗದಿ ಮಾಡಬೇಕು. ಈ
ಅನುಪಾತ ನಿಗದಿಯಾಗುವತನಕ ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ತಡೆಹಿಡಿಯಬೇಕು. ಸರ್ಕಾರ ತನ್ನ ಶಾಲೆಗಳನ್ನು ಉಳಿಸಲು ಗಂಭೀರ ಚಿಂತನೆ ಅಗತ್ಯವಿದೆ, ಈ ನಿಟ್ಟಿನಲ್ಲಿ ವಿಷಯವಾರು ಶಿಕ್ಷಕರ ನೇಮಕವಾಗಬೇಕು.ಎಲ್ಲಾ ಕಡೆ ವಿಷಯವಾರು ಶಿಕ್ಷಕರಿಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.ಇದಲ್ಲದೆ ಪ್ರತಿಶಾಲೆಗೂ ದೈಹಿಕ ಮತ್ತು ಕಂಪ್ಯೂಟರ್ ಶಿಕ್ಷಕರ ಕಾಯಂ ನೇಮಕಾತಿಯಾಗಿಲ್ಲ. ಈಗ್ಗೆ ಮೂರು ವರ್ಷಗಳ ಹಿಂದೆ ಸರ್ಕಾರ ಪ್ರತಿಯೊಂದು ಶಾಲೆಗೂ ಕಂಪ್ಯೂಟರ್ ಸರಬರಾಜು ಮಾಡಲು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡದ್ದು, ಇದುವರೆಗೂ ಕಂಪ್ಯೂಟರ್ ಸರಬರಾಜಾಗಿಲ್ಲ. ಇದಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿತನಿಖೆ ಮಾಡುವಂತೆ ಒತ್ತಾಯಿಸಿದರು.
ಹೊರಗಿಡಿ: ಶಿಕ್ಷಕರನ್ನು ಪಾಠ ಮಾಡುವುದಕ್ಕೆ ಬಿಡಿ, ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆ ವ್ಯಾಪ್ತಿಯಿಂದ ಹೊರಗಿಡಿ. ಸರ್ಕಾರ ಬಂದು 3 ತಿಂಗಳಾದರು ಸೈಕಲ್ ಬ್ಗಗೆ ಪ್ರಸ್ತಾಪವಿಲ್ಲ, ಅನುದಾನಿತ ಶಾಲೆಗಳ
ಮಕ್ಕಳಿಗೂ ಸಮವಸ್ತ್ರ ನೀಡುವುದು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮತ್ತು ವರ್ಗಾವಣೆ, ಬಡ್ತಿ  ಪ್ರಕ್ರಿಯೆಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಿ. ಪದವಿ ಪೂರ್ವ ಕಾಲೇಜುಗಳ ಮೂಲಭೂತ ಸೌಲಭ್ಯಗಳನ್ನು ವಿಶೇಷವಾಗಿ ಗಮನಿಸುವುದಲ್ಲದೆ ಬಿಸಿಯೂಟ ಯೋಜನೆಯನ್ನು ಪಿಯು ವಿದ್ಯಾರ್ಥಿಗಳಿಗು ವಿಸ್ತರಿಸಲು ಒತ್ತಾಯಿಸಿದರು.
ಆಗ್ರಹ: ತುಮಕೂರು-ಅರಸೀಕೆರೆ ರಸ್ತೆ ಚತುಷ್ಪಥ ರಸ್ತೆಯಾಗಲಿ- ಬೆಳೆಯತ್ತಿರುವ ತುಮಕೂರು ಭವಿಷ್ಯದಲ್ಲಿ ಬೆಂಗಳೂರಿನ ಉಪನಗರವಾಗುವ ಎಲ್ಲಾ ಲಕ್ಷಣಗಳಿದ್ದು, ತುಮಕೂರು-ಅರಸೀಕೆರೆ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡಲು ಅವರು ಆಗ್ರಹಿಸಿದರು.ಇದರಿಂದ ಹಿಂದುಳಿದಿರುವ ಈ ಭಾಗದ ಅಭಿವೃದ್ಧಿಗೆ ಪೂರಕವಾತಾವರಣ ನಿರ್ಮಾಣವಾಗುತ್ತದೆ. ಈಗಿರುವ ರಸ್ತೆಯಲ್ಲಿ ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಲು 4ಗಂಟೆಗಳ ಅಧಿಯನ್ನು ಸವೆಸಬೇಕಾಗುತ್ತದೆ. ಈ ಭಾಗದ ಬಹಳ ದಿನಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಆಂಧ್ರ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿಗೆ ಬರಬೇಕು. ಯೋಜನೆಗಳಿಗೆ ಹಣತೆಗೆದಿರಿಸಿದರೆ ಸಾಲದು, ಯೋಜನೆಗಳನ್ನು ರೂಪಿಸಬೇಕು.
ಎಪಿಎಲ್ ಪಡಿತರದಾರರ ಅಕ್ಕಿಯನ್ನು ಕಿತ್ತುಕೊಂಡು ಬಿಪಿಎಲ್ ಕಾರ್ಡ್‌ದಾರರಿಗೆ ರು. ಕೆ.ಜಿ.ಅಕ್ಕಿ ವಿತರಿಸುವುದು ನ್ಯಾಯವಾದ ತೀರ್ಮಾನವಲ್ಲ. ಅವರೇನು ಪಾಪ ಮಾಡಿದ್ದಾರೆ ಎಂದು ಸಕಾರವನ್ನು ತರಾಟೆಗೆ ತೆಗೆದು ಕೊಂಡರು. ಕೆಪಿಎಸ್ಸಿ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪು ಯಾರು ಮಾಡಿದ್ದರು ತಪ್ಪೇ, ತನಿಖೆ ನಡೆಸಿ  ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಿ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಮಿಲಿಟರಿ ಶಿವಣ್ಣ, ಡಾ. ಸಿ.ಎಂ.ಸುರೇಶ್, ಎಂ.ಎಲ್. ಮಲ್ಲಿಕಾರ್ಜುನಯ್ಯ,ಮುಂತಾದವರಿದ್ದರು.

ಮಾಧುಸ್ವಾಮಿ ಶಾಸಕರಾಗಬೇಕಿತ್ತು
ಚಿಕ್ಕನಾಯಕಕನಹಳ್ಳಿ:
ಚಿ.ನಾ.ಹಳ್ಳಿ ಅತಿ ಹಿಂದುಳಿದ ತಾಲೂಕೆಂದು ಪರಿಗಣಿಸಿದ್ದು, ಇಲ್ಲಿನ ಶೈಕ್ಷಣಿಕ ಗುಣ ಮಟ್ಟ ಹೆಚ್ಚಿಸಲು ಮತ್ತು ಬಡವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವೃತ್ತಿಶಿಕ್ಷಣ ಕೋರ್ಸ್‌ಗಳನ್ನು ಮಂಜೂರು ಮಾಡಿಸುವಂತೆ ಎಬಿವಿವಿಪಿ ಕಾರ್ಯಕರ್ತರು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿಯವರಿಗೆ ಬೇಡಿಕೆಯಿತ್ತರು.
ನಂತರ ಮಾತನಾಡಿದ ವೈಎಎನ್ ಅವರು ನಿಮ್ಮ ಶಾಸಕರಲ್ಲಿ ಕೇಳಿ, ಕಾಲೇಜುಗಳನ್ನು ಮಂಜೂರು ಮಾಡಿಸಿಕೊಳ್ಳಿ ಎಂದು ಚಟಾಗಿ ಹಾರಿಸಿದರು.  ಇಂತಹ ಸಂದರ್ಭದಲ್ಲಿ ಮಾಧುಸ್ವಾಮಿಯವರು ಶಾಸಕರಾಗಿರಬೇಕಿತ್ತು. ತಾಲೂಕು ಅಭಿವೃದ್ಧಿಯಲ್ಲಿ ಮಂಚೂಣಿಗೆ ಬರುತ್ತಿತ್ತು. ಕಾರಣ ಸಿದ್ದರಾಮಯ್ಯ, ರಮೇಶ್‌ಕುಮಾರ್, ರೈತಸಂಘದ ಪುಟ್ಟಣ್ಣಯ್ಯ, ಮುಂತಾದವರು ಸಮಾನ ಮನಸ್ಕರು. ಅಭಿವೃದ್ಧಿ ವಿಷಯ ಬಂದಾಗ ಪಕ್ಷಭೇದ ಮರೆತು ಚರ್ಚೆಗಿಳಿಯುತ್ತಿದ್ದರು ಎಂದರು.

ಲಕ್ಷ ರು.ಗಳ ವೆಚ್ಚದಲ್ಲಿ ಕಾಲೇಜಿಗೆ ಕುಡಿವ ನೀರಿನ ಸೌಲಭ್ಯ: ವೈಎಎನ್
ಚಿಕ್ಕನಾಯಕನಹಳ್ಳಿ:
ಇನ್ನೆರಡು ತಿಂಗಳಲ್ಲಿ 1 ಲಕ್ಷ ರು.ಗಳ ವೆಚ್ಚದಲ್ಲಿ ಕಾಲೇಜಿಗೆ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ಸ್ವಂತ ವೆಚ್ಚದಲ್ಲಿ ಅಳವಡಿಸುವುದಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ತಿಳಿಸಿದರು.
ಗುರುವಾರ  ಅವರು ಪಟ್ಟಣದಲ್ಲಿ ನಡೆದ ಜಿಲ್ಲಾ ಕಬ್ಬಡ್ಡಿ ಉದ್ಘಾಟನೆಗಾಗಿ ಆಗಮಿಸಿದ್ದ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅವರನ್ನು ಕರೆದೊಯ್ದು ಅಲ್ಲಿನ ಕುಂದುಕೊರತೆಗಳ ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳಾದ ನಾವು ಪ್ರಜೆಗಳಿಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನಾದರು ಒದಗಿಸ ಬೇಕು. ಅದು ಸಾಧ್ಯವಿಲ್ಲವಾದರೆ ನಾವು ಜನಪ್ರತಿನಿಧಿಗಳಾಗಿದ್ದು ಏನು ಪ್ರಯೋಜನ. ಈ ಸಮಸ್ಯೆಯನ್ನು ನಾನು ಸರ್ಕಾರದ ಕಡೆಯಿಂದ ಮಾಡಿಸುವ ಬಗ್ಗೆ ಭರವಸೆ ನೀಡಲಾರೆ. ನಾನೇ ನನ್ನ ಸ್ವಂತ ಹಣದಿಂದ ಹನ್ನೆರಡು ತಿಂಗಳಲ್ಲಿ 1 ಲಕ್ಷ ರು.ಗಳ ವೆಚ್ಚದಲ್ಲಿ  ನೀರಿನ ಸೌಲಭ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ವಿಷಯವಾರು ಉಪನ್ಯಾಸಕರ ಕೊರತೆ, ಪ್ರಯೋಗಾಲಯದಲ್ಲಿನ  ಸಿಬ್ಬಂದಿ ಕೊರತೆ ಮತ್ತು ಅಸುರಕ್ಷತೆ, ಪುಸ್ತಕಗಳೇ ಇಲ್ಲದ ಗ್ರಂಥಾಲಯ, ಸ್ವಚ್ಛತೆ ಕಾಣದ ಕಾಲೇಜು ಪರಿಸರ, ಮುರಿದು ಹೋದ ಕಿಟಕಿ ಬಾಗಿಲು , ನೀರಿಲ್ಲದ ಶೌಚಾಲಯ ವ್ಯವಸ್ಥೆ ಮುಂತಾದವುಗಳ ಬಗ್ಗೆ ವಿದ್ಯಾರ್ಥಿಗಳು ದೂರಿದರು. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು. ನನ್ನ ಕ್ಷೇತ್ರದಲ್ಲಿ 650 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಅವುಗಳಲ್ಲಿ ಬಹುತೇಕ ಕಾಲೇಜುಗಳ ಪ್ರೌಢಶಾಲೆಗಳ ನೆರಳಿನಲ್ಲಿ ಬದುಕುತ್ತಿವೆ. ನಿಮಗೆ ಕಟ್ಟಡ ಮತ್ತು ಮೈದಾನವಾದರೂ ಇದೆ ಎಂದರು. ಹಾಗೆಂದ ಮಾತ್ರಕ್ಕೆ ಕೊರತೆಗಳ ಬಗ್ಗೆ ಉದಾಸೀತ ತೋರುವುದಿಲ್ಲ ಎಂಬ ಮಾತನ್ನು ಸೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement